ಹಾನಗಲ್ಲ: ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳು ಸುಲಭವಾಗಿ ಲಭ್ಯವಾಗುವ ಉದ್ದೇಶದಿಂದ ತಾಲೂಕಿನ ಅಕ್ಕಿಆಲೂರಿನಲ್ಲಿ ಕೆಎಂಎಫ್ ನೂತನ ಹಾಲಿನ ಮಳಿಗೆಯನ್ನು ಶಾಸಕ ಶ್ರೀನಿವಾಸ ಮಾನೆ ಅವರು ಉದ್ಘಾಟಿಸಿದರು.
ಕೆಎಂಎಫ್ ಹಾಲಿನ ಮಳಿಗೆಗಳ ಮೂಲಕ ಸಾರ್ವಜನಿಕರಿಗೆ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳು ಯೋಗ್ಯ ದರದಲ್ಲಿ ದೊರೆಯುತ್ತಿವೆ. ರೈತರಿಂದ ಸಂಗ್ರಹವಾಗುವ ಹಾಲಿಗೆ ಉತ್ತಮ ಮಾರುಕಟ್ಟೆ ಒದಗಿಸುವಲ್ಲಿ ಕೆಎಂಎಫ್ ಮಹತ್ವದ ಪಾತ್ರ ವಹಿಸುತ್ತಿದ್ದು, ಇಂತಹ ಮಳಿಗೆಗಳ ಆರಂಭದಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ ಎಂದು ಹೇಳಿದ ಅವರು ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರವಾಗಿದ್ದು, ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಸಾರ್ವಜನಿಕರು ಕೆಎಂಎಫ್ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಮೂಲಕ ಸಹಕಾರಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಬೇಕು ಎಂದು ಅವರು ಕರೆ ನೀಡಿದರು.ಇದೇ ಸಂದರ್ಭದಲ್ಲಿ ಮನೆ, ಮನೆಗೆ ಹಾಲು ವಿತರಿಸುವ ಯುವಕ ಗಿರೀಶ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಕೆಎಂಎಫ್ ಅಧ್ಯಕ್ಷ ಮಂಜನಗೌಡ ಪಾಟೀಲ, ನಿರ್ದೇಶಕ ಚಂದ್ರಪ್ಪ ಜಾಲಗಾರ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಮರಗಡಿ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಸತೀಶ ಬಾಗಣ್ಣನವರ, ತಾಪಂ ಮಾಜಿ ಸದಸ್ಯ ಮೆಹಬೂಬಅಲಿ ಬ್ಯಾಡಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಖ್ವಾಜಾಮೊಹಿದ್ದೀನ್ ಅಣ್ಣಿಗೇರಿ, ಗ್ರಾಪಂ ಮಾಜಿ ಅಧ್ಯಕ್ಷ ಮಕ್ಬೂಲ್‌ಅಹ್ಮದ್ ರುಸ್ತುಂಖಾನವರ, ಸತ್ತಾರಸಾಬ ಅರಳೇಶ್ವರ, ಜಗದೀಶ ಮುಂಚಿನಮನಿ, ಬಸವರಾಜ ಹಾಲಬಾವಿ, ಕೃಷ್ಣ ಅರ್ಕಸಾಲಿ, ಮಹಾಂತೇಶ ಕುಳೇನೂರ, ಫಕ್ಕೀರಗೌಡ ಪಾಟೀಲ, ಅಲ್ತಾಫ್ ಶಿರಹಟ್ಟಿ, ಇಂದೂಧರ ಸಾಲಿಮಠ, ಮಾಲತೇಶ ವಾಲಿಕಾರ, ಅಬ್ದುಲ್‌ಕರೀಂ ಹಿತ್ತಲಮನಿ ಇದ್ದರು.