ಸಾರಾಂಶ
ಕೊಳ್ಳೇಗಾಲ ಸಾರ್ವಜನಿಕ ಉಪವಿಭಾಗೀಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿರುವ ಕುರಿತು ಸಾರ್ವಜನಿಕರು, ರೋಗಿಗಳಿಂದ ಮಾಹಿತಿ ಲಭ್ಯವಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು. ಕೊಳ್ಳೇಗಾಲ ಉಪವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿದ ವರದಿ ನೀಡಲು ತಾಕೀತುಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕೊಳ್ಳೇಗಾಲ ಸಾರ್ವಜನಿಕ ಉಪವಿಭಾಗೀಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿರುವ ಕುರಿತು ಸಾರ್ವಜನಿಕರು, ರೋಗಿಗಳಿಂದ ಮಾಹಿತಿ ಲಭ್ಯವಾಗಿದ್ದು ಆರೋಗ್ಯಾಧಿಕಾರಿಗಳು, ವೈದ್ಯರು ಇದನ್ನೆ ಮುಂದುವರೆಸಿಕೊಂಡು ಹೋಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.ಕೊಳ್ಳೇಗಾಲ ಉಪವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಗರ್ಭಿಣಿ, ಬಾಣಂತಿಯರಿಂದ ಮಾಹಿತಿ ಪಡೆದು, ಕೆಲವು ರೋಗಿಗಳ ಆರೋಗ್ಯ ವಿಚಾರಿಸಿದರು. ಎಲ್ಲೆಡೆ ಡೆಂಘೀ ಉಲ್ಪಣವಾಗುತ್ತಿರುವ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ. ಜೊತೆಗೆ ಶೌಚಗೃಹದಲ್ಲೂ ಸ್ವಚ್ಛತೆ ಕಾಪಾಡುವಂತೆ ಸೂಚಿಸಲಾಗಿದೆ. ವೈದ್ಯರಿಂದ ಇಲ್ಲಿನ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುತ್ತಿರುವುದರ ಕುರಿತು ನಿಜಕ್ಕೂ ಹೆಮ್ಮೆಯಾಗಿದ್ದು, ಅವರೆಲ್ಲರನ್ನು ಅಭಿನಂದಿಸಿ ಇದೇ ರೀತಿ ಸೇವೆ ಮಾಡುವಂತೆ ಹೇಳಿದರು.ರೋಗಿಗಳಿಗೆ ಬಿಸಿನೀರು, ಕುಡಿಯುವ ಶುದ್ಧ ನೀರು ಪೂರೈಸಲು ತಾಕೀತು ಮಾಡಲಾಗಿದೆ. ಅದೇ ರೀತಿಯಲ್ಲಿ ಸರ್ಕಾರ ರೇಡಿಯೋಲಾಜಿಸ್ಟ್ ನೇಮಕಕ್ಕೆ ಸಿದ್ಧವಿದೆ. ಆದರೆ ಹುದ್ದೆಗೆ ಬರುವವರಿಲ್ಲ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜತೆ ಚರ್ಚಿಸಿ, ಶೀಘ್ರದಲ್ಲೆ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರೇಡಿಯೋಲಾಜಿಸ್ಟ್ ನೇಮಕ ಮಾಡಿ ಕೊಡುವಂತೆ ಮನವಿ ಮಾಡುವೆ ಎಂದರು.ಈ ವೇಳೆ ನೀರಿನ ಟ್ಯಾಂಕ್ ಮೇಲ್ಛಾವಣೆ ಪರಿಶೀಲಿಸಿ ಕೂಡಲೆ ಟ್ಯಾಂಕ್ ಸ್ವಚ್ಛಗೊಳಿಸಿದ ವರದಿ ನೀಡುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ.ರಾಜಶೇಖರ್, ವ್ಯೆದ್ಯರಾದ ಡಾ.ಲೋಕೇಶ್ವರಿ, ಡಾ.ಟೀನಾ, ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್ ಸೇರಿದಂತೆ ಇನ್ನಿತರರು ಇದ್ದರು.