ಗುಣಮಟ್ಟದ ಬೀಜ ಬರಲು ಸಾವಯವ ಬಳಕೆ ಅವಶ್ಯಕ. ಭೂಮಿ ಫಲವತ್ತವಾಗಿರಿಸಿದರೆ ಉತ್ತಮ ಫಸಲು ಬರುತ್ತದೆ.
ಕುಕನೂರು: ಬೀಜ ಗುಣಮಟ್ಟದಿಂದ ಕೂಡಿದ್ದರೆ ಫಸಲು ಸಮೃದ್ಧ ಆಗಿರುತ್ತದೆ ಎಂದು ಪ್ರಾಧ್ಯಾಪಕ ಡಾ.ಸೋಮಪ್ಪ ಜಗ್ಗಲ್ ಹೇಳಿದರು.
ತಾಲೂಕಿನ ತಳಕಲ್ಲ ಗ್ರಾಮದಲ್ಲಿ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ,ಬಾಗಲಕೋಟೆ ಅಡಿಯಲ್ಲಿ ಬರುವ ತೋಟಗಾರಿಕಾ ಮಹಾ ವಿದ್ಯಾಲಯ, ಮುನಿರಾಬಾದ್ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರದ ಅಂಗವಾಗಿ ಜರುಗಿದ ಬೀಜ ತಂತ್ರಜ್ಞಾನ ಮತ್ತು ಬೆಳೆ ಸುಧಾರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ರೖತರು ಬಿತ್ತುವ ಗುಣಮಟ್ಟದ ಬೀಜವೇ,ನಾಳೆಯ ಸಮೃದ್ಧ ಫಸಲಿಗೆ ಅಡಿಪಾಯ.ಹಾಗೆಯೇ ಬೀಜೋಪಚಾರ ಅವಶ್ಯ.ರೈತರಿಗೆ ಬೀಜ ಸಂಸ್ಕರಣಾಕಾರರ (ಟ್ರೈಕೋಡರ್ಮಾ) ವಿಧಾನ ಪ್ರದರ್ಶನ, ಬೀಜ ಗ್ರಾಮ ಪರಿಕಲ್ಪನೆ, ಬೀಜ ಮೊಳಕೆಯೊಡೆಯುವ ವಿಧಾನ, ಬೀಜ ಮೊಳಕೆಯೊಡೆಯುವಿಕೆ ಹೆಚ್ಚಿಸಲು ಜೈವಿಕ ಗೊಬ್ಬರ ಪ್ರಾಮುಖ್ಯತೆ ಅರಿಯಬೇಕು. ಬೀಜದಿಂದ ಹರಡುವ ರೋಗ, ಬೀಜ ಖರೀದಿಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ತಿಳಿಯಬೇಕು ಎಂದರು.ಗುಣಮಟ್ಟದ ಬೀಜ ಬರಲು ಸಾವಯವ ಬಳಕೆ ಅವಶ್ಯಕ. ಭೂಮಿ ಫಲವತ್ತವಾಗಿರಿಸಿದರೆ ಉತ್ತಮ ಫಸಲು ಬರುತ್ತದೆ. ಕಳಪೆ ಬೀಜಗಳಿಂದ ರೖತರು ದೂರವಿರಬೇಕು. ಕಳಪೆ ಬೀಜಗಳು ರೖತರನ್ನು ಸಂಕಷ್ಟಕ್ಕೆ ದೂಡುತ್ತವೆ. ಹೆಚ್ಚು ಇಳುವರಿ ಆಸೆ ತೋರುವ ಬೀಜಗಳು ಒಮ್ಮೊಮ್ಮೆ ಗುಣಮಟ್ಟದಿಂದ ದೂರವಿರುತ್ತವೆ. ಪ್ರತಿ ಹೆಜ್ಜೆಯಲ್ಲೂ ರೈತರು ಜಾಗೃತ ಆಗಬೇಕು. ಬೀಜ ತಂದು ಪರಿಶೀಲನೆಗಾಗಿ ಒಂದು ಹಿಡಿ ಬೀಜ ನಾಟಿ ಮಾಡಿ ನೋಡಬೇಕು ಎಂದರು.
ಗ್ರಾಮದ ಪ್ರಗತಿ ಪರ ರೈತರ ಮಲ್ಲಿಕಾರ್ಜುನ ಗಡಿಗಿ ಮಾತನಾಡಿ, ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಬದಲು ಕಡಿಮೆ ಬೆಲೆಯಲ್ಲಿ ಸಿಗುವ ಹೆಚ್ಚು ಉಪಯುಕ್ತ ಜೈವಿಕ ಗೊಬ್ಬರಗಳನ್ನು ಬಳಸಿ ಮಣ್ಣಿನ ಆರೋಗ್ಯ ಕಾಪಾಡಬೇಕು. ಗೋವು ಸಾಕಬೇಕು. ಅದರಲ್ಲೂ ದೇಶಿ ಗೋವುಗಳ ಮನುಷ್ಯನ ಹಾಗು ಮಣ್ಣಿನ ಆರೋಗ್ಯಕ್ಕೆ ಪೂರಕವಾದ ಕೊಡುಗೆ ನೀಡುತ್ತವೆ. ಜೆರ್ಸಿ ಆಕಳ ಹಾಲು ಹಾಗೂ ರಾಸಾಯನಿಕ ಗೊಬ್ಬರ ಮನುಷ್ಯ ಹಾಗು ಮಣ್ಣಿನ ಗುಣ ಧರ್ಮಕ್ಕೆ ಮಾರಕವಾಗಿವೆ ಎಂದರು.ರೈತ ಹನುಮಂತಪ್ಪ ವಾಲಿಕಾರ್ ಮಾತನಾಡಿ, ನಿಮ್ಮ ಕೃಷಿಗೆ ನಿಮ್ಮ ಹೊಲದಲ್ಲಿ ನೀವೇ ಬೆಳೆದ ಬೆಳೆಯ ಬೀಜ ಬಿತ್ತಲು ಬಳಸಿ ಮತ್ತು ಅದಕ್ಕೆ ಸಗಣೆ, ಗೋಮೂತ್ರ ಹಾಗೂ ಸುಣ್ಣದಿಂದ ಬೀಜೋಪಚಾರ ಮಾಡಬೇಕು.ರೖತರು ಆತುರತೆಯಲ್ಲಿ ಬಿತ್ತನೆ ಮಾಡಬಾರದು ಎಂದು ಹೇಳಿದರು.
ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಬೀಜೋಪಚಾರ ಮಾಡುವ ವಿಧಾನವನ್ನು ತೋರಿಸಿಕೊಟ್ಟರು. ಗ್ರಾಮದ ವಿರುಪಣ್ಣ ಕೆಂಚರೆಡ್ಡಿ, ಷಣ್ಮುಖಪ್ಪ ಹೊಸಮನಿ, ಮಲ್ಲಯ್ಯ ಜಡಿಮಠ, ಕಲ್ಲಪ್ಪ ಮೇಟಿ, ವನಿಕೇರಪ್ಪ ಬಿಸರಳ್ಳಿ ಹಾಗೂ ರೖತ ವರ್ಗದವರಿದ್ದರು.