ಆಧಾರ್ ಕಾರ್ಡ್‌ ತಿದ್ದುಪಡಿ ಮಾಡಿಸಿಕೊಳ್ಳಲು ಕೊಪ್ಪಳದಲ್ಲಿ ಸಾರ್ವಜನಿಕರು ಬೆಳಗಿನ ಜಾವ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಧಾರ್ ತಿದ್ದುಪಡಿಗೆ ದಿನಕ್ಕೆ ಕೇವಲ 50 ಕೂಪನ್‌ಗಳನ್ನು ಮಾತ್ರ ವಿತರಿಸಲಾಗುತ್ತಿದೆ.

ಕೊಪ್ಪಳ: ಆಧಾರ್ ಕಾರ್ಡ್‌ ತಿದ್ದುಪಡಿ ಮಾಡಿಸಿಕೊಳ್ಳಲು ಕೊಪ್ಪಳದಲ್ಲಿ ಸಾರ್ವಜನಿಕರು ಬೆಳಗಿನ ಜಾವ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಗ್ರಾಮ ಒನ್ ಕೇಂದ್ರದ ಮುಂದೆ ಬೆಳಗಿನ ಜಾವವೇ ಜನರು ಸರತಿ ಕಾಯ್ದಿರಿಸಿಕೊಂಡು ಕೂಪನ್‌ಗಾಗಿ ಕಾಯುತ್ತಿರುವ ದೃಶ್ಯ ಕಂಡುಬಂತು. ಮಹಿಳೆಯರು, ವೃದ್ಧರು ಸೇರಿದಂತೆ ಹಲವರು ಕತ್ತಲಿನಲ್ಲೇ ಕೇಂದ್ರದ ಮುಂದೆ ಜಮಾಯಿಸುತ್ತಿದ್ದಾರೆ.

ಆಧಾರ್ ತಿದ್ದುಪಡಿಗೆ ದಿನಕ್ಕೆ ಕೇವಲ 50 ಕೂಪನ್‌ಗಳನ್ನು ಮಾತ್ರ ವಿತರಿಸಲಾಗುತ್ತಿದೆ. ಹೀಗಾಗಿ ಕೂಪನ್ ಪಡೆಯಲು ಪ್ರತಿದಿನ ನಿಗದಿತ ಸಂಖ್ಯೆಯ ಜನರು ಮಾತ್ರ ಅವಕಾಶ ಪಡೆಯುತ್ತಿದ್ದು, ಉಳಿದವರು ಮಾರನೇ ದಿನ ಮತ್ತೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಇದೇ ಕಾರಣಕ್ಕೆ ಬೆಳಗಿನ ಜಾವದಿಂದಲೇ ಕೇಂದ್ರದ ಮುಂದೆ ಜನದಟ್ಟಣೆ ಕಂಡುಬರುತ್ತಿದೆ.

ರೇಷನ್ ಕಾರ್ಡ್‌ಗಳ ಇ-ಕೆವೈಸಿ ಪ್ರಕ್ರಿಯೆಗೆ ಆಧಾರ್‌ನಲ್ಲಿರುವ ಮಾಹಿತಿ ಸರಿಯಾಗಿರಬೇಕು ಎಂದು ಅಧಿಕಾರಿಗಳು ಸೂಚಿಸಿರುವ ಹಿನ್ನೆಲೆಯಲ್ಲಿ ಆಧಾರ್ ತಿದ್ದುಪಡಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಸೀಮಿತ ಸಂಖ್ಯೆಯ ಕೂಪನ್ ವಿತರಣೆ ಸಾರ್ವಜನಿಕರಿಗೆ ತೊಂದರೆಯಾಗಿ ಪರಿಣಮಿಸಿದೆ. ಹೀಗಾಗಿ ಆಧಾರ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬೇಕಾಗಿರುವುದರಿಂದ ಪಡಿತರದಾರರು ಪರಿತಪಿಸುತ್ತಿದ್ದಾರೆ.

ಈ ಹಿಂದೆ ಯಾರದೋ ಆಧಾರ್‌ ಕಾರ್ಡ್‌ಗೆ ಯಾರದೋ ನಂಬರ್ ಇವೆ. ಈಗ ಅವರದ್ದೇ ನಂಬರ್ ಇರುವುದು ಕಡ್ಡಾಯ. ಸರ್ಕಾರ ಗ್ಯಾರಂಟಿ ಯೋಜನೆಯ ಸೌಲಭ್ಯಕ್ಕೆ ಇದು ತೀರಾ ಅಗತ್ಯವಾಗಿರುವುದರಿಂದ ತಿದ್ದುಪಡಿಗಾಗಿ ಹೆಣಗಾಡುವಂತೆ ಆಗಿದೆ.

ಕೂಪನ್‌ಗಳ ಸಂಖ್ಯೆಯನ್ನು ಹೆಚ್ಚಿಸಿ, ಹೆಚ್ಚುವರಿ ಕೇಂದ್ರ ಅಥವಾ ಸಿಬ್ಬಂದಿ ನಿಯೋಜಿಸಿ ಆಧಾರ್ ತಿದ್ದುಪಡಿ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.ನನ್ನ ಆಧಾರ್ ಕಾರ್ಡ್‌ಗೆ ನಮ್ಮ ಮನೆಯವರ ನಂಬರ್ ಇದೆ ಮತ್ತು ನನ್ನ ಹೆಸರು ತಪ್ಪಾಗಿದೆ. ಅದಕ್ಕೆ ತಿದ್ದಿಸಿಕೊಳ್ಳಲು ಬಂದಿದ್ದೇನೆ ಎಂದು ಲಕ್ಷ್ಮಮ್ಮ ಕಾತರಕಿ ಹೇಳಿದರು.