ಪದವಿ ಪೂರ್ವ ಶಿಕ್ಷಣ ಇಲಾಖೆ ನಿಯಮಾವಳಿಯಂತೆ ಇಲಾಖೆ ಹಂತದಲ್ಲೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಅವುಗಳನ್ನು ಪರೀಕ್ಷಾ ವೇಳಾ ಪಟ್ಟಿಯಂತೆ ಹಂಚಿಕೆ ಮಾಡುವುದಕ್ಕೆ ನಗರದ ಕಾರ್ಮೆಲ್‌ ಕಾಲೇಜನ್ನು ನೋಡಲ್‌ ಸಂಸ್ಥೆಯನ್ನಾಗಿ ಮಾಡಿಕೊಂಡು ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಥಮ ಮತ್ತು ದ್ವಿತೀಯ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆಯ ಮೂರು ವಿಷಯಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಗುರುವಾರ ನಡೆಯಬೇಕಿದ್ದ ಪರೀಕ್ಷೆಗಳನ್ನು ರದ್ದುಗೊಳಿಸಿ ಮುಂದೂಡಲಾಗಿದೆ.

ಜೀವಶಾಸ್ತ್ರ, ಕಂಪ್ಯೂಟರ್‌ ಸೈನ್ಸ್‌, ಸ್ಟ್ಯಾಟಿಸ್ಟಿಕ್ಸ್‌ (ಸಂಖ್ಯಾಶಾಸ್ತ್ರ) ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಈ ಮೂರು ವಿಷಯಗಳ ಪರೀಕ್ಷೆಗಳನ್ನು ಬೇರೆ ದಿನಗಳಲ್ಲಿ ನಡೆಸಲು ನಿರ್ಧರಿಸಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ನಿಯಮಾವಳಿಯಂತೆ ಇಲಾಖೆ ಹಂತದಲ್ಲೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಅವುಗಳನ್ನು ಪರೀಕ್ಷಾ ವೇಳಾ ಪಟ್ಟಿಯಂತೆ ಹಂಚಿಕೆ ಮಾಡುವುದಕ್ಕೆ ನಗರದ ಕಾರ್ಮೆಲ್‌ ಕಾಲೇಜನ್ನು ನೋಡಲ್‌ ಸಂಸ್ಥೆಯನ್ನಾಗಿ ಮಾಡಿಕೊಂಡು ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿತ್ತು.

ಜೀವಶಾಸ್ತ್ರ, ಕಂಪ್ಯೂಟರ್‌ ಸೈನ್ಸ್ ವಿಷಯಗಳ ಪರೀಕ್ಷೆ ವೇಳಾ ಪಟ್ಟಿಯಂತೆ ಗುರುವಾರ ನಿಗದಿಯಾಗಿದ್ದರೂ ಬುಧವಾರವೇ ನೀಡಿರುವುದು ಕಂಡುಬಂದಿದೆ. ಅದೇ ರೀತಿ ಸ್ಟ್ಯಾಟಿಸ್ಟಿಕ್ಸ್‌ (ಸಂಖ್ಯಾಶಾಸ್ತ್ರ) ವಿಷಯದ ಪ್ರಶ್ನೆ ಪತ್ರಿಕೆ ಬಂಡಲ್‌ ಒಡೆದಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಆ ಪ್ರಶ್ನೆಪತ್ರಿಕೆಯೂ ಸೋರಿಕೆಯಾಗಿರಬಹುದೆಂಬ ಅನುಮಾನದ ಮೇರೆಗೆ ಇಲಾಖೆ ಉಪನಿರ್ದೇಶಕರು ಮೂರೂ ವಿಷಯಗಳ ಪರೀಕ್ಷೆಯನ್ನು ರದ್ದುಗೊಳಿಸಿದರು.

ಗುರುವಾರ ರದ್ದುಪಡಿಸಿರುವ ಜೀವಶಾಸ್ತ್ರ ಮತ್ತು ಕಂಪ್ಯೂಟರ್‌ ಸೈನ್ಸ್ ವಿಷಯಗಳ ಪರೀಕ್ಷೆಯನ್ನು ನ.19ಕ್ಕೆ ಹಾಗೂ ಸಂಖ್ಯಾಶಾಸ್ತ್ರ ವಿಷಯದ ಪರೀಕ್ಷೆಯನ್ನು ನ.16ಕ್ಕೆ ಮುಂದೂಡಿರುವುದಾಗಿ ಇಲಾಖೆ ಉಪ ನಿರ್ದೇಶಕ ಜಯಶಂಕರಪ್ಪ ‘ಕನ್ನಡಪ್ರಭ’ ಪತ್ರಿಕೆಗೆ ತಿಳಿಸಿದರು.

ನ.6 ರಿಂದ ನ.16 ರ ವರೆಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ನಿಗದಿಪಡಿಸಲಾಗಿತ್ತು. ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಶ್ನೆ ಪತ್ರಿಕೆಯನ್ನು ವೇಳಾ ಪಟ್ಟಿಯಂತೆ ಹಂಚಿಕೆ ಮಾಡುವುದಕ್ಕೆ ಕಾರ್ಮೆಲ್‌ ಕಾಲೇಜನ್ನು ನೋಡಲ್‌ ಸಂಸ್ಥೆಯಾಗಿ ನೇಮಿಸಿ ಪ್ರಶ್ನೆಪತ್ರಿಕೆಗಳನ್ನು ನೀಡಿತ್ತು. ಆಯಾ ವಿಷಯದ ಪರೀಕ್ಷೆ ಇರುವ ದಿನ ಪ್ರಶ್ನೆ ಪತ್ರಿಕೆಯನ್ನು ಸಂಸ್ಥೆ ನೀಡಬೇಕಿತ್ತು. ಆದರೆ, ನಗರ ವ್ಯಾಪ್ತಿಯಲ್ಲಿ ನಿಗದಿತ ದಿನಕ್ಕೂ ಮುನ್ನವೇ ವಿಷಯಗಳ ಪ್ರಶ್ನೆಪತ್ರಿಕೆಯನ್ನು ಹಂಚಿಕೆ ಮಾಡಿರುವುದರಿಂದ ಜಿಲ್ಲಾದ್ಯಂತ ಮೂರೂ ವಿಷಯಗಳ ಪರೀಕ್ಷೆಗಳನ್ನು ರದ್ದುಗೊಳಿಸಿ ಮುಂದೂಡಲಾಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚನೆಯಂತೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆ ಹಂತದಲ್ಲೇ ಸಿದ್ಧಪಡಿಸಲಾಗಿದ್ದು, ವೇಳಾ ಪಟ್ಟಿಯಂತೆ ಪ್ರಶ್ನೆ ಪತ್ರಿಕೆಗಳನ್ನು ಹಂಚಿಕೆ ಮಾಡುವುದಕ್ಕೆ ಕಾರ್ಮೆಲ್‌ ಕಾಲೇಜನ್ನು ನೋಡಲ್‌ ಸಂಸ್ಥೆಯಾಗಿ ನೇಮಿಸಿದ್ದೆವು. ಆ ಸಂಸ್ಥೆ ಪ್ರಶ್ನೆ ಪತ್ರಿಕೆ ಹಂಚಿಕೆ ಮಾಡುವ ವೇಳೆ ಮಾಡಿರುವ ಲೋಪದಿಂದ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಹಾಗಾಗಿ ಜೀವಶಾಸ್ತ್ರ, ಕಂಪ್ಯೂಟರ್‌ ಸೈನ್ಸ್‌ ಮತ್ತು ಸಂಖ್ಯಾ ಶಾಸ್ತ್ರ ವಿಷಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

- ಜಯಶಂಕರಪ್ಪ, ಉಪ ನಿರ್ದೇಶಕರು(ಪ್ರಭಾರ), ಪದವಿ ಪೂರ್ವ ಶಿಕ್ಷಣ ಇಲಾಖೆ