ಸಾರಾಂಶ
ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಕೇತಗಾನಹಳ್ಳಿ ಜಮೀನು ಮಾರಿದ್ದ ಸುಮಾರು 60ಕ್ಕೂ ಹೆಚ್ಚು ರೈತರ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡರು.
ರಾಮನಗರ:
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಾಲೂಕಿನ ಬಿಡದಿ ಹೋಬಳಿ ಕೇತಗಾನಹಳ್ಳಿಯಲ್ಲಿ ಭೂಮಿ ಮಾರಾಟ ಮಾಡಿದ್ದ ಮೂಲ ಮಾಲೀಕರನ್ನು ತಹಸೀಲ್ದಾರ್ ಸೋಮವಾರ ವಿಚಾರಣೆ ನಡೆಸಿದರು.ನಗರದ ತಾಲೂಕು ಆಡಳಿತ ಸೌಧದಲ್ಲಿನ ಸಭಾಂಗಣದಲ್ಲಿ ತಹಸೀಲ್ದಾರ್ ತೇಜಸ್ವಿನಿರವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಕೇತಗಾನಹಳ್ಳಿ ಜಮೀನು ಮಾರಿದ್ದ ಸುಮಾರು 60ಕ್ಕೂ ಹೆಚ್ಚು ರೈತರ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡರು.
ಕುಮಾರಸ್ವಾಮಿ ಅವರಿಗೆ ಜಮೀನು ಮಾರಾಟ ಮಾಡಿದ್ದ 70ಕ್ಕೂ ಹೆಚ್ಚು ಮೂಲ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲ ಭೂ ಮಾಲೀಕರಾದ ರೈತರನ್ನು ವಿಚಾರಣೆ ನಡೆಸಿದ್ದರು. ಈಗ ತಹಸೀಲ್ದಾರ್ ತೇಜಸ್ವಿನಿರವರು ಬಿಡದಿ ಭಾಗದ ಕಂದಾಯ ಅಧಿಕಾರಿಗಳ ಜೊತೆ ರೈತರ ವಿಚಾರಣೆಗೊಳಪಡಿಸಿದರು.ಈ ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರೈತ ಶ್ರೀನಿವಾಸ್, 1976ರಲ್ಲಿ ನಮಗೆ ಸಾಗುವಳಿ ಚೀಟಿ ನೀಡಲಾಗಿತ್ತು. ನಮ್ಮ ಅಜ್ಜಿ 2 ಎಕರೆ ಜಮೀನನ್ನು ಕುಮಾರಸ್ವಾಮಿ ಅವರಿಗೆ ಮಾರಾಟ ಮಾಡಿದ್ದರು. ಸದ್ಯ ಅವರ ಪರವಾಗಿ ನಾನು ಇಂದು ವಿಚಾರಣೆಗೆ ಹಾಜರಾಗಿದ್ದೇನೆ. ಹಾಗಾಗಿ ತಹಸೀಲ್ದಾರ್ ವಿಚಾರಣೆ ಮಾಡಿದರು ಎಂದು ಪ್ರತಿಕ್ರಿಯಿಸಿದರು.ಜಮೀನು ನಿಮ್ಮ ಹೆಸರಿಗೆ ಯಾವಾಗ ಆಯಿತು. ನೀವು ಯಾವಾಗ ಮಾರಾಟ ಮಾಡಿದರು ಎನ್ನುವ ಬಗ್ಗೆ ಕೇಳಿದರು. ನಮಗೆ ಗೊತ್ತಿರುವ ಮಾಹಿತಿಯನ್ನು ನಾವು ನೀಡಿದ್ದೇವೆ. ಆ ಜಮೀನಿನಲ್ಲಿ ಖರಾಬು ಜಮೀನು ಇರಬಹುದು. ಹಾಗಾಗಿ ಒತ್ತುವರಿ ಆಗಿದೆ ಎನ್ನುತ್ತಿರಬಹುದು ಎಂದು ಶ್ರೀನಿವಾಸ್ ತಿಳಿಸಿದರು.
------