ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಶಿಕ್ಷಣವು ವಿವೇಚನಾ ಶಕ್ತಿ, ಸಾಮಾಜಿಕ ಚಿಂತನೆಯ ಅಸ್ತ್ರ ಮಾತ್ರವಲ್ಲದೆ ಸಮಾಜದ ದೃವೀಕರಣದ ಸಾಧನವಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿವೃತ್ತ ನಿರ್ದೇಶಕ ಟಿ.ಎಂ.ಕುಮಾರ್ ಅಭಿಪ್ರಾಯಪಟ್ಟರು.ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ತಾಲೂಕಿನ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಆಡಳಿತಾತ್ಮಕ ವೃತ್ತಿ ಕ್ಷಮತೆ ಕುರಿತು ಶೈಕ್ಷಣಿಕ ಕಾರ್ಯಾಗಾರ ಹಾಗೂ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಸಂಬಂಧ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ಚಿತ್ರ ಒಂದು ಪ್ರಯೋಗದ ಸ್ಥಾನ ಪಡೆಯಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯವು ಪಠ್ಯಪುಸ್ತಕದಿಂದ ಮಾತ್ರ ಸಿಗುವುದಿಲ್ಲ. ಕಡ್ಡಾಯ ಪ್ರಾಥಮಿಕ ಶಿಕ್ಷಣದಲ್ಲಿ ಗುಣಾತ್ಮಕ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದೆ. ಪಠ್ಯ ಪುಸ್ತಕ ರಚನಾ ಪ್ರಕ್ರಿಯೆಯಲ್ಲಿ ಕೈಗೊಂಡ ಅನೇಕ ಗುಣಾತ್ಮಕ ಹಾಗೂ ರಚನಾತ್ಮಕ ಬದಲಾವಣೆಗಳು ಬಹು ಮುಖ್ಯವಾಗುತ್ತವೆ ಎಂದರು.ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಕೆ.ವಿ.ವೆಂಕಟಾಚಲಪತಿ ಮಾತನಾಡಿ, ಅರ್ಥವಿಲ್ಲದ ವಿದ್ಯೆ ವ್ಯರ್ಥ, ಶಿಕ್ಷಕರಿಗೆ ಜ್ಞಾನವೃದ್ಧಿ, ಪ್ರಭುದ್ಧತೆ ಮತ್ತು ವಿನಯ ಅತಿ ಅಗತ್ಯ. ಶಿಕ್ಷಕರು ಮಾದರಿ ಕೆಲಸ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಮಾತನಾಡಿ, ಇಲಾಖೆಯ ಹಿರಿಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ ಟಿ.ಎಂ.ಕುಮಾರ್ ಹಾಗೂ ಕೆ.ವಿ.ವೆಂಕಟಾಚಲಪತಿ ಅವರ ಒಡನಾಟ ಹಾಗೂ ಅವರ ಸರಳ ವ್ಯಕ್ತಿತ್ವವು ಅನುಕರಣೀಯ ಎಂದರು.ನಿವೃತ್ತ ವಿಷಯ ಪರಿವೀಕ್ಷಕ ಎಚ್.ಎಂ.ಬಸವರಾಜ್, ಬಳ್ಳಾರಿ ಡಯಟ್‌ನ ಹಿರಿಯ ಉಪನ್ಯಾಸಕಿ ಗೀತಾ ಮಾತನಾಡಿದರು. ಈ ವೇಳೆ ಕ್ಷೇತ್ರ ಸಮನ್ವಯಾಧಿಕಾರಿ ಈ ತಿಪ್ಪೇರುದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷೆ ಭಾಗ್ಯ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ತಾಲೂಕು ಅಧ್ಯಕ್ಷ ನಾಗ್ಯಾನಾಯ್ಕ ಹಾಗೂ ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಜರಿದ್ದರು.