ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ತೋವಿನಕೆರೆ ಗ್ರಾಮದ ಮೊದಲ ಸರ್ಕಾರಿ ಪಿ.ಎಮ್,ಜಿ ಶಾಲೆಯಲ್ಲಿ ಎಲ್.ಕೆ.ಜಿ ಯಿಂದ 8ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ, ಕಂಪ್ಯೂಟರ್ ಭೋದನೆಯೊಂದಿಗೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯುತಿರುವುದು ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ನಟರಾಜು ತಿಳಿಸಿದರು.ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ತೋವಿನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳನ್ನು ಸ್ವಾಗತಿಸಿ, ನಂತರ ಉಚಿತ ಪಠ್ಯ ಪುಸ್ತಕ ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರ ಹಲವು ಯೋಜನೆಗಳನ್ನು ತಂದಿದೆ, ಉಚಿತ ಹಾಗೂ ಕಡ್ಡಾಯ ಶಿಕ್ಷಣ, ಕ್ಷೀರ ಭಾಗ್ಯ, ಉಚಿತ ಪಠ್ಯ ಪುಸ್ತಕ ವಿತರಣೆ, ಕಂಪ್ಯೂಟರ್ ಶಿಕ್ಷಣ, ವಿದ್ಯಾರ್ಥಿ ವೇತನ ಸೇರಿ ಇನ್ನಿತರೆ ಯೋಜನೆಗಳನ್ನು ವಿದ್ಯಾರ್ಥಿಗಳು ಸದ್ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಶಾಲೆ ತೊರೆಯುವ ಮಕ್ಕಳ ಮೇಲೆ ನಿಗಾ ವಹಿಸಲು ಶಾಲಾ ಶಿಕ್ಷಣ ಇಲಾಖೆಯು ಹೊಣೆಗಾರಿಕೆಯನ್ನು ಶಾಲಾ ಮುಖ್ಯ ಶಿಕ್ಷಕರಿಗೆ ವಹಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಹಲವು ತರಬೇತಿ ಕಾರ್ಯಕ್ರಮಗಳು ಸೇರಿ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ, ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುವ ಮನೋಭಾವ ಬೆಳೆಸಿಕೊಳ್ಳುತ್ತಾರೆ ಎಂದು ತಿಳಿಸಿದರು.ಶಿಕ್ಷಣ ಸಂಯೋಜಕ ಕಾಮರಾಜು ಮಾತನಾಡಿ, ತೋವಿನಕೆರೆ ಸರ್ಕಾರಿ ಶಾಲೆ ಅತ್ಯುತ್ತಮ ಮೂಲಭೂತ ಸೌಲಭ್ಯಗಳೊಂದಿಗೆ ಹೆಚ್ಚಿನ ಮಕ್ಕಳ ದಾಖಲಾತಿ ಹೊಂದಿದ್ದು, ಸುತ್ತಮುತ್ತ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಬರುತ್ತಾರೆ. ದಾಸಲುಕೂಂಟೆ, ಮಣುವಿನಕುರಿಕೆ, ಕಾರೇಹಳ್ಳಿ, ಜುಂಜರಾಮನಹಳ್ಳಿ, ಮರೆನಾಯ್ಕನ ಹಳ್ಳಿ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಚಾರ ಆಂದೋಲನ ಮಾಡಲಾಗಿದ್ದು, ಸಾರ್ವಜನಿಕರು ಸರ್ಕಾರಿ ಶಾಲೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ, ಬಿಆರ್ಸಿ ಶಾರದಮ್ಮ, ಮುಖ್ಯಶಿಕ್ಷಕ ಸಿದ್ದಪ್ಪ, ಗ್ರಾಪಂ ಪಿಡಿಒ ಲಕ್ಷ್ಮೀನಾರಾಯಣ, ಸಿ.ಆರ್.ಪಿ. ಹರ್ಷ, ಉಮೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ರೇವಣಮೂರ್ತಿ, ಉಪಾಧ್ಯಕ್ಷ ವಂಶಿಕೃಷ್ಣ, ನಾಗರಾಜು, ಶಬಾನ, ಶಿಕ್ಷಕರಾದ ರಂಗನಾಥ, ಧನಂಜಯ, ಶಿವಣ್ಣ, ರತ್ನಾದೇವಿ, ನಾಗವೇಣಿ, ಶೈಲಜಾ, ಬಾನು, ಇಂದುಮತಿ, ಅಂಬಿಕಾ, ರಮ್ಯ ಸೇರಿ ಇನ್ನಿತರರು ಹಾಜರಿದ್ದರು.