ಸಾರಾಂಶ
-ಸಚಿವರು, ಶಾಸಕರ ಮುಖವಾಡಿ ಹಾಕಿ ಬಿಜೆಪಿ ಓಬಿಸಿ ಮೋರ್ಚಾದಿಂದ ವಿನೂತನ ಪ್ರತಿಭಟನೆ । ವೈದ್ಯಕೀಯ ಶಿಕ್ಷಣ ಸಚಿವರಿಗೆ ಜಿಲ್ಲಾಡಳಿತದ ಮೂಲಕ ಮನವಿ
-----ಕನ್ನಡಪ್ರಭ ವಾರ್ತೆ ಕಲಬುರಗಿ
ಗುಲಬರ್ಗಾ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಆಸ್ಪತ್ರೆ (ಜಿಮ್ಸ್)ಯಲ್ಲಿ ನಿತ್ಯವು ಕಲಬುರಗಿ ಜನತೆಗೆ ನರಕ ದರ್ಶನವಾಗುತ್ತಿದ್ದು, ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದೆ ಎಂದು ಆರೋಪಿಸಿ ಬಿಜೆಪಿ ಓಬಿಸಿ ಮೋರ್ಚಾ ನಗರ ಜಿಲ್ಲಾ ಘಟಕದಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಕಲಬುರಗಿ ಶಾಸಕರು, ಸಚಿವರ ಮುಖವಾಡ ಧರಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರಲ್ಲದೆ, ಕ್ರಮಕ್ಕೆ ಆಗ್ರಹಿಸಿ ವೈದ್ಯಕೀಯ ಶಿಕ್ಷಣ ಸಚಿವರಿಗೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದರು.ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸವಲತ್ತುಗಳು ಸರಿಯಾಗಿ ಸಾರ್ವಜನಿಕರಿಗೆ ಲಭ್ಯವಾಗುತ್ತಿವೆಯೇ? ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಬಹು ಅಂತಸ್ತಿನ ಕಟ್ಟಡವನ್ನು ಕಾಣುತ್ತೇವೆ. ಆದರೆ, ಅದಲ್ಲಿನ ವೈದ್ಯರಾಗಲಿ ಅಥವಾ ಸಿಬ್ಬಂದಿಯವರಾಗಲಿ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿದ್ದಾರೆಯೇ? ಎಂದು ಓಬಿಸಿ ಮೋರ್ಚಾ ನಗರ ಅಧ್ಯಕ್ಷ ದೇವೀಂದ್ರ ದೇಸಾಯಿ ಕಲ್ಲೂರ ನೇತೃತ್ವದಲ್ಲಿ ಗೋಲಿ ಆಡಿ ಕಾರ್ಯಕರ್ತರು ಕಲಬುರಗಿ ಜಿಮ್ಸ್ ನಲ್ಲಿ ಹೆಚ್ಚುವರಿ ಐಸಿಯು ಬೆಡ್ ಕಲ್ಪಿಸಲು ಆಗ್ರಹಿಸಿದರು.
ಇತ್ತ ಜನ ಆರೋಗ್ಯ ಸೌಲಭ್ಯಕ್ಕಾಗಿ ಪರದಾಡುತ್ತಿದ್ದರೆ ಸಿಎಂ, ಡಿಸಿಎಂ ಹಾಗೂ ಮಂತ್ರಿ, ಶಾಸಕರು ವಿಧಾನ ಸೌಧದಲ್ಲಿ ಗೋಲಿ ಆಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕುತ್ತಲೇ ಸಿಎಂ, ಡಿಸಿಎಂ, ಮಂತ್ರಿಗಳು ಹಾಗೂ ಜಿಲ್ಲೆಯ ಶಾಸಕರ ಮುಖವಾಡ ಧರಿಸಿಕೊಂಡು ಗೋಲಿ ಆಡುವ ಮೂಲಕ ಪ್ರತಿಭಟಸಿದರು.ಜನರ ಹಿತ ಮರೆತು ಸರ್ಕಾರ ಗೋಲಿ ಆಡುತ್ತಾ ಕಾಲ ಹರಣ ಮಾಡುತ್ತಿದೆ ಎನ್ನುವುದರ ದ್ಯೂತಕವಾಗಿ ಗೋಲಿ ಆಡುವ ಮೂಲಕ ಪ್ರತಿಭಟನೆ ನಡೆಸಿದ ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ ನೋಡಲು ಕಲಬುರಗಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಭಾರಿ ಜನ ಸೇರಿದ್ದರು.
ಓಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶರಣಗೌಡ ಐಕುರ್ ಲೋಕೇಶ್ ಶೀಲವಂತ ಅಭಿಷೇಕ್ ವಿ ರಾಣೋಜಿ ಜ್ಯೋತಿ. ಪ್ರಮೋದ ಮಳೆ, ಶಶಿ ಮದ್ದೂರು, ಸಿದ್ದು ಭರತನೂರ್, ಶಂಭುಲಿಂಗ್, ಸೋಮನಾಥ್ ಚವಾಣ್ ಬಸವಣ್ಣಪ ಪಾಟೀಲ್ ಇದ್ದರು.----
ಫೋಟೋ- ಗೋಲಿ ಆಟ ಬಿಜೆಪಿಕಲಬುರಗಿ ಡಿಸಿ ಕಚೇರಿ ಇರುವ ಮಿನಿ ವಿಧಾನ ಸೌಧದ ಮುಂದೆ ಸಚಿವರು ಶಾಸಕರ ಮುಖವಾಡಿ ಹಾಕಿ ಗೋಲಿ ಆಡುವ ಮೂಲಕ ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.