ಸಾರಾಂಶ
ಹೊನ್ನಾಳಿ : ವಿದ್ಯಾರ್ಥಿಗಳು ಕಲಿಕಾ ಶಕ್ತಿ ಮತ್ತು ಅಗತ್ಯಗಳನ್ನು ತಿಳಿದು ಅವರ ಯಶಸ್ಸು ಖಾತ್ರಿಪಡಿಸಿಕೊಳ್ಳಲು ಬೆಂಗಳೂರಿನ ತಂತ್ರಜ್ಞಾನ ಸಂಸ್ಥೆ ಹೊರತಂದಿರುವ ಕ್ವಿಜ್ಲಿ ಆ್ಯಪ್ ಬಹು ಉಪಕಾರಿಯಾಗಿದೆ ಎಂದು ಬಿಇಒ ಕೆ.ಟಿ.ನಿಂಗಪ್ಪ ಹೇಳಿದರು.
ಎಚ್.ಕಡದಕಟ್ಟೆ ಸಮೀಪದ ಸಾಯಿ ಗುರುಕುಲ ವಸತಿ ಶಾಲೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ನೇತೃತ್ವದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದ ಸುಮಾರು 200 ಶಾಲೆಗಳಲ್ಲಿ ಈ ಆ್ಯಪ್ ಅಳವಡಿಸಿ ಉತ್ತಮ ಫಲಿತಾಂಶ ಪಡೆಯಲಾಗುತ್ತಿದೆ. ಇದೀಗ ಚನ್ನಗಿರಿಯಲ್ಲಿ ಕೂಡ ಜಾರಿ ಮಾಡಲಾಗುತ್ತಿದೆ ಎಂದರು.ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಒಟ್ಟು 64 ಪ್ರೌಢಶಾಲೆಗಳಲ್ಲಿ ಈ ಆ್ಯಪ್ ಸೌಲಭ್ಯ ಒದಗಿಸಲು ಶಾಸಕರ ಸಹಕಾರದಿಂದ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಅವಳಿ ತಾಲೂಕಿನಲ್ಲಿ ಈ ಬಾರಿ 3267 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದಾರೆ. ವಿಶೇಷವಾಗಿ ಈ ಕ್ವಿಜ್ಲಿ ಆ್ಯಪ್‌ನಿಂದ ವಿದ್ಯಾರ್ಥಿಗಳ ಕಲಿಕಾಮಟ್ಟ ಸುಧಾರಿಸುವ ಜೊತೆಗೆ ಶಾಲಾ ಫಲಿತಾಂಶಗಳನ್ನು ಉತ್ತಮಪಡಿಸಲು ಉತ್ತಮ ತಂತ್ರಜ್ಞಾನವಾಗಿದೆ ಎಂದು ತಿಳಿಸಿದರು.
ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಈ ಆ್ಯಪ್ ಚನ್ನಗಿರಿ ಸೇರಿದಂತೆ ಬೇರೆ ಬೇರೆ ತಾಲೂಕುಗಳ ಶಾಲೆಗಳಲ್ಲಿ ಅಳವಡಿಸಲಾಗಿದೆ. ಅಲ್ಲಿನ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಈ ಹಿನ್ನೆಲೆ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳಲ್ಲಿ ಕೂಡ ಕ್ವಿಜ್ಲಿ ಆ್ಯಪ್ ತಂತ್ರಜ್ಞಾನ ಅವಳಡಿಸಲು ನಿರ್ಧರಿಸಲಾಗಿದೆ. ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಈ ಸೌಲಭ್ಯ ಅಳವಡಿಕೆಗೆ ಶಾಸಕರ ಅನುದಾನದಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದರು.ಎಸ್ಸೆಸ್ಸೆಲ್ಲಿ ಫಲಿತಾಂಶದಲ್ಲಿ ಈ ಬಾರಿ ಹೊನ್ನಾಳಿ ಕ್ಷೇತ್ರವು ದಾವಣಗೆರೆ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಬರುವಂತೆ ತಾಲೂಕಿನ ಬಿಇಒ ಸೇರಿದಂತೆ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಸಂಘಟಿತ ಶ್ರಮ ಹಾಕುವಂತೆ ಸೂಚನೆ ನೀಡಿದರು.
ಕ್ವಿಜ್ಲಿ ಸಂಸ್ಥೆಯ ಪ್ರತೀಕ್ ಪಟೇಲ್ ಅವರು ಆ್ಯಪ್ ಕಾರ್ಯಗಳು ಹಾಗೂ ಉಪಯೋಗಿಸುವ ವಿಧಾನಗಳು, ಪ್ರಯೋಜನಗಳ ಕುರಿತು ವಿವರಿಸಿದರು. ಕ್ಷೇತ್ರ ಸಂಯೋಜನಾಧಿಕಾರಿ ತಿಪ್ಪೇಶಪ್ಪ ಮಾತನಾಡಿದರು.ಸಂಸ್ಥೆಯ ಶ್ರೀಕಾಂತ್, ಉಜ್ವಲ್ ಹಾಗೂ ಸಾಯಿ ಗುರುಕುಲ ವಿದ್ಯಾಸಂಸ್ಥೆ ಕಾರ್ಯದರ್ಶಿ ಸೌಮ್ಯ ಪ್ರದೀಪ್ ಗೌಡ, ಪ್ರದೀಪ್ ಗೌಡ, ಡಿ.ಜಿ.ಸೋಮಪ್ಪ, ಡಿ.ಎಸ್.ಅರುಣ್, ದೊಡ್ಡೇರಿ ಜ್ಞಾನವಾಹಿನಿ ವಿದ್ಯಾಸಂಸ್ಥೆ ಮುಖ್ಯಸ್ಥ ರವಿಶಂಕರ್ ಮುಂತಾದವರು ಇದ್ದರು.