ಅಂಗನವಾಡಿಗಳ ಸ್ಥಿತಿಗತಿ ಕುರಿತು ಶೀಘ್ರ ವರದಿ: ನ್ಯಾಯಾಧೀಶೆ ದಿವ್ಯಶ್ರೀ

| Published : Jul 12 2024, 01:30 AM IST

ಅಂಗನವಾಡಿಗಳ ಸ್ಥಿತಿಗತಿ ಕುರಿತು ಶೀಘ್ರ ವರದಿ: ನ್ಯಾಯಾಧೀಶೆ ದಿವ್ಯಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಜು. 13ರಂದು ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ.

ಕಾರವಾರ: ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯ ಅಂಗನವಾಡಿಗಳ ಸ್ಥಿತಿಗತಿ ಕುರಿತಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಜಿಲ್ಲಾದ್ಯಂತ ತಪಾಸಣೆ ಕೈಗೊಂಡು ವರದಿಯನ್ನು ಸಿದ್ಧಪಡಿಸಲಾಗಿದ್ದು, ಈ ವರದಿಯನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ. ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 2,782 ಅಂಗನವಾಡಿಗಳಿವೆ. ಅವುಗಳಲ್ಲಿ 2,112 ಸ್ವಂತ ಕಟ್ಟಡದಲ್ಲಿ, 41 ಪಂಚಾಯಿತಿ ಕಟ್ಟಡಗಳಲ್ಲಿ, 114 ಸಮುದಾಯ ಕಟ್ಟಡಗಳಲ್ಲಿ, 6 ಯುವಕ ಮಂಡಳಿಗಳಲ್ಲಿ, 1 ಮಹಿಳಾ ಮಂಡಳದಲ್ಲಿ, 171 ಶಾಲೆಗಳಲ್ಲಿ,

325 ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿಗಳಲ್ಲಿ ಪರಿಶೀಲನೆ ವೇಳೆಯಲ್ಲಿ ಹಲವು ಸಮಸ್ಯೆಗಳು ಕಂಡು ಬಂದಿವೆ ಎಂದರು.

ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿಗಳಲ್ಲಿ ಆಹಾರ ಧಾನ್ಯಗಳ ಶೇಖರಣೆಗೆ ಸೂಕ್ತ ವ್ಯವಸ್ಥೆ ಇಲ್ಲದೇ ಇರುವುದು, ಮಕ್ಕಳಿಗೆ ಶುದ್ಧೀಕರಿಸಿದ ನೀರಿನ ಕೊರತೆ ಇದ್ದು, ಪಾತ್ರೆಯಲ್ಲಿ ಬಿಸಿ ಮಾಡಿದ ನೀರು ನೀಡಲಾಗುತ್ತಿದೆ. ಶೌಚಾಲಯ ಮತ್ತು ಅಡುಗೆ ಕೋಣೆ ಒಂದೇ ಕಡೆ ಇರುವುದು, ಶುಚಿತ್ವ ಇಲ್ಲದೇ ಇರುವುದು ಕಂಡುಬಂದಿದ್ದು, ಕಾರವಾರ ನಗರದಲ್ಲಿನ ಒಂದು ಅಂಗನವಾಡಿ ಚರಂಡಿಯ ಮೇಲ್ಭಾಗದಲ್ಲಿ ಇದು ಅಪಾಯಕಾರಿಯಾಗಿದೆ. ಈ ಎಲ್ಲ ನ್ಯೂನತೆಗಳ ಬಗ್ಗೆ ವರದಿಯಲ್ಲಿ ಸವಿವರವಾಗಿ ನಮೂದಿಸಿದ್ದು, ಈ ವರದಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೂ ಸಲ್ಲಿಸಲಾಗುವುದು ಎಂದರು.

ಅದಾಲತ್‌: ಜು. 13ರಂದು ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಜಿಲ್ಲೆಯ ನ್ಯಾಯಾಲಯಗಳಲ್ಲಿ ಒಟ್ಟೂ 37,156 ಪ್ರಕರಣಗಳು ವಿಚಾರಣೆಗೆ ಬಾಕಿಯಿದೆ. ಇದರಲ್ಲಿ 11,662 ಪ್ರಕರಣಗಳು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದಾದ ಪ್ರಕರಣಗಳಾಗಿದೆ. ಈಗಾಗಲೇ 2152 ಪ್ರಕರಣಗಳು ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಲು ಸಿದ್ಧವಾಗಿದ್ದು, 20,804 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಬಗೆಹರಿಸಲು ಗುರುತಿಸಲಾಗಿದೆ. ಸಾರ್ವಜನಿಕರು ಲೋಕ್ ಅದಾಲತ್ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ರಾಜಿಯಾಗುವಂತಹ ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ತಿಳಿಸಿದರು.