ಸಾರಾಂಶ
ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದಿದ್ದರಿಂದ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದಿದ್ದರಿಂದ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರ ಮನವೊಲಿಕೆಗಾಗಿ ಬೆಂಗಳೂರಿಗೆ ಕರೆಸಿಕೊಂಡಿದ್ದ ‘ಕೈ’ ನಾಯಕರು, ಅ.30ರವರೆಗೆ ಬೆಂಗಳೂರಿನಿಂದ ಹೋಗದಂತೆ ತಾಕೀತು ಮಾಡಿದ್ದಾರೆ. ಹೀಗಾಗಿ, ಖಾದ್ರಿಯವರು ಬೆಂಗಳೂರಿನಲ್ಲೇ ಉಳಿದುಕೊಂಡಿದ್ದು, ಅ.30ರಂದು ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದು, ಅಲ್ಲಿಂದ ನೇರವಾಗಿ ಚುನಾವಣಾಧಿಕಾರಿಗಳ ಬಳಿ ತೆರಳಿ ನಾಮಪತ್ರ ಹಿಂಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಅವರು ಬಂಡಾಯ ಸಾರಿದ್ದರು. ನಾಮಪತ್ರ ಸಲ್ಲಿಕೆ ಗಡುವಿಗೆ 10 ನಿಮಿಷಗಳಿರುವಾಗ, ಕೊನೆ ಗಳಿಗೆಯಲ್ಲಿ ಬೈಕ್‌ನಲ್ಲಿ ಆಗಮಿಸಿ, ಬಳಿಕ ಓಡೋಡಿ ಬಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಖಾದ್ರಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಬಳಿಕ, ಜಮೀರ್ ಅಹ್ಮದ್ ಅವರು ಖಾದ್ರಿ ಅವರನ್ನು ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಬಳಿ ಕರೆದೊಯ್ದಿದ್ದರು. ಅವರು ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ಖಾದ್ರಿ ನಾಮಪತ್ರ ಹಿಂಪಡೆಯಲು ಒಪ್ಪಿಕೊಂಡಿದ್ದರು.
ಆದರೆ, ಖಾದ್ರಿಯವರನ್ನು ಅ.30ರ ವರೆಗೆ ಬೆಂಗಳೂರಿನಲ್ಲೇ ಉಳಿಸಿಕೊಳ್ಳಲಾಗಿದೆ. ಒಂದು ವೇಳೆ ಕ್ಷೇತ್ರಕ್ಕೆ ಬಂದರೆ ಅವರ ಬೆಂಬಲಿಗರು ನಾಮಪತ್ರ ವಾಪಸ್ ಪಡೆಯದಂತೆ ಒತ್ತಡ ಹೇರುವ ಸಾಧ್ಯತೆ ಇರುವುದರಿಂದ ಬೆಂಗಳೂರಲ್ಲೇ ಉಳಿಯುವಂತೆ ತಾಕೀತು ಮಾಡಿದ್ದಾರೆ. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಖಾದ್ರಿ, ತಮ್ಮ ಬೆಂಬಲಿಗರನ್ನು ಬೆಂಗಳೂರಿಗೇ ಕರೆಸುವುದಾಗಿ ಹೇಳಿದ್ದಾರೆ. ಇದಕ್ಕೆ ಒಪ್ಪದ ಡಿಕೆಶಿ, ಇಲ್ಲಿಗೆ ಕರೆಸುವುದು ಬೇಡ, ನಾನೇ ಶಿಗ್ಗಾಂವಿಗೆ ಬಂದು ನಿಮ್ಮ ಬೆಂಬಲಿಗರು, ಕಾರ್ಯಕರ್ತರನ್ನು ಭೇಟಿಯಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಅನಿವಾರ್ಯವಾಗಿ ರಾಜಧಾನಿಯಲ್ಲೇ ಅವರು ಉಳಿದುಕೊಂಡಿದ್ದಾರೆ.ಅ.30ರಂದು ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದು, ಅಲ್ಲಿಂದ ನೇರವಾಗಿ ಚುನಾವಣಾಧಿಕಾರಿಗಳ ಬಳಿ ತೆರಳಿ ನಾಮಪತ್ರ ಹಿಂಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.