ಪೌರಕಾರ್ಮಿಕರಿಗೆ ಶೀಘ್ರ ಮನೆಗಳ ಹಸ್ತಾಂತರ: ಶಾಸಕ ಕೆ.ಎಂ.ಉದಯ್

| Published : Jan 02 2025, 12:34 AM IST

ಸಾರಾಂಶ

ಸರ್ಕಾರ ಸಿದ್ಧಾರ್ಥ ನಗರದ 7 ಮತ್ತು 8ನೇ ವಾರ್ಡ್ ಗಳಲ್ಲಿ ಗೃಹಭಾಗ್ಯ ಯೋಜನೆಯಡಿ 16 ಮನೆಗಳನ್ನು ನಿರ್ಮಿಸಿದೆ. ಮನೆಗಳ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದ್ದು ಮುಂದಿನ 10 ರಿಂದ 15 ದಿನಗಳಲ್ಲಿ ಮನೆಗಳನ್ನು ಉದ್ಘಾಟಿಸಿ ಪೌರಕಾರ್ಮಿಕರಿಗೆ ಹಸ್ತಾಂತರಿಸಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಸಿದ್ಧಾರ್ಥ ನಗರ ಬಡಾವಣೆಯಲ್ಲಿ ರಾಜ್ಯ ಸರ್ಕಾರ ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ 1.95 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಮನೆಗಳನ್ನು ಶೀಘ್ರ ಹಸ್ತಾಂತರಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಬುಧವಾರ ಹೇಳಿದರು.

ಪಟ್ಟಣದ ಲೀಲಾವತಿ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ರಸ್ತೆ ಮತ್ತು ಚರಂಡಿ ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್ಕಾರ ಸಿದ್ಧಾರ್ಥ ನಗರದ 7 ಮತ್ತು 8ನೇ ವಾರ್ಡ್ ಗಳಲ್ಲಿ ಗೃಹಭಾಗ್ಯ ಯೋಜನೆಯಡಿ 16 ಮನೆಗಳನ್ನು ನಿರ್ಮಿಸಿದೆ. ಮನೆಗಳ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದ್ದು ಮುಂದಿನ 10 ರಿಂದ 15 ದಿನಗಳಲ್ಲಿ ಮನೆಗಳನ್ನು ಉದ್ಘಾಟಿಸಿ ಪೌರಕಾರ್ಮಿಕರಿಗೆ ಹಸ್ತಾಂತರಿಸಲಾಗುವುದು ಎಂದರು.

ಪಟ್ಟಣದ ಕೆಲವು ಬಡಾವಣೆಗಳಲ್ಲಿ ರಸ್ತೆಗಳು ಕಿರಿದಾಗಿದೆ. ಈ ರಸ್ತೆಗಳನ್ನು ಅಗಲೀಕರಣ ಗೊಳಿಸಿ ಚರಂಡಿ ನಿರ್ಮಾಣ ಮಾಡುವುದಕ್ಕೆ ಬಡಾವಣೆಯ ಕೆಲವು ನಿವಾಸಿಗಳು ಅಕ್ರಮವಾಗಿ ಶೌಚಾಲಯ, ಶೀಟ್ ಗಳನ್ನು ಹಾಕಿಕೊಂಡಿದ್ದಾರೆ. ಅಲ್ಲದೇ ಮನೆಗಳ ಮುಂದೆ ಮೆಟ್ಟಿಲು ನಿರ್ಮಿಸಿಕೊಂಡಿರುವುದರಿಂದ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಇಂತಹ ಅಕ್ರಮ ಕಾಮಗಾರಿಗಳನ್ನು ತೆರವುಗೊಳಿಸುವಂತೆ ಈಗಾಗಲೇ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.

ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸುವ ಮುನ್ನಾ ಪುರಸಭೆಯಿಂದ ನೋಟಿಸ್ ನೀಡಲಾಗುವುದು. ಒತ್ತುವರಿದಾರರೇ ಸ್ವಯಂ ಪ್ರೇರಣೆಯಿಂದ ತೆರವುಗೊಳಿಸದಿದ್ದಲ್ಲಿ ಪುರಸಭೆ ತೆರವು ಕಾರ್ಯ ಕೈಗೊಳ್ಳಲಿದೆ ಎಂದರು.

ಈ ವೇಳೆ ಪುರಸಭಾ ಅಧ್ಯಕ್ಷೆ ಕೋಕಿಲ ಅರುಣ್, ಸದಸ್ಯ ಸಿದ್ದರಾಜ ಮಾಜಿ ಸದಸ್ಯ ಮರ ದೇವರು, ಪುರಸಭೆ ಮುಖ್ಯ ಅಧಿಕಾರಿ ಮೀನಾಕ್ಷಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಹನುಮಂತು, ಕೆಆರ್‌ ಡಿಎಲ್‌ನ ಎಇಇ ಪವಿತ್ರ, ಎಇ ರಾಕೇಶ್ ಮತ್ತು ಕಾಂಗ್ರೆಸ್ ಮುಖಂಡರು ಇದ್ದರು.