ಪರಿಣಿತ ಉಪನ್ಯಾಸಕರಿಂದ ಗುಣಮಟ್ಟದ ಶಿಕ್ಷಣ: ಭೋಜೇಗೌಡ

| Published : Nov 29 2024, 01:02 AM IST

ಸಾರಾಂಶ

ಚಿಕ್ಕಮಗಳೂರು, ಪರಿಣಿತ ಉಪನ್ಯಾಸಕ ವೃಂದದಿಂದ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಆಡಳಿತ ವ್ಯವಸ್ಥೆಯಲ್ಲಿ ಭವಿಷ್ಯ ರೂಪಿಸಲು ಸಜ್ಜಾಗಿರುವ ಎಐಟಿ ಕಾಲೇಜಿನ ವಿದ್ಯಾರ್ಥಿಗಳು ಭಾಗ್ಯವಂತರು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪರಿಣಿತ ಉಪನ್ಯಾಸಕ ವೃಂದದಿಂದ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಆಡಳಿತ ವ್ಯವಸ್ಥೆಯಲ್ಲಿ ಭವಿಷ್ಯ ರೂಪಿಸಲು ಸಜ್ಜಾಗಿರುವ ಎಐಟಿ ಕಾಲೇಜಿನ ವಿದ್ಯಾರ್ಥಿಗಳು ಭಾಗ್ಯವಂತರು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.

ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ಧ ಚುಂಚನೋತ್ಸವದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿ ಜೀವನ ಬಹಳಷ್ಟು ಅಪರೂಪ ವಾದುದು. ಕಳೆದ ಕ್ಷಣಗಳನ್ನು ಮರಳಿ ಪಡೆಯಲಾಗದು. ವಿದ್ಯಾರ್ಥಿ ಜೀವನದಲ್ಲಿ ಯುವಕ ಯುವತಿಯರು ತುಂಟಾಟದ ಜೊತೆಗೆ ವಿದ್ಯಾಭ್ಯಾಸದ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದುವ ಮೂಲಕ ಸಮಾಜಕ್ಕೆ ಮಾದರಿ ಪ್ರಜೆಗಳಾಗಬೇಕು ಎಂದರು.

ಸ್ವಾಸ್ಥ್ಯ ಸಮಾಜ ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ. ಇಂದಿನ ಯುವ ಸಮೂಹವೇ ದೇಶದ ಆಸ್ತಿಗಳಿದ್ದಂತೆ. ನಮ್ಮ ಪೂರ್ವಜರು ಕಟ್ಟಿ ಬೆಳೆಸಿದ ಸಂಸ್ಕೃತಿ, ಸಂಸ್ಕಾರ, ಜಾನಪದ ಸೊಗಡು, ಸಾಹಿತ್ಯದಿಂದ ನಿರ್ಮಾಣಗೊಂಡ ನಾಡನ್ನು ಉಳಿಸಬೇಕು ಎಂದು ಕಿವಿಮಾತು ಹೇಳಿದರು.ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯಿಂದ ಕುಟುಂಬ ಹಾಗೂ ಗುರು ಶಿಷ್ಯರ ಪರಸ್ಪರ ಸಂಬಂಧ ನಶಿಸುತ್ತಿದೆ. ಹಿಂದಿನ ಸಮಯದಲ್ಲಿ ಶಾಲಾ ಗುರುಗಳು ದಂಡಿಸಿ ಮಕ್ಕಳ ವಿದ್ಯಾಭ್ಯಾಸವನ್ನು ಚುರುಕು ಗೊಳಿಸುತ್ತಿದ್ದರು. ಪ್ರಸ್ತುತ ಕಾಲಮಾನಕ್ಕೆ ಎಲ್ಲವೂ ಬದಲಾವಣೆಗೊಳ್ಳುತ್ತಿದೆ ಎಂದ ಅವರು, ಪಾಲಕರು, ಗುರುಗಳಿಗೆ ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ್ ಮಾತನಾಡಿ, ವಿದ್ಯಾರ್ಥಿ ಬದುಕು ಅಮೂಲ್ಯವಾದುದು. ಕಲಿಕೆ ವೇಳೆ ಯಲ್ಲಿ ನಿರಂತರ ಅಭ್ಯಾಸಿಸಬೇಕು. ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮುಂದೆ ಸಾಗಬೇಕು. ಇದನ್ನು ಹೊರತಾಗಿ ಬೇಜವಾಬ್ದಾರಿತನ ಮೈಗೂಡಿಸಿಕೊಂಡರೆ ಜೀವನ ದುಸ್ತರವಾಗುವುದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಜಿ.ಎಂ. ಸತ್ಯನಾರಾಯಣ್, ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಅಧಿಕಾರಿ ಸಂಗರೆಡ್ಡಿ ಇದ್ದರು. 28 ಕೆಸಿಕೆಎಂ 2ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಏರ್ಪಡಿಸಿದ್ಧ ಚುಂಚನೋತ್ಸವದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಎಸ್.ಎಲ್‌. ಭೋಜೇಗೌಡ ಬಹುಮಾನ ವಿತರಿಸಿ ಮಾತನಾಡಿದರು. ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ್‌ ಇದ್ದರು.