ಪ್ರಶ್ನೆ ಪತ್ರಿಕೆ ಸೋರಿಕೆ: ಶಿಕ್ಷಕರಿಬ್ಬರ ಅಮಾನತು

| Published : Feb 02 2024, 01:01 AM IST

ಸಾರಾಂಶ

ಸರ್ಕಾರಿ ಆದರ್ಶ ವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ 29 ಏಪ್ರಿಲ್ 2023ನೇ ಸಾಲಿಗೆ ನಡೆದ ಜವಾಹರ ನವೋದಯ ಶಾಲೆಗಳ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದ ಖಚಿತ ಆರೋಪದ ಮೇಲೆ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕನನ್ನು ಶಾಲಾ ಶಿಕ್ಷಣ ಇಲಾಖೆ ಹಾಗೂ ಶಿಸ್ತು ಪ್ರಾಧಿಕಾರಿಗಳಾದ ಅಪರ ಅಯುಕ್ತ ಡಾ. ಆಕಾಶ ಎಸ್. ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಆಳಂದ

ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮ ಇನ್ನೂ ಹಸಿರಿರುವಾಗಲೇ ಶಾಲಾ ಮಕ್ಕಳ ಪ್ರವೇಶ ಪರೀಕ್ಷೆಯಲ್ಲೂ ಸ್ವತಃ ನಿಯೋಜಿತ ಮುಖ್ಯ ಶಿಕ್ಷಕ, ಸಹ ಶಿಕ್ಷಕರಿಬ್ಬರು ಸೇರಿಕೊಂಡು ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವ ಮೂಲಕ ಪ್ರತಿಭಾವಂತ ಮಕ್ಕಳ ಬದುಕಿಗೆ ಕೊಳ್ಳಿ ಇಡುವ ನೀಚ ಕೆಲಸವನ್ನು ಮಾಡಿರುವ ಮತ್ತೊಂದು ಹಗರಣ ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ 29 ಏಪ್ರಿಲ್ 2023ನೇ ಸಾಲಿಗೆ ನಡೆದ ಜವಾಹರ ನವೋದಯ ಶಾಲೆಗಳ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದ ಖಚಿತ ಆರೋಪದ ಮೇಲೆ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕನನ್ನು ಶಾಲಾ ಶಿಕ್ಷಣ ಇಲಾಖೆ ಹಾಗೂ ಶಿಸ್ತು ಪ್ರಾಧಿಕಾರಿಗಳಾದ ಅಪರ ಅಯುಕ್ತ ಡಾ. ಆಕಾಶ ಎಸ್. ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇದರಿಂದಾಗಿ ಸದರಿ ಪರೀಕ್ಷೆಯಲ್ಲಿ ನೊಂದ ಪಾಲಕರು ಮತ್ತು ವಿದ್ಯಾರ್ಥಿಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ತಾಲೂಕಿನ ಶಿಕ್ಷಣ ಇಲಾಖೆಯ ಹಿಂದಿನ ಕ್ಷೇತ್ರ ಸಮನ್ವಯಾಧಿಕಾರಿ ಪ್ರಭಾರಿ ಆಗಿದ್ದ ಪಡಸಾವಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜ ದೊಡ್ಡಮನಿ, ಹಾಗೂ ಮೋಘಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪರಮೇಶ್ವರ ದುಲಂಗೆ ಎಂಬುವರೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡಬಂದ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಜ.17ರಂದು ಅಪರ ಆಯುಕ್ತರು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ನಿಯಮ-98(ಎ),ಪ್ರಕಾರ, ಜೀವನಾಂಶ ಭತ್ಯೆ ಪಡೆಯಲು, ಸದರಿಯವರುಗಳು ಅರ್ಹರಿರುತ್ತಾರೆ. ಸದರಿಯವರುಗಳು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಎಂದು ಅಮಾನತ್ತಿನ ಆದೇಶದಲ್ಲಿ ಸೂಚಿಸಿದ್ದಾರೆ.

ಪ್ರಕರಣ ಬೆನ್ನಟ್ಟಿದ ಪಾಲಕರು: ದೇವಿಂದ್ರಪ್ಪ ಎಂ. ಶವರೆ ಮತ್ತು ಅರ್ಜುನ ಇಂಗಳೆ ಹಾಗೂ ಇತರ ಪಾಲಕರು ಸೇರಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಬಸವರಾಜ ದೊಡ್ಡಮನಿ ಹಾಗೂ ಪರಮೇಶ್ವರ ದುಲಂಗೆ ಅವರ ವಿರುದ್ಧ ಸರಣಿ ನಾಲ್ಕು ಬಾರಿ ಶಿಕ್ಷಣಾಧಿಕಾರಿ, ಡಿಡಿಪಿಐ ನಂತರ ಅಪರ ಆಯುಕ್ತರಿಗೆ ದೂರು ಸಲ್ಲಿಸಿ ಬೆನ್ನು ಬಿದ್ದ ಕಾರಣ ಎಚ್ಚೆತ್ತ ಶಿಕ್ಷಣ ಇಲಾಖೆ ಸಾಕ್ಷಿ ಮತ್ತು ಆರೋಪಿತರ ಹೇಳಿಕೆ ಆಲಿಸಿ ಈ ಕ್ರಮ ಜರುಗಿದೆ.

ಅಮಾನತ್ತಾದ ಬಸವರಾಜ ದೊಡ್ಡಮನಿ ಹಾಗೂ ಪರಮೇಶ್ವರ ದುಲಂಗೆ ಅವರು, ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿ ಪರಮೇಶ್ವರ ದುಲಂಗೆ ಶಿಕ್ಷಕ ಪಟ್ಟಣದ ಪ್ರಾರ್ಥನಾ ಹಿರಿಯ ಪ್ರಾಥಮಿಕ ಶಾಲೆಯ ನವೋದಯ ಪರೀಕ್ಷೆಗೆ ಸಂಬಂಧಿತ ಕೋಚಿಂಗ ಸೆಂಟರ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿ ಉತ್ತರಗಳನ್ನು ಪೂರೈಸಿ ಸದರಿ ಕೋಚಿಂಗ ಕೇಂದ್ರದ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನ ಪಡೆಯುವಂತೆ ಮಾಡಿದ್ದರು. ಎಂಬಂಶ ಹೊರಬಿದ್ದಿದೆ.

ಈ ಹಗರಣಕ್ಕೆ ಸಂಬಂಧಿಸಿದಂತೆ ಹಿಂದಿನ ಕ್ಷೇತ್ರ ಸಮನ್ವಯಾಧಿಕಾರಿ ಆಗಿದ್ದ ಪಡಸಾವಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜ ದೊಡ್ಡಮನಿ ಹಾಗೂ ಮೋಘಾ ಕೆ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪರಮೇಶ್ವರ ದುಲಂಗೆ ಸೇರಿಕೊಂಡು ಪರೀಕ್ಷಾ ನಿಯಮಬಾಹಿರವಾಗಿ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆಗಳನ್ನು ಮಾಡಿದ್ದಾರೆ. ಅಲ್ಲದೆ, ಪ್ರಾರ್ಥನಾ ಕೋಚಿಂಗ ಕೇಂದ್ರವೊಂದರಲ್ಲೇ 20 ವಿದ್ಯಾರ್ಥಿಗಳು ಹೆಚ್ಚಿನ ಅಂಕಪಡೆದು ಪಾಸಾಗಿದ್ದಾರೆ ಎಂದು ನೊಂದಪಾಲಕ ದೇವಿಂದ್ರಪ್ಪ ಎಂ. ಶವರೆ ಮತ್ತು ಅರ್ಜುನ ಇಂಗಳೆ ಹಾಗೂ ಇತರ ಪಾಲಕರು ದೂರು ಸಲ್ಲಿಸಿದ್ದರು.

ವರದಿಯಲ್ಲಿ ಆರೋಪಗಳು ಸಾಬೀತು: ಪಾಲಕರ ಅರ್ಜಿಯ ದೂರಿನಂತೆ ಶಿಕ್ಷಣ ಇಲಾಖೆಯ ಹಂತ, ಹಂತದ ನಿಯೋಜಿತ ತನಿಖಾಧಿಕಾರಿಗಳು ತಮ್ಮ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದಂತೆ ಪಟ್ಟಣದ ಪ್ರಾರ್ಥನಾ ಕೋಚಿಂಗ ಸೆಂಟರ್‍ನಲ್ಲಿ ಕೊಂಚಿಂಗ ಪಡೆದ ವಿದ್ಯಾರ್ಥಿಗಳು, ಜವಾಹರ ನವೋದಯ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳು ಪಡೆದಿರುವುದು, ಪ್ರ್ರಾಥಮಿಕ ವಿಚಾರಣಾ ವರದಿಗಳಿಂದ ಮೇಲ್ನೋಟಕ್ಕೆ ಸಾಬೀತಾಗಿರುವುದು ಕಂಡುಬಂದಿರುವುದರಿಂದ ಹಿಂದಿನ ಕ್ಷೇತ್ರ ಸಮನ್ವಯಾಧಿಕಾರಿ ಬಸವರಾಜ ದೊಡ್ಡಮನಿ, ಹಾಗೂ ಪರಮೇಶ್ವರ ದುಲಂಗೆ ಇವರು ಸರ್ಕಾರಿ ನೌಕರರಾಗಿದ್ದುಕೊಂಡು ಸರ್ಕಾರಿ ನೌಕರರ ನಿಯಮ (1), (11), (111) ಉಲ್ಲಂಘಿಸಿದ್ದಾರೆ ಎಂದು ಉಲ್ಲೇಖಿಸಿದ್ದು, ಅಲ್ಲದೆ, ಶಿಸ್ತು ಕ್ರಮಕ್ಕೆ ಗುರಿಯಾಗಿರುವ ಕುರಿತು ಶಿಕ್ಷಣ ಇಲಾಖೆ ಉಪನಿರ್ದೇಶಕರು, ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಲಬುರಗಿ ಆರ್‌ಎಂಎಸ್‍ಎ ಸಹಾಯಕ ಸಮನ್ವಯಾಧಿಕಾರಿಗಳ ಪರಿಶೀಲನಾ ವರದಿ ಅನ್ವಯ ಕುರಿತು ಅಮಾನತಾದ ಕುರಿತು ಪತ್ರದಲ್ಲಿ ಉಲ್ಲೇಖಿಸಲಾಗಿದೆ.