ಈ ಸರ್ಕಾರಿ ಶಾಲೆ ದಾಖಲಾತಿಗೆ ಸರದಿ ಸಾಲು

| Published : May 30 2025, 12:28 AM IST

ಸಾರಾಂಶ

ಗ್ರಾಮೀಣ ಪ್ರದೇಶದ ಈ ಸರ್ಕಾರಿ ಶಾಲೆಯಲ್ಲಿ ಆರಂಭವಾಗಿರುವ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ದಾಖಲಾತಿ ಮಾಡಲು ಬೆಳಗಿನ ಜಾವದಲ್ಲೇ ಪಾಲಕರು ಸರದಿ ಸಾಲಿನಲ್ಲಿ ನಿಂತಿದ್ದಾರೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಎಲ್ಲ ಕಡೆಗೂ ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಖಾಸಗಿ ಶಾಲೆಯಲ್ಲಿ ದಾಖಲಾತಿ ಮಾಡಲು ಮೊರೆ ಹೋಗುತ್ತಿರುವುದು ಸರ್ವೇ ಸಾಮಾನ್ಯ, ಆದರೆ ಗ್ರಾಮೀಣ ಪ್ರದೇಶದ ಈ ಸರ್ಕಾರಿ ಶಾಲೆಯಲ್ಲಿ ಆರಂಭವಾಗಿರುವ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ದಾಖಲಾತಿ ಮಾಡಲು ಬೆಳಗಿನ ಜಾವದಲ್ಲೇ ಪಾಲಕರು ಸರದಿ ಸಾಲಿನಲ್ಲಿ ನಿಂತಿದ್ದಾರೆ.

ಹೌದು, ತಾಲೂಕಿನ ಮಾಗಳ ಗ್ರಾಮದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭವಾಗಿವೆ. ಪ್ರತಿ ವರ್ಷವೂ ಈ ಶಾಲೆಯಲ್ಲಿ ತಮ್ಮ ಮಕ್ಕಳನ್ನು ದಾಖಲಾತಿ ಮಾಡಿಸಲು ಪಾಲಕರು ಪೈಪೋಟಿ ಇದೆ. ಗುಣಮಟ್ಟದ ಶಿಕ್ಷಣದ ಜತೆಗೆ ಪಿಎಂಶ್ರೀ ಯೋಜನೆಯ ಹತ್ತಾರು ಸೌಲಭ್ಯಗಳು ದೊರೆಯುತ್ತಿವೆ.

ಈಗಾಗಲೇ ಈ ಶಾಲೆಯಲ್ಲಿ 1 ರಿಂದ 7ತರಗತಿ ವರೆಗೂ ಕನ್ನಡ ಮಾಧ್ಯಮ, 1 ರಿಂದ 7 ತರಗತಿ ವರೆಗೂ ಆಂಗ್ಲ ಮಾಧ್ಯಮ ತರಗತಿ ಇವೆ, ಜತೆಗೆ ಎಲ್‌ಕೆಜಿ, ಯುಕೆಜಿ ತರಗತಿ ನಡೆಯುತ್ತಿವೆ. ಎಲ್‌ಕೆಜಿ, ಯುಕೆಜಿಯಲ್ಲಿ 72 ವಿದ್ಯಾರ್ಥಿಗಳು, 1 ರಿಂದ 7 ತರಗತಿಯ ಆಂಗ್ಲ ಮಾಧ್ಯಮದಲ್ಲಿ 193 ವಿದ್ಯಾರ್ಥಿಗಳು ಮತ್ತು ಕನ್ನಡ ಮಾಧ್ಯಮದಲ್ಲಿ 404 ಮಕ್ಕಳು ಸೇರಿದಂತೆ ಒಟ್ಟು ಸದ್ಯ 669 ವಿದ್ಯಾರ್ಥಿಗಳು ದಾಖಲಾತಿಯಾಗಿದ್ದಾರೆ.

ಕೊಠಡಿಗಳ ಕೊರತೆ:

ಈ ಶಾಲೆಯಲ್ಲಿ ಕನ್ನಡ ಮಾಧ್ಯಮ, ಆಂಗ್ಲ ಮಾಧ್ಯಮ ತರಗತಿಗಳು ಒಂದೇ ಆವರಣದಲ್ಲಿವೆ. 18 ಕೊಠಡಿಗಳು ಮಾತ್ರ ಇವೆ, ಇದರಲ್ಲಿ 6 ಅತಿ ಹಳೆಯದಾಗಿರುವ ಚಿಕ್ಕ ಕೊಠಡಿಗಳಿವೆ, 20 ವಿದ್ಯಾರ್ಥಿಗಳು ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ, ಲಭ್ಯ ಇರುವ ಕೊಠಡಿಗಳಲ್ಲೇ ಶಿಕ್ಷಕರು ಮಕ್ಕಳಿಗೆ ಅಭ್ಯಾಸ ಮಾಡಿಸುತ್ತಿದ್ದಾರೆ. ಇನ್ನು 6 ಕೊಠಡಿಗಳ ಬೇಡಿಕೆ ಇದೆ. ಇನ್ನು 4 ಜನ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಉಳಿದಂತೆ ಶುದ್ಧ ಕುಡಿವ ನೀರು, ಆಟದ ಮೈದಾನ, ಶೌಚಾಲಯ ವ್ಯವಸ್ಥೆ ಇದೆ.------------------

ಕೋಟ್‌ನಮ್ಮ ಮಕ್ಕಳನ್ನು ದೂರದ ಖಾಸಗಿ ಶಾಲೆಯ ಆಂಗ್ಲ ಮಾಧ್ಯಮಕ್ಕೆ ಲಕ್ಷಾಂತರ ಹಣ ಪಾವತಿಸಿ, ಶಾಲೆಗೆ ಕಳಿಸುವಷ್ಟು ಶಕ್ತಿ ಇಲ್ಲ, ನಮ್ಮೂರಲ್ಲೇ ಸರ್ಕಾರದ ಆಂಗ್ಲ ಮಾಧ್ಯಮ ಶಾಲೆ ಇರುವ ಕಾರಣ ಎಲ್‌ಕೆಜಿ ತರಗತಿಗೆ ದಾಖಲಾತಿ ಮಾಡಲು ಬೆಳಗಿನ ಜಾವದಲ್ಲೇ ಬಂದು ಸರದಿ ಸಾಲಿನಲ್ಲಿ ನಿಂತಿದ್ದೇವೆ. ಹಳ್ಳಪ್ನನವರ್‌ ನಾಗರಾಜ, ಮಾಗಳ

-----------------

ಮಾಗಳ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ವರೆಗೂ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣ ವ್ಯವಸ್ಥೆ ಇದೆ. ಎಲ್‌ಕೆಜಿ, ಯುಕೆಜಿಗೆ ಮಕ್ಕಳನ್ನು ದಾಖಲು ಮಾಡಲು 42 ಅರ್ಜಿ ಸಲ್ಲಿಕೆ ಆಗಿವೆ. ಇದರಲ್ಲಿ ಸರ್ಕಾರದ ನಿರ್ದೇಶನದಂತೆ 30 ಮಕ್ಕ‍ಳನ್ನು ಮಾತ್ರ ದಾಖಲಾತಿ ಮಾಡಿಕೊಳ್ಳಲಾಗಿದೆ. ಉಳಿದ ಮಕ್ಕಳ ದಾಖಲಾತಿಗಾಗಿ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುತ್ತೇವೆ.

ಡಿ.ವಿರೂಪಣ್ಣ, ಮುಖ್ಯ ಶಿಕ್ಷಕರು, ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾಗಳ