ಸಾರಾಂಶ
ರಿಯಾಜಅಹ್ಮದ ಎಂ ದೊಡ್ಡಮನಿ ಡಂಬಳ
ಶತಮಾನಗಳ ಇತಿಹಾಸ ಹೊಂದಿರುವ ಡಂಬಳದ ಸುಮಾರು 430 ಕ್ಕೂ ಹೆಚ್ಚು ಎಕರೆ ವಿಸ್ತೀರ್ಣ ಹೊಂದಿರುವ ವಿಕ್ಟೋರಿಯಾ ಮಹಾರಾಣಿಯ ಕೆರೆ ಈಗ ಬರಿದಾಗಿದೆ!ಈ ಕೆರೆ ಡಂಬಳದ ಸಾವಿರಾರು ಎಕರೆ ಜಮೀನುಗಳಿಗೆ ನೀರು ಒದಗಿಸುವ ಮೂಲಕ ರೈತರ ಪಾಲಿನ ಸಂಜೀವಿನಿಯಾಗಿದ್ದು. ಹುಲಿಗುಡ್ಡ ಏತನೀರಾವರಿಯ ನೀರನ್ನು ಕೆರೆಗೆ ಸರಿಯಾಗಿ ಬಿಡದೇ ಇರುವುದು ಹಾಗೂ ವರುಣನ ಅವಕೃಪೆಯಿಂದ ತನ್ನ ಒಡಲು ತುಂಬಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಹೂಳು ತೆಗೆಯಲು ನಿರ್ಲಕ್ಷ್ಯ: ಕೆರೆಯಲ್ಲಿ ಹೂಳು ತುಂಬಿದ್ದರೂ ತೆರವು ಮಾಡದ ಕಾರಣ ವಾರಂತ್ಯಕ್ಕೆ ಕೆರೆ ನೀರು ಖಾಲಿಯಾಗುವ ಲಕ್ಷಣ ಗೋಚರಿಸುತ್ತಿವೆ. ಇದರಿಂದ ಜಾನುವಾರುಗಳು ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾಲಕಾಲಕ್ಕೆ ಹೂಳೆತ್ತದ ಸಣ್ಣ ನೀರಾವರಿ ಇಲಾಖೆ ಹಾಗೂ ತಾಲೂಕಾಡಳಿತದ ನಿರ್ಲಕ್ಷ್ಯದಿಂದ ಇದೀಗ ಕೆರೆಯಲ್ಲಿ ಸಾಕಷ್ಟು ಹೂಳು ತುಂಬಿದೆ. ಹೀಗೆ ಬಿಟ್ಟರೆ ಕೆರೆ ಮುಚ್ಚುವ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.ಡ್ಯಾಂನಲ್ಲಿ ನೀರು ಇದ್ದಾಗ ನೀರು ಎತ್ತುವ ಮೂರು ಯಂತ್ರಗಳಲ್ಲಿ ಒಂದೇ ಯಂತ್ರದಿಂದ ಕಾಲುವೆಗೆ ನೀರು ಹರಿಸಲಾಗಿದೆ. ಉಳಿದ ಎರಡು ಯಂತ್ರಗಳನ್ನು ಅಧಿಕಾರಿಗಳು ದುರಸ್ತಿ ಮಾಡದ ಹಿನ್ನೆಲೆ ಕೆರೆಗೆ ನೀರು ಬಂದಿಲ್ಲ ಎನ್ನಲಾಗಿದೆ.
ಜಲಚರಗಳ ಮಾರಣ ಹೋಮ: ಕೆರೆಯ ನೀರು ಖಾಲಿ ಆಗುತ್ತಿದ್ದಂತೆ ದೊಡ್ಡ ದೊಡ್ಡ ಮೀನುಗಳು ಕೆರೆಯ ಸುತ್ತಮುತ್ತ ಸತ್ತು ಬಿದ್ದಿವೆ. ಸಾಲ ಮಾಡಿ ಟೆಂಡರ್ ಪಡೆದಿದ್ದ ಮೀನುಗಾರರು ಕೆರೆ ನೀರು ಖಾಲಿಯಾಗುತ್ತಿದಂತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.ಕಾಲುವೆಗಳಿಗಿಲ್ಲ ದುರಸ್ತಿ ಭಾಗ್ಯ: ಕೆರೆ ಮೂಲಕ ಹರಿಯುವ ಮೂರು ಕಾಲುವೆಗಳಲ್ಲಿ ಮುಳ್ಳು ಕಂಟಿ ಬೆಳೆದು ನಿಂತಿವೆ, ಅಷ್ಟೇ ಅಲ್ಲದೆ ಚರಂಡಿ ನೀರು ಕಾಲುವೆ ಮೂಲಕ ಹರಿಯುತ್ತಿರುವ ಕಾರಣ ಕಾಲುವೆಗಳಲ್ಲಿ ತ್ಯಾಜ್ಯ ಸಂಗ್ರಹವಾಗಿ ನೀರು ಸರಾಗವಾಗಿ ಹರಿಯದಂತಹ ಸ್ಥಿತಿ ಇದ್ದು ಶೀಘ್ರ ಕಾಲುವೆ ದುರಸ್ತಿ ಮಾಡುವುದರ ಮೂಲಕ ರೈತರ ಜಮೀನುಗಳಿಗೆ ನೀರು ಹರಿಯುವಂತೆ ತಾಲೂಕಾಡಳಿತ, ಸಣ್ಣ ನೀರಾವರಿ ಇಲಾಖೆ ಮುಂದಾಗಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಡಂಬಳದ ಐತಿಹಾಸಿಕ ಕೆರೆ ನೀರು ಸಂಪೂರ್ಣವಾಗಿ ಖಾಲಿಯಾಗಿದ್ದು, ಗ್ರಾಮದ ಸಾವಿರಾರು ದನಕರುಗಳಿಗೆ ನೀರಿನ ಅವಶ್ಯಕತೆ ಇದ್ದು, ಸರ್ಕಾರ ಕೆರೆ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಡಂಬಳ ರೈತ ಮಂಜುನಾಥ ಹೇಳಿದರು.ಕೆರೆ ಹೂಳೆತ್ತುವ ಮೂಲಕ ಕಾಲುವೆಗಳಲ್ಲಿರುವ ತ್ಯಾಜ್ಯ ಮುಳ್ಳುಕಂಟಿಗಳನ್ನು ತೆರವುಗೊಳಿಸಿ ಕಾಲುವೆ ದುರಸ್ತಿಗೆ ಸರ್ಕಾರ ಮುಂದಾಗಬೇಕು ಎಂದು ರೈತ ಹನಮಂತಪ್ಪ ತಿಳಿಸಿದ್ದಾರೆ.