ಸಾರಾಂಶ
- ಕಾಳಿದಾಸ ನಗರದಲ್ಲಿ ನಗರಸಭೆ ಉಪಾಧ್ಯಕ್ಷ, ಪೌರಾಯುಕ್ತರಿಂದ ರಸ್ತೆಗಳ ಪರಿಶೀಲನೆ - - - ಕನ್ನಡಪ್ರಭ ವಾರ್ತೆ ಹರಿಹರ ಕಾಳಿದಾಸ ನಗರದ 14ನೇ ವಾರ್ಡಿಗೆ ನಗರಸಭಾ ಉಪಾಧ್ಯಕ್ಷ ಎಂ.ಜಂಬಣ್ಣ ಹಾಗೂ ಪೌರಾಯುಕ್ತ ಪಿ.ಸುಬ್ರಹ್ಮಣ್ಯ ಶೆಟ್ಟಿ ಬುಧವಾರ ಬೆಳ್ಳಂಬೆಳಗ್ಗೆ ಭೇಟಿ ನೀಡಿ, ತಗ್ಗು- ಗುಂಡಿಗಳು ಬಿದ್ದ ರಸ್ತೆಗಳನ್ನು ಪರಿಶೀಲನೆ ನಡೆಸಿದರು.
ವಾರ್ಡ್ ಸದಸ್ಯ ಅಲ್ತಾಫ್ ಮಾತನಾಡಿ, ವಾರ್ಡ್‌ನ ಬಹುತೇಕ ರಸ್ತೆಗಳು ಹಾಳಾಗಿವೆ. ರಸ್ತೆಗಳ ತಗ್ಗುಗುಂಡಿಗಳ ಕಾರಣ ವಾಹನ ಸಂಚಾರಕ್ಕೆ ಇಲ್ಲಿನ ಜನ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಂತೂ ನರಕ ದರ್ಶನ ಆಗುತ್ತದೆ. ಅನೇಕ ವಾಹನಗಳ ಸವಾರರು ಗುಂಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಮಳೆಯಾದರೆ ಎರಡು- ಮೂರು ದಿನ ರಸ್ತೆಯ ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ಶಾಲೆಗೆ ಹೊರಟ ವಿದ್ಯಾರ್ಥಿಗಳ ಯೂನಿಫಾರ್ಮ್ ಮೇಲೆ ಕೆಸರುನೀರು ಸಿಡಿಯುತ್ತದೆ ಎಂದರು.ವಾರ್ಡಿನ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಜಿಲ್ಲಾಧಿಕಾರಿ ಅವರೇ ಆಯುಕ್ತರಿಗೆ ಮನವಿ ಮಾಡಿದ್ದೇವೆ. ಆದರೂ ಇಲ್ಲಿವರೆಗೂ ವಾರ್ಡಿನ ಮೂಲಸೌಕರ್ಯಗಳ ಬಗ್ಗೆ ವ್ಯವಸ್ಥೆ ಕಲ್ಪಿಸಿಲ್ಲ. ವಾರ್ಡಿನ ಜನರು ದಿನನಿತ್ಯ ನಗರಸಭಾ ಅಧಿಕಾರಿಗಳಿಗೆ ಸದಸ್ಯರಿಗೆ ಶಾಪ ಹಾಕುತ್ತಿದ್ದಾರೆ. ನಗರಸಭೆ ಉಪಾಧ್ಯಕ್ಷ ಜಂಬಣ್ಣ ರೈತರೊಂದಿಗೆ ಇಡೀ ನಗರವನ್ನೇ ರೌಂಡ್ಸ್ ಮಾಡಿ, ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ವಹಿಸುತ್ತಿದ್ದಾರೆ. ಅಧ್ಯಕ್ಷರು ಕೂಡ ಇವರೊಂದಿಗೆ ಕೈ ಜೋಡಿಸಿ ವಾರ್ಡ್ ಅಭಿವೃದ್ಧಿಗೆ ಚಿಂತನೆ ಮಾಡಬೇಕೆಂದು ಮನವಿ ಮಾಡಿದರು.
ಮಳೆನೀರು ಸರಾಗವಾಗಿ ಹರಿದುಹೋಗಲು ರಸ್ತೆಯ ಇಕ್ಕೆಲಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಆದಕಾರಣ ಅನೇಕ ರಸ್ತೆಗಳು ತೀವ್ರ ಹದಗೆಟ್ಟಿವೆ. ಹಲವು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ದುರಸ್ತಿಗೆ ಸ್ಪಂದಿಸಿಲ್ಲ. ಎಂದು ಸ್ಥಳೀಯ ನಿವಾಸಿಗಳು ದೂರಿದರು.ನಿವಾಸಿಗಳ ದೂರು ಆಲಿಸಿದ ಉಪಾಧ್ಯಕ್ಷ ಎಂ. ಜಂಬಣ್ಣ ಮಾತನಾಡಿ, ಇದು ನಿಮ್ಮ ವಾರ್ಡಿನ ಸಮಸ್ಯೆಯಲ್ಲ. ನಗರದ ಬಹುತೇಕ ರಸ್ತೆಯಲ್ಲಿ ನೀರು ಹರಿದುಹೋಗಲು ಜಾಗವಿಲ್ಲದೇ ರಸ್ತೆಯಲ್ಲೆ ನೀರು ನಿಲ್ಲುತ್ತಿದೆ. ಪೌರಾಯುಕ್ತರು, ಅಧ್ಯಕ್ಷರು, ಅಧಿಕಾರಿಗಳ ತಂಡದೊಂದಿಗೆ ಅನೇಕ ಕಡೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ತಿಳಿದಿದ್ದೇನೆ. ಕೆಲ ರಸ್ತೆಗಳಿಗೆ ಟೆಂಡರ್ ಕರೆಯಲಾಗಿದೆ. ತಕ್ಷಣ ಇಲ್ಲಿನ ಗುಂಡಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಪೌರಾಯುಕ್ತ ಸುಬ್ರಹ್ಮಣ ಶೆಟ್ಟಿ ಮಾತನಾಡಿ, ನಗರ ಪ್ರದೇಶದ ಕೆಲವು ವಾರ್ಡ್‌ಗಳಲ್ಲಿ ಮಳೆ ಬಂತೆಂದರೆ ನಿವಾಸಿಗಳಿಗೆ ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಅತಿ ಶೀಘ್ರದಲ್ಲಿ ಹದಗೆಟ್ಟ ರಸ್ತೆ, ಚರಂಡಿ, ವಿದ್ಯುತ್ ದೀಪ ಸೇರಿದಂತೆ ಅವಶ್ಯಕ ಮೂಲಸೌಕರ್ಯಗಳನ್ನು ನಗರದ ನಿವಾಸಿಗಳಿಗೆ ಒದಗಿಸಲಾಗುವುದು ಎಂದು ತಿಳಿಸಿದರು.ಆರೋಗ್ಯ ನಿರೀಕ್ಷಕ ರವಿಪ್ರಕಾಶ್, ನಿವಾಸಿಗಳಾದ ಡಾ. ನಭಿ, ಆರ್.ಮಹೇಶ್, ಮಂಜು ಮೇದಾರ್, ಮೌನೇಶ್, ವಸಂತ, ಗಿರೀಶ್, ಅಬ್ದುಲ್ ಖಾದರ್, ಬಿ.ಕೆ.ಸ್ವಾಮಿ, ಶಫಿ, ನೂರುಲ್ಲಾ ಹಾಗೂ ಇತರರು ಉಪಸ್ಥಿತರಿದ್ದರು. - - - -25ಎಚ್‍ಆರ್‍ಆರ್1:
ಹರಿಹರದ ಕಾಳಿದಾಸ ನಗರದ 14ನೇ ವಾರ್ಡಿಗೆ ನಗರಸಭಾ ಉಪಾಧ್ಯಕ್ಷ ಎಂ.ಜಂಬಣ್ಣ, ಪೌರಾಯುಕ್ತ ಪಿ. ಸುಬ್ರಹ್ಮಣ್ಯ ಶೆಟ್ಟಿ ಬುಧವಾರ ಬೆಳ್ಳಂಬೆಳಗ್ಗೆ ಭೇಟಿ ನೀಡಿ, ತಗ್ಗು- ಗುಂಡಿಗಳ ಬಿದ್ದ ರಸ್ತೆಗಳ ಪರಿಶೀಲನೆ ನಡೆಸಿದರು.