ಅಂಬಳೆ ಪಂಚಾಯ್ತಿ ಸಮಸ್ಯೆಗಳಿಗೆ ಶೀಘ್ರ ಪರಿಹಾರ

| Published : Sep 27 2024, 01:22 AM IST / Updated: Sep 27 2024, 01:23 AM IST

ಸಾರಾಂಶ

ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಜಿಪಂ ಸಿಇಒ ಮೋನಾರೋತ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಅಂಬಳೆ ಗ್ರಾಪಂಯಲ್ಲಿ ನರೇಗಾ ಸೇರಿದಂತೆ ಇತರೆ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಒದಗಿಸಲಾಗುವುದು ಎಂದು ಜಿಪಂ ಸಿಇಒ ಮೋನಾರೋತ್ ತಿಳಿಸಿದರು.ಗುರುವಾರ ತಾಲೂಕಿನ ಅಂಬಳೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪಂಚಾಯಿತಿಯಲ್ಲಿ ನರೇಗಾ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ. ಮೂಲ ಸಮಸ್ಯೆಗಳ ನಿವಾರಣೆಗೆ ಸಂಬಂಧಪಟ್ಟವರು ಸಹಕರಿಸುತ್ತಿಲ್ಲ ಎಂದು ಕೆಲವು ಸಾರ್ವಜನಿಕರು ದೂರಿದರು. ಈ ಬಗ್ಗೆ ಮಾತನಾಡಿದ ಸಿಇಒ, ಈ ಪಂಚಾಯಿತಿಯಲ್ಲಿ ಬೀದಿ ದೀಪ, ರಸ್ತೆ, ಚರಂಡಿ, ನರೇಗಾ ಕಾಮಗಾರಿ, ಗ್ರಂಥಾಲಯಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಇಡುವುದೂ ಸೇರಿದಂತೆ ೨೧ ಅರ್ಜಿಗಳು ಬಂದಿದೆ. ಈ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ನಾನು ಸಂಬಂಧಪಟ್ಟ ನರೇಗಾ ಎಡಿ, ತಾಪಂ ಇಒ ಹಾಗೂ ಗ್ರಾಪಂ ಪಿಡಿಒಗೆ ಮಾಹಿತಿ ನೀಡುತ್ತೇನೆ ಎಂದರು. ಇದಕ್ಕೆ ಪಿಡಿಒ ಸಿ.ಎನ್. ಕಾವ್ಯ ಅವರಿಗೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ನನಗೆ ಕೂಲಿ ಬೇಕು ಎಂದು ಜಾಬ್ ಕಾರ್ಡ್ ಪಡೆದಿರುವ ಕೂಲಿ ಕಾರ್ಮಿಕರು ನಮೂನೆ ೬ರಲ್ಲಿ ಅರ್ಜಿಯನ್ನು ಸಲ್ಲಿಸಿಲ್ಲ. ಅವರು ಅರ್ಜಿಯನ್ನು ಕೊಟ್ಟರೆ ಕೂಡಲೇ ಅವರಿಗೆ ಕೂಲಿ ನೀಡಲಾಗುವುದು. ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲೂ ಕಾಮಗಾರಿಗಳಿದ್ದು ಕೂಡಲೇ ಕ್ರಮಬದ್ಧವಾಗಿ ಅರ್ಜಿ ನೀಡಿದರೆ ಕೂಲಿ ನೀಡಲಾಗುವುದು ಎಂದರು. ಗ್ರಾಪಂ ಅಧ್ಯಕ್ಷ ನಂಜುಂಡಸ್ವಾಮಿ ಉಪಾಧ್ಯಕ್ಷೆ ಮಹಾದೇವಮ್ಮ, ಸದಸ್ಯರಾದ ಮಹದೇವಸ್ವಾಮಿ, ರಾಣಿ, ಸಿದ್ದನಾಯಕ, ರಾಜಣ್ಣ ಇಒ ಉಮೇಶ್, ಸ್ವಾಮಿ, ರೇವಣ್ಣ ಸಿಇಒ ಆಪ್ತ ಕಾರ್ಯದರ್ಶಿ ಕೆ. ಭರತ್‌ರಾಜ್ ನರೇಗಾ ಎಡಿ ರಾಧಾ, ಕಾರ್ಯದರ್ಶಿ ಪುಟ್ಟರಾಜು, ನಂದಿನಿ ಮುಖಂಡರಾದ ಕುಮಾರ್, ನಿಂಗರಾಜು ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಹಾಜರಿದ್ದರು.