ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ 64,039 ಫಲಾನುಭವಿಗಳು ನೋಂದಣಿಯಾಗಿದ್ದು, ಆಧಾರ್ ಸಿಡಿಂಗ್ ಮತ್ತು ಇ - ಕೆವೈಸಿ ಆಧಾರ್ ಮ್ಯಾಪಿಂಗ್ ಕಾರಣಗಳಿಂದ ಬಾಕಿ ಉಳಿದಿರುವ 243 ಅರ್ಜಿಗಳನ್ನು ಶೀಘ್ರದಲ್ಲಿಯೇ ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಎಚ್. ರಾಜು ತಿಳಿಸಿದರು.ತಾಲೂಕಿನ ಬಿಳಗುಂಬ, ಹರೀಸಂದ್ರ ಹಾಗೂ ಸುಗ್ಗನಹಳ್ಳಿ ಗ್ರಾಪಂ ಸಭಾಂಗಣಗಳಲ್ಲಿ ಗ್ಯಾರಂಟಿ ಯೋಜನೆಗಳ ಕುಂದು ಕೊರತೆ ಸಭೆ ಬಳಿಕ ಮಾತನಾಡಿದರು, ಗೃಹಲಕ್ಷ್ಮೀ ಯೋಜನೆಗಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಕರೆ ಮಾಡಿ ಸಮಸ್ಯೆ ಸರಿಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕಳೆದ ಮೂರು ದಿನಗಳಿಂದ ಬನ್ನಿಕುಪ್ಪೆ (ಕೈ) ಕೈಲಾಂಚ, ಹುಲಿಕೆರೆ ಗುನ್ನೂರು , ಹುಣಸನಹಳ್ಳಿ, ಬಿಳಗುಂಬ, ಹರೀಸಂದ್ರ ಹಾಗೂ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಗ್ಯಾರಂಟಿ ಯೋಜನೆಗಳ ಕುಂದು ಕೊರತೆ ಸ್ವೀಕರಿಸಲಾಗಿದೆ. ಇದರಲ್ಲಿ ಗೃಹಲಕ್ಷ್ಮೀ ಯೋಜನೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಬಂದಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಅವೆಲ್ಲವನ್ನೂ ಬಗೆಹರಿಸಲಾಗುವುದು. ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗದಂತೆ ಕ್ರಮ ವಹಿಸುತ್ತೇವೆ ಎಂದು ಹೇಳಿದರು.ಗೃಹಲಕ್ಷ್ಮೀ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಜಿಎಸ್‌ಟಿ, ಪಾನ್‌ಕಾರ್ಡ್ ನೋಂದಣಿಯಾಗಿರುವುದರಿಂದ ಸಮಸ್ಯೆಯಾಗಿದೆ. ಇಂತಹ ಸಮಸ್ಯೆಗಳ ಅರ್ಜಿಗಳನ್ನು ಖುದ್ಧಾಗಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಸ್ವೀಕರಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಪಡಿತರ ಚೀಟಿ ಸಮಸ್ಯೆಯನ್ನು ಅದೇ ರೀತಿ ಬಗೆಹರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಗಮನ ಸೆಳೆದ ಬಸ್ ಸಮಸ್ಯೆ:ಹರೀಸಂದ್ರ ಗ್ರಾಪಂನಲ್ಲಿ ಗ್ಯಾರಂಟಿ ಯೋಜನೆಗಳ ಕುಂದುಕೊರತೆ ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯ ಕೆಂಪೇಗೌಡನದೊಡ್ಡಿ ವಸತಿ ಶಾಲೆಯ ಮಕ್ಕಳು, ಜಿಗೇನಹಳ್ಳಿ ಮಹಿಳಾ ಹಾಸ್ಟೆಲ್ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿ ಬರಲಸ್ಸಾರಿಗೆ ಬಸ್ ಸಮಸ್ಯೆಯಿದೆ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಸಮಸ್ಯೆ ಬಗೆಹರಿದಿಲ್ಲ ಎಂಬ ಬಗ್ಗೆ ದೂರು ಬಂದವು.
ಆಗ ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಎಚ್.ರಾಜು ಸ್ಥಳದಲ್ಲಿದ್ದ ಕೆಎಸ್‌ಆರ್‌ಟಿಸಿ ಅಧಿಕಾರಿಗೆ ಕೆಂಪೇಗೌಡನದೊಡ್ಡಿಯಿಂದ ರಾಯರದೊಡ್ಡಿ, ಮಹಿಳಾ ಪದವಿ ಕಾಲೇಜು ಬಸ್ ನಿಲ್ದಾಣ, ಎಸ್‌ಪಿ ಆಫೀಸ್ ವೃತ್ತ, ಗೌಸಿಯಾ ಕಾಲೇಜು, ಬಸವನಪುರ ಕಾನೂನು ಕಾಲೇಜು ಮೂಲಕ ಮಾಯಗಾನಹಳ್ಳಿ ಐಟಿಐ ಕಾಲೇಜಿಗೆ ಹೋಗಿ ಬರಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಿ ಎಂದು ಖಡಕ್ ಸೂಚನೆ ನೀಡಿದರು.ಸುಗ್ಗನಹಳ್ಳಿ ಗ್ರಾಪಂನಲ್ಲಿ ಕುಂಬಾರದೊಡ್ಡಿ ಗ್ರಾಮದ ಭಾಗ್ಯಮ್ಮ ಪಡಿತರ ಚೀಟಿ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಎಂದು ಅಹವಾಲು ಹೇಳಿಕೊಂಡಾಗ ವಿ.ಎಚ್.ರಾಜು, ಗೃಹಲಕ್ಷ್ಮೀ ಹಾಗೂ ಪಡಿತರ ಚೀಟಿ ಕಲ್ಪಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಹರೀಸಂದ್ರ ಗ್ರಾಪಂ ಅಧ್ಯಕ್ಷೆ ಜಯಲಕ್ಷಮ್ಮ, ಸದಸ್ಯರಾದ ಮೋಹನ್ ರಾಮ್ ಮನ್ನಾರ್, ಪಿಡಿಒ ದಯಾನಂದ್, ಸುಗ್ಗನಹಳ್ಳಿ ಗ್ರಾಪಂ ಅಧ್ಯಕ್ಷೆ ಅರ್ಪಿತಾ, ಉಪಾಧ್ಯಕ್ಷ ಚಿಕ್ಕಸ್ವಾಮಿ, ಸಿಡಿಪಿಒ ಕಾಂತರಾಜು, ಆಹಾರ ಇಲಾಖೆಯ ಪ್ರಸಾದ್ , ಕೆಎಸ್ ಆರ್ ಟಿಸಿ ಅಧಿಕಾರಿ ಪುಟ್ಟರೇವಯ್ಯ,ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಗೋವಿಂದರಾಜು,ಇಲಾಖಾ ಅಧಿಕಾರಿಗಳು ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಮಾಡಿದರು.