ಬೆಂಗಳೂರಲ್ಲಿ ಜೈ ಶ್ರೀರಾಂ ಎಂದ ಮೂವರಿಗೆ ಥಳಿತ!

| Published : Apr 18 2024, 02:18 AM IST / Updated: Apr 18 2024, 07:34 AM IST

ಸಾರಾಂಶ

ಅಲ್ಲಾಹು ಅಕ್ಬರ್‌ ಕೂಗಲು ಒತ್ತಾಯಿಸಿ ಹಲ್ಲೆ ಮಾಡಿ ವಾಹನ ಅಡ್ಡಗಟ್ಟಿ ಧಮಕಿ ಹಾಕಿದ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.

  ಬೆಂಗಳೂರು :  ರಾಮನವಮಿ ನಿಮಿತ್ತ ತಮ್ಮ ಕಾರಿನಲ್ಲಿ ‘ಜೈಶ್ರೀರಾಮ್’ ಎಂದು ಜೈಕಾರ ಕೂಗುತ್ತ ತೆರಳುತ್ತಿದ್ದ ಮೂವರನ್ನು ಅನ್ಯ ಕೋಮಿನ ಕೆಲವು ಯುವಕರು ಅಡ್ಡಗಟ್ಟಿ ‘ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಬುಧವಾರ ನಡೆದಿದೆ. ಈ ಸಂಬಂಧ ಕೆಲವು ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಹಕಾರನಗರದ ನಿವಾಸಿಗಳಾದ ಡಿ.ಪವನ್ ಕುಮಾರ್, ಬಿನಾಯಕ್ ಮತ್ತು ರಾಹುಲ್ ಹಲ್ಲೆಗೊಳಗಾಗಿದ್ದು, ಈ ಘಟನೆ ಸಂಬಂಧ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕೃತ್ಯ ಎಸಗಿ ಪರಾರಿಯಾಗಿದ್ದ ಕಿಡಿಗೇಡಿಗಳನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ಹೊತ್ತಿನಲ್ಲೇ ವಶಕ್ಕೆ ಪಡೆದಿದ್ದಾರೆ.

ಕಾರಿನಿಂದ ಬಾವುಟ ತೋರಿಸಿ ಜೈಶ್ರೀರಾಮ್:

ತನ್ನ ಸ್ನೇಹಿತರ ಜತೆ ಎಂ.ಎಸ್‌.ಪಾಳ್ಯಕ್ಕೆ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಸಂಬಂಧ ಬುಧವಾರ ಮಧ್ಯಾಹ್ನ ಪವನ್ ಕುಮಾರ್ ತೆರಳುತ್ತಿದ್ದ. ಶ್ರೀರಾಮನವಮಿ ನಿಮಿತ್ತ ಕಾರಿಗೆ ಕೇಸರಿ ಬಾವುಟ ಕಟ್ಟಿಕೊಂಡಿದ್ದ ಪವನ್‌, ಚಿಕ್ಕಬೆಟ್ಟಹಳ್ಳಿ ರಸ್ತೆಯಲ್ಲಿ ಸಾಗುವಾಗ ಕಾರಿನಿಂದ ಕೇಸರಿ ಬಾವುಟ ತೋರಿಸಿ ಜೈ ಶ್ರೀರಾಮ್ ಎಂದು ಕೂಗಿದ್ದಾರೆ. ಇದರಿಂದ ಕೆರಳಿದ ಅನ್ಯ ಸಮುದಾಯದ ಇಬ್ಬರು, ಕಾರನ್ನು ಬೈಕ್‌ನಲ್ಲಿ ಹಿಂಬಾಲಿಸಿ ಬಂದು ಅಡ್ಡಗಟ್ಟಿದ್ದಾರೆ. ಆಗ ಘೋಷಣೆ ಕೂಗುವ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಈ ಹಂತದಲ್ಲಿ ಕೆರಳಿದ ಆರೋಪಿಗಳು, ‘ನೀವು ಅಲ್ಲಾ ಹು ಅಕ್ಬರ್ ಎಂದು ಕೂಗಬೇಕು. ಇಲ್ಲಿ ಜೈ ಶ್ರೀರಾಮ್ ಇಲ್ಲ’ ಎಂದಿದ್ದಾರೆ. ಇದಕ್ಕೆ ಆಕ್ಷೇಪಿಸಿದಾಗ ಕಾರಿನಲ್ಲಿದ್ದ ಪವನ್ ಹಾಗೂ ಆತನ ಸ್ನೇಹಿತರ ಮೇಲೆ ಹಲ್ಲೆಗೆ ಆರೋಪಿಗಳು ಮುಂದಾಗಿದ್ದಾರೆ.

ಇದಕ್ಕೆ ಜೈಶ್ರೀರಾಂ ಉದ್ಘೋಷಕರು ಪ್ರತಿರೋಧ ತೋರಿದಾಗ ಓಡಿ ಹೋದ ಆರೋಪಿಗಳು, ಕೆಲ ಹೊತ್ತಿನಲ್ಲಿ ತಮ್ಮ ಜತೆ ಮತ್ತಿಬ್ಬರನ್ನು ಕರೆತಂದು ಪವನ್ ಹಾಗೂ ಆತನ ಸ್ನೇಹಿತರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿ ನಡೆಸಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಪವನ್‌ಗೆ ಮೂಗಿಗೆ ಪೆಟ್ಟಾಗಿದ್ದು, ಇನ್ನುಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.

ಈ ಧಮ್ಕಿ ಹಾಕುವ ದೃಶ್ಯಾವಳಿಯನ್ನು ಸಂತ್ರಸ್ತರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.