ದೊಡ್ಡಬಳ್ಳಾಪುರ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಶೀಘ್ರ ಅನುದಾನ
KannadaprabhaNewsNetwork | Published : Nov 01 2023, 01:00 AM IST / Updated: Nov 01 2023, 01:01 AM IST
ದೊಡ್ಡಬಳ್ಳಾಪುರ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಶೀಘ್ರ ಅನುದಾನ
ಸಾರಾಂಶ
ದೊಡ್ಡಬಳ್ಳಾಪುರ: ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲು ರಾಜ್ಯ ಸರ್ಕಾರ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಜನತಾ ದರ್ಶನದಲ್ಲಿ ಸ್ವೀಕರಿಸಿದ ದೂರು, ಅಹವಾಲುಗಳನ್ನು ತಿಂಗಳೊಳಗಾಗಿ ಬಗೆಹರಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ದೊಡ್ಡಬಳ್ಳಾಪುರ: ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲು ರಾಜ್ಯ ಸರ್ಕಾರ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಜನತಾ ದರ್ಶನದಲ್ಲಿ ಸ್ವೀಕರಿಸಿದ ದೂರು, ಅಹವಾಲುಗಳನ್ನು ತಿಂಗಳೊಳಗಾಗಿ ಬಗೆಹರಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಬಾಬು ಜಗಜೀವನ ರಾಮ್ ಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನತಾದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರು ಪ್ರತಿದಿನ ಸರ್ಕಾರಿ ಕಚೇರಿಗಳಿಗೆ ಅಲೆಯುವದನ್ನು ತಪ್ಪಿಸಲು ಜನತಾದರ್ಶನ ಕಾರ್ಯಕ್ರಮ ಸಹಕಾರಿಯಾಗುತ್ತದೆ. ಸಾರ್ವಜನಿಕರು ಮನೆ, ಸ್ಮಶಾನ ರಸ್ತೆ, ರಾಜಕಾಲುವೆ, ನಿವೇಶನ ಹಂಚಿಕೆ ಮುಂತಾದ ವಿವಿಧ ರೀತಿಯ ಸಮಸ್ಯೆ, ಬೇಡಿಕೆ, ದೂರು ಅಹವಾಲುಗಳನ್ನು ಸಲ್ಲಿಸುವರು.ಅವುಗಳಲ್ಲಿ ನ್ಯಾಯಾಲಯ ಪ್ರಕರಣಗಳನ್ನು ಹೊರತು ಪಡಿಸಿ ಉಳಿದಂತ ಅರ್ಜಿಗಳನ್ನು ಶೀಘ್ರವೇ ಒಂದು ತಿಂಗಳ ಕಾಲಮಿತಿಯಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಹೇಳಿದರು. ತ್ಯಾಜ್ಯ ನೀರು-ತ್ವರಿತ ಪರಿಹಾರ: ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ದೊಡ್ಡಬಳ್ಳಾಪುರದ ನಾಗರಕೆರೆ ಹಾಗೂ ಬಾಶೆಟ್ಟಿಹಳ್ಳಿ ಕೆರೆಗಳಿಗೆ ಕಾರ್ಖಾನೆಗಳ ತ್ಯಾಜ್ಯ ನೀರು ಹಾದು ಹೋಗಿ ನೀರು ಕಲುಷಿತಗೊಂಡಿರುವ ಬಗ್ಗೆ ವರದಿ ಇದೆ, ಜಿಲ್ಲಾಡಳಿತವು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ ತ್ಯಾಜ್ಯ ನೀರು ಕೆರೆಗಳಿಗೆ ಸೇರದಂತೆ ತಡೆಯಲು ಬದಲಿ ಮಾರ್ಗಗಳನ್ನು ರೂಪಿಸಲು ಸಿದ್ದತೆ ಕೈಗೊಂಡಿದ್ದು ಶೀಘ್ರವೇ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದರು. ಜಿಲ್ಲಾಸ್ಪತ್ರೆ ನಿರ್ಮಾಣ: ದೊಡ್ಡಬಳ್ಳಾಪುರ ದಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಿಸಲು ಈಗಾಗಲೇ ಅನುಮೋದನೆ ದೊರಕಿದ್ದು, ಅನುದಾನ ಬಿಡುಗಡೆ ಮಾಡಲು ಆರೋಗ್ಯ ಸಚಿವರ ಜೊತೆ ಶೀಘ್ರವೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಹಲವು ಮನವಿ ಮುಂದಿಟ್ಟ ಶಾಸಕ: ಶಾಸಕ ಧೀರಜ್ ಮುನಿರಾಜು ಮಾತನಾಡಿ, ತಾಲ್ಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸಿ, ಸಮಸ್ಯೆಯನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಪರಿಹರಿಸಬೇಕು ಎಂದರಲ್ಲದೆ ತಾಲೂಕಿನಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಾಣ, ಒಳಚರಂಡಿ ವ್ಯವಸ್ಥೆ, ನಗರೋತ್ಥಾನ ಕಾಮಗಾರಿಗಳು, ನಿರಾಶ್ರಿತರಿಗೆ ಮನೆ ಕಲ್ಪಿಸುವ ಸಂಬಂಧ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. 15 ದಿನಕ್ಕೊಮ್ಮೆ ಜನತಾ ದರ್ಶನ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ್ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಪ್ರತಿ 15 ದಿನಕ್ಕೊಮ್ಮೆ ಜನತಾದರ್ಶನವನ್ನು ಹಮ್ಮಿಕೊಳ್ಳಲಾಗುವುದು ಜನತಾ ದರ್ಶನದಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಐ.ಪಿ.ಜಿ.ಆರ್.ಎಸ್(IPGRS) ಪೊರ್ಟಲ್ ನಲ್ಲಿ ನೋಂದಾಯಿಸಿ, ವಿಲೇವಾರಿ ಆದ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ದೇವನಹಳ್ಳಿಯಲ್ಲಿ ನಡೆದ ಜನತಾ ದರ್ಶನದಲ್ಲಿ 277 ಅಹವಾಲು ಸ್ವೀಕರಿಸಲಾಗಿತ್ತು ಅದರಲ್ಲಿ 145 ವಿಲೇವಾರಿ ಆಗಿದೆ. ಹೊಸಕೋಟೆಯಲ್ಲಿ ನಡೆದ ಜನತಾದರ್ಶನದಲ್ಲಿ 318 ಅರ್ಜಿಗಳು ಸ್ವೀಕರಿಸಿ 180 ಅರ್ಜಿ ವಿಲೇವಾರಿ ಮಾಡಲಾಗಿದೆ. ಇನ್ನು ಕೆಲವು ನ್ಯಾಯಾಲಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಕುಲಂಕುಶವಾಗಿ ಪರಿಶೀಲಿಸಬೇಕಾಗಿರುವುದರಿಂದ ತಡವಾಗುತ್ತದೆ. ಒಟ್ಟಾರೆ ಶೇಕಡ 70 ರಷ್ಟು ಅರ್ಜಿಗಳು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು. 297 ಅರ್ಜಿ ಸ್ವೀಕಾರ: ಪೋಡಿ ಪ್ರಕರಣ, ಜಮೀನು ತಕರಾರು, ಗ್ರಾಮಗಳಿಗೆ ವಿದ್ಯುತ್ ಸಂಪರ್ಕ, ಜಮೀನು ಸರ್ವೆ, ಸ್ಮಶಾನ ಜಾಗ ಹಾಗೂ ರಸ್ತೆ ವ್ಯವಸ್ಥೆ, ಗೋಮಾಳ ಒತ್ತುವರಿ, ಹಕ್ಕು ಪತ್ರ ಹಂಚಿಕೆ, ಕೆರೆ ಕಟ್ಟೆ ಸಂರಕ್ಷಣೆ, ಪಡಿತರ ಚೀಟಿ ಹಂಚಿಕೆ, ನಿವೇಶನ ಹಂಚಿಕೆ, ಚರಂಡಿ ನಿರ್ಮಾಣ, ಮೂಲಭೂತ ಸಮಸ್ಯೆಗಳು ಸೇರಿದಂತೆ ಒಟ್ಟು 297 ಅಹವಾಲುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಯಿತು. ಜಿಪಂ ಸಿಇಒ ಡಾ.ಕೆ.ಎನ್.ಅನುರಾಧ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ ರಮೇಶ್, ದೊಡ್ಡಬಳ್ಳಾಪುರ ತಹಸೀಲ್ದಾರ್ ವಿದ್ಯಾ ವಿಭಾ ರಾತೋಡ್, ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು, ಡಿವೈಎಸ್ಪಿ ರವಿ, ದೊಡ್ಡಬಳ್ಳಾಪುರ ನಗರಸಭಾ ಅಧ್ಯಕ್ಷರಾದ ಸುಧಾರಾಣಿ, ಉಪಾಧ್ಯಕ್ಷೆ ಫರಾನಾ ತಾಜ್ ಸೇರಿದಂತೆ, ಚುನಾಯಿತ ಜನ ಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು. 31ಕೆಡಿಬಿಪಿ2- ದೊಡ್ಡಬಳ್ಳಾಪುರದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟಿಸಿದರು. 31ಕೆಡಿಬಿಪಿ3- ದೊಡ್ಡಬಳ್ಳಾಪುರದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಜನರ ಅಹವಾಲುಗಳನ್ನು ಸ್ವೀಕರಿಸಿದರು.