ಬೆಳೆಹಾನಿಯಾದ ರೈತರಿಗೆ ಶೀಘ್ರ ಪರಿಹಾರ: ತಂಗಡಗಿ

| Published : Aug 03 2024, 12:35 AM IST

ಸಾರಾಂಶ

ಕಾರಟಗಿ ತಾಲೂಕಿನ ತುಂಗಭದ್ರಾ ನದಿ ಪಾತ್ರದ ಉಳೇನೂರು, ಬೆನ್ನೂರು, ಜಮಾಪುರ ಗ್ರಾಮಗಳಿಗೆ ಸಚಿವ ಶಿವರಾಜ ತಂಗಡಗಿ ಅವರು ಶುಕ್ರವಾರ ಭೇಟಿ ನೀಡಿ, ನೆರೆ ಹಾವಳಿಯಿಂದ ಆದ ಹಾನಿ ಪರಿಶೀಲಿಸಿದರು.

ಕಾರಟಗಿ: ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನ ನದಿ ಪಾತ್ರದ ಉಳೇನೂರು, ಬೆನ್ನೂರು, ಜಮಾಪುರ ಗ್ರಾಮಗಳಿಗೆ ಆವರು ಶುಕ್ರವಾರ ಭೇಟಿ ನೀಡಿ, ನೆರೆ ಹಾವಳಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮಲೆನಾಡು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಸುಮಾರು ೧.೮೫ ಲಕ್ಷ ಕ್ಯುಸೆಕ್ ಒಳಹರಿವು ಇದೆ. ೧.82 ಲಕ್ಷ ಕ್ಯುಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳಿಗೆ ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸಭೆ: ರೈತರ ಜಮೀನುಗಳಿಗೆ ನೀರು ತುಂಬಿರುವ ಹಿನ್ನೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಗಳಿಗೆ ಹಾನಿಯಾಗಿದೆ. ಹಾನಿ ಪ್ರಮಾಣದ ಬಗ್ಗೆ ತಹಸೀಲ್ದಾರ್ ಅವರಿಂದ ಮಾಹಿತಿ ಪಡೆದು ಪರಿಹಾರ ಒದಗಿಸಲಾಗುವುದು. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬಹುದಾದ ಕ್ರಮಗಳ ಚರ್ಚೆ ನಡೆಸಲು ಶನಿವಾರ ಕೊಪ್ಪಳ ಜಿಲ್ಲೆಯ ಎಲ್ಲ ತಹಸೀಲ್ದಾರ್ ಹಾಗೂ ಇಒಗಳ ಸಭೆ ಕರೆಯಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಧ್ಯಾಹ್ನ ೨.೩೦ರ ಸುಮಾರಿಗೆ ಸಭೆ ನಡೆಯಲಿದೆ ಎಂದು ವಿವರಿಸಿದರು.

ಬೈಕ್ ಸವಾರಿ: ಸಚಿವರು ಉಳೇನೂರು, ಬೆನ್ನೂರು ಮತ್ತು ಜಮಾಪುರದಲ್ಲಿ ನದಿ ದಡಕ್ಕೆ ಭೇಟಿ ನೀಡುವ ವೇಳೆ ತಮ್ಮ ವಾಹನವನ್ನು ಇಳಿದು ಸ್ಥಳೀಯ ರೈತರ ದ್ವಿಚಕ್ರ ವಾಹವನ್ನು ಚಲಾಯಿಸಿಕೊಂಡು ದಡಕ್ಕೆ ತೆರಳಿದರು.

ರೈತರೊಂದಿಗೆ ಪ್ರವಾಹದ ನೀರಿನಲ್ಲಿ ಹೆಜ್ಜೆ ಹಾಕುತ್ತ ಬತ್ತ ಗದ್ದೆ ನೀರಿನಲ್ಲಿ ಮುಳುಗಿರುವುದನ್ನು ವೀಕ್ಷಿಸಿ, ರೈತರಿಂದ ಮಾಹಿತಿ ಪಡೆದರು. ಪರಿಹಾರ ಒದಗಿಸುವ ಭರವಸೆ ನೀಡಿದರು. ಇನ್ನು ನದಿಗುಂಟ ಗ್ರಾಮಗಳಲ್ಲಿ ರೈತರು ನದಿಗೆ ಅಳವಡಿಸಿದ್ದ ಪಂಪ್‌ಸೆಟ್‌ಗಳು ಮುಳುಗಡೆಯಾಗಿದ್ದು, ಕೊಚ್ಚಿಕೊಂಡು ಹೋಗಿರುವ ಕುರಿತು ಮಾಹಿತಿ ಪಡೆದರು.

ಉಳೇನೂರು ಮತ್ತು ಬೆನ್ನೂರು ಗ್ರಾಪಂ ಅಧ್ಯಕ್ಷ ಶಿವರಾಜ ಪಾಟೀಲ್ ಮತ್ತು ಶರಣಪ್ಪ ಸಾಹುಕಾರ, ಸದಸ್ಯರಾದ ಪರಸಪ್ಪ ಪಾಳ್ಯ, ಸಣ್ಣ ದೇವಣ್ಣ ಮೈಲಾಪುರ, ಅಲ್ಲಾಭಕ್ಷಿ ಮುಖಂಡರಾದ ಡಾ.ಕೆ.ಎನ್. ಪಾಟೀಲ್, ಅಂಬಣ್ಣ ನಾಯಕ್, ಬಸವರಾಜ ಸಾಹುಕಾರ, ದೇವರಾಜ ಕಟ್ಟಿಮನಿ, ಎಂ. ಆಂಜನೇಯ, ಗವಿಸಿದ್ದಪ್ಪ, ಸುಂಕ್ಲಯ್ಯ ನಾಯಕ್, ವೀರಣ್ಣ ಈಡಿಗೇರ, ಬಸವರಾಜ ಕುರುಬರ, ಕಾರಮಿಂಚಪ್ಪ ಜಮಾಪುರ, ಕಾಶೀಂಸಾಬ್ ಇನ್ನಿತರರು ಇದ್ದರು.