ಕೊಡಗಿನಲ್ಲಿ ಗುಣಮಟ್ಟದ ಶಿಕ್ಷಣ: ಡಾ.ಮಂತರ್‌ ಗೌಡ ಶ್ಲಾಘನೆ

| Published : Sep 06 2024, 01:08 AM IST / Updated: Sep 06 2024, 01:09 AM IST

ಸಾರಾಂಶ

ಕೊಡಗು ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ತಾಲೂಕು ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಿಕ್ಷಕರ ದಿನಾಚರಣೆ ಸಮಿತಿ ಆಶ್ರಯದಲ್ಲಿ ಗುರುವಾರ ಇಲ್ಲಿನ ಒಕ್ಕಲಿಗರ ಸಮುದಾಯಭವನದಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕೊಡಗಿನಲ್ಲಿ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸುವ ಮೂಲಕ ಜಿಲ್ಲೆಗೆ ಉನ್ನತ ಸ್ಥಾನ ದೊರಕಿಸಿಕೊಟ್ಟಿದ್ದಾರೆ ಎಂದು ಶಾಸಕ ಡಾ.ಮಂತರ್‌ ಗೌಡ ಶ್ಲಾಘಿಸಿದ್ದಾರೆ.

ಕೊಡಗು ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ತಾಲೂಕು ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಿಕ್ಷಕರ ದಿನಾಚರಣೆ ಸಮಿತಿ ಆಶ್ರಯದಲ್ಲಿ ಗುರುವಾರ ಇಲ್ಲಿನ ಒಕ್ಕಲಿಗರ ಸಮುದಾಯಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಏಳನೇ ವೇತನ ಆಯೋಗ ರಾಜ್ಯ ಸರ್ಕಾರ ಘೋಷಿಸಿರುವ ಹಿನ್ನಲೆಯಲ್ಲಿ ಶಿಕ್ಷಕರ ಸಂಕಷ್ಟಗಳು ಮುಂದಿನ ದಿನಗಳಲ್ಲಿ ಪರಿಹಾರವಾಗಲಿದ್ದು, ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.

ಸಮಾಜದಲ್ಲಿ ನಾವು ಯಾವುದೇ ಕ್ಷೇತ್ರದಲ್ಲೂ ಏನಾನ್ನಾದರೂ ಸಾಧಿಸಲು ಸಾಧ್ಯವಾಗಿದ್ದರೆ ಅದು ವಿದ್ಯೆಯಿಂದ ಮಾತ್ರ. ಈ ಹಿನ್ನಲೆಯಲ್ಲಿ ಸಮಾಜದಲ್ಲಿ ವಿದ್ಯೆ ನೀಡುತ್ತಿರುವ ಶಿಕ್ಷಕ ವೃತ್ತಿಗಿಂತ ಮಿಗಿಲಾದುದು ಬೇರೊಂದಿಲ್ಲ. ನಿರ್ದಿಷ್ಟ ಗುರಿ ಮತ್ತು ಉತ್ತಮ ಗುರು ಹೊಂದಿದ್ದಲ್ಲಿ ನಾವು ಯಶಸ್ಸು ಸಾಧಿಸಲು ಸಾಧ್ಯ ಎಂದರು.

ನಿವೃತ್ತ ಉಪನ್ಯಾಸಕಿ ಎಂ.ಬಿ.ತಿಲೋತ್ತಮೆ ಮಾತನಾಡಿ, ಶಿಕ್ಷಣ ಮನುಷ್ಯನನ್ನು ಪರಿಪೂರ್ಣತೆಯೆಡೆಗೆ ಸಾಗುವಂತೆ ಮಾಡುತ್ತದೆ. ಬೌದ್ಧಿಕ ಉತ್ಸಾಹ ಕಳೆದುಕೊಂಡರೆ ನಾಗರಿಕತೆಗೆ ಭವಿಷ್ಯವಿರುವುದಿಲ್ಲ. ಮುಗ್ಧ ಮಕ್ಕಳ ಮನಸ್ಸನ್ನು ಅರಿತು ವಿಜ್ಞಾನವನ್ನು ಬೋಧನೆ ಮಾಡುವ ಮೂಲಕ ಮಕ್ಕಳಲ್ಲಿ ಸಮಾಜದಲ್ಲಿರುವ ಮೂಢನಂಬಿಕೆ, ಅಂಧಾಚಾರಗಳನ್ನು ಹೋಗಲಾಡಿಸಲು ಅರಿವು ಮೂಡಿಸಬೇಕು ಎಂದರು.

ಶಿಕ್ಷಕರಾದವರನ್ನು ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದಲ್ಲೂ ಅನುಕರಣೆ ಮಾಡುವುದರಿಂದ ಪ್ರತಿಯೋರ್ವ ಶಿಕ್ಷಕರು ಆದರ್ಶ ಶಿಕ್ಷಕರಾಗುವುದರ ಜೊತೆಗೆ ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದರು. ಮೌಲ್ಯಾಧಾರಿತ ಶಿಕ್ಷಣ ಪಡೆದ ವ್ಯಕ್ತಿ ಸಮಾಜದಲ್ಲಿ ಶ್ರೇಷ್ಠ ಎನಿಸಿಕೊಳ್ಳುತ್ತಾನೆ ಎಂದು ತಿಲೊತ್ತಮೆ ನುಡಿದರು.

ತಹಸೀಲ್ದಾರ್‌ ಶ್ರೀಧರ್ ಕಂಕನವಾಡಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್ ಮಾತನಾಡಿದರು.

೨೦೨೪ರಲ್ಲಿ ನಿವೃತ್ತಿಗೊಂಡ ಶಿಕ್ಷಕರನ್ನು ಮತ್ತು ಹತ್ತನೇ ತರಗತಿಯಲ್ಲಿ ಶೇ.೧೦೦ ಫಲಿತಾಂಶ ಪಡೆದ ಶಾಲೆಗಳ ಮುಖ್ಯೋಪಾಧ್ಯಾಯರನ್ನು ಸನ್ಮಾನಿಸಲಾಯಿತು.

ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ಎಸ್.ಗೀತಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ, ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್‌ನ ಸಹಾಯಕ ನಿರ್ದೇಶಕ ಕಾಳ ನಾಯಕ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಂ.ವಿ.ಮಂಜೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಪ್ರದೀಪ್, ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಟಿ.ಸೋಮಶೇಖರ್, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಹೇಮಂತ್, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್.ರತ್ನಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಸ್.ಎ.ಯೋಗೇಶ್, ವೃತ್ತಿ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಎ.ಪಿ.ಸೋಮಯ್ಯ, ತಾಲೂಕು ಲಿಪಿಕ ನೌಕರರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ತಾಲೂಕು ಅನುದಾನಿತ ಶಾಲಾ ನೌಕರರ ಸಂಘದ ಅಧ್ಯಕ್ಷ ವೆಂಕಟ್‌ನಾಯಕ್, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ್ ಮತ್ತಿತರರು ಇದ್ದರು.