ಕನ್ನಡಪ್ರಭ ವಾರ್ತೆ ಮದ್ದೂರು
ತೋಟಗಾರಿಕೆ ಇಲಾಖೆ ಹಿಂಭಾಗದಲ್ಲಿ ಉಪ ರೈಲು ನಿಲ್ದಾಣ ಸ್ಥಾಪನೆಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಗುರುವಾರ ಹೇಳಿದರು.ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಯದುವೀರ್ ಒಡೆಯರ್ ಮತ್ತು ಇಲಾಖೆ ಅಧಿಕಾರಿಗಳೊಂದಿಗೆ ವಿಶೇಷ ರೈಲಿನಲ್ಲಿ ವಿಂಡೋ ಟ್ರೈಲಿಂಗ್ ಮೂಲಕ ರೈಲು ಮಾರ್ಗ ಮತ್ತು ನಿಲ್ದಾಣಗಳ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿದ ನಂತರ ಮದ್ದೂರು ರೈಲು ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರು, ಮೈಸೂರು ರೈಲು ಮಾರ್ಗದ ನಡುವೆ ಮದ್ದೂರಿನ ತೋಟಗಾರಿಕೆ ಇಲಾಖೆ ಬಳಿ ಉಪ ರೈಲು ನಿಲ್ದಾಣ ಸ್ಥಾಪನೆ ಮಾಡುವಂತೆ ಸಾರ್ವಜನಿಕರು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸಹ ಈ ಬಗ್ಗೆ ತುರ್ತು ಗಮನ ಹರಿಸುವಂತೆ ಮನವಿ ಸಲ್ಲಿಸಿದ್ದಾರೆ ಎಂದರು.ನಿಲ್ದಾಣ ಸ್ಥಾಪನೆಗೆ ಅಗತ್ಯ ಜಾಗ ಗುರುತಿಸುವಂತೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ, ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ನಾನು ಸರ್ಕಾರದೊಂದಿಗೆ ಮಾತುಕತೆಗೆ ನಡೆಸಿ ಅಗತ್ಯ ಜಾಗ ಪಡೆದು ಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮದ್ದೂರು ರೈಲು ನಿಲ್ದಾಣದ ಆಧುನೀಕರಣ ಈಗಾಗಲೇ ಯೋಜನೆ ರೂಪಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಬೆಂಗಳೂರು- ಮೈಸೂರು ನಡುವೆ ಇನ್ನೂ ಎರಡು ಮೂರು ರೈಲುಗಳ ಸಂಚಾರವನ್ನು ಹೆಚ್ಚಳ ಮಾಡಲಾಗುವುದು ಎಂದು ಸಚಿವ ಸೋಮಣ್ಣ ತಿಳಿಸಿದರು.
ಇದೇ ವೇಳೆ ಮದ್ದೂರಿನ ನಿಡಘಟ್ಟ, ಹೊಸಹಳ್ಳಿ, ಸೋಮನಹಳ್ಳಿ, ಚನ್ನೇಗೌಡನ ದೊಡ್ಡಿ, ವಳೆಗೆರೆಹಳ್ಳಿ, ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ವಳಗೆರೆಹಳ್ಳಿ ಸಂಪರ್ಕಿಸುವ ಸ್ಥಳಗಳಲ್ಲಿ ರೈಲ್ವೆ ಅಂಡರ್ ಪಾಸ್ ನಿರ್ಮಾಣಕ್ಕೆ ಸಹ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಮನವಿ ಮೇರೆಗೆ ಅಗತ್ಯ ಕ್ರಮ ವಹಿಸುವುದಾಗಿ ಸಚಿವ ಸೋಮಣ್ಣ ಭರವಸೆ ನೀಡಿದರು.ಕೇಂದ್ರ ಸಚಿವರು, ಸಂಸದರಿಗೆ ಅದ್ಧೂರಿ ಸ್ವಾಗತ
ಕನ್ನಡಪ್ರಭ ವಾರ್ತೆ ಮದ್ದೂರುಜಿಲ್ಲೆಯ ರೈಲು ನಿಲ್ದಾಣಗಳ ಪರಿಶೀಲನೆಗೆ ಆಗಮಿಸಿದ್ದ ರೈಲ್ವೆ ಖಾತೆರಾಜ್ಯ ಸಚಿವ ವಿ.ಸೋಮಣ್ಣ, ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದ ಯದುವೀರ್ ಒಡೆಯರ್ ಅವರನ್ನು ಪಟ್ಟಣದ ರೈಲು ನಿಲ್ದಾಣದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಗುರುವಾರ ಅದ್ಧೂರಿ ಸ್ವಾಗತ ನೀಡಿದರು.
ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್ ಸೇರಿದಂತೆ ಪಕ್ಷದ ಹಲವು ಮುಖಂಡರು ಸಚಿವರಿಗೆ ಮಾಲಾರ್ಪಣೆ ಮಾಡ ಜೈಕಾರ ಹಾಕಿ ಅದ್ದೂರಿ ಸ್ವಾಗತ ಕೋರಿದರು.ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಸೋಮಣ್ಣ, ಕಳೆದ 50 ವರ್ಷಗಳಿಂದ ನೆನೆಗುದಿ ಬಿದ್ದಿದ್ದ ಈ ಭಾಗದ ರೈಲು ನಿಲ್ದಾಣಗಳ ಆಧುನಿಕರಣ ಮತ್ತು ಅಗತ್ಯ ಮೂಲ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸುವಂತೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವುಗಳು ಬೆಂಗಳೂರು ಮೈಸೂರು ನಡುವೆ ಸಂಚಾರ ಮಾಡಿ ನಿಲ್ದಾಣಗಳಿಗೆ ಭೇಟಿ ನೀಡಿ ಆಧುನೀಕರಣಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್ಮುಲ್ ನಿರ್ದೇಶಕ ರಾಮಚಂದ್ರ, ಮಾಜಿ ನಿರ್ದೇ ಶಕಿ ರೂಪ, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಕೆ.ಸತೀಶ್, ಮುಖಂಡರಾದ ಮಲ್ಲಿಕಾರ್ಜುನ್, ಮಧು ಕುಮಾರ್, ವೀರಭದ್ರಸ್ವಾಮಿ, ಕೂಳೆಗೆರೆ ಶೇಖರ್ ಮತ್ತಿತರರು ಇದ್ದರು.