ಸಾರಾಂಶ
ಸಂಡೂರು: ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ತಾಲೂಕು ಆಡಳಿತದ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಲ್ಲಿಕೆಯಾದ ೧೦೪ ಅರ್ಜಿಗಳು ಸೇರಿ ಒಟ್ಟು ೧೫೦ ಅರ್ಜಿಗಳು ಸಲ್ಲಿಕೆಯಾದವು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಈ.ತುಕಾರಾಂ, ಸಿಎಂ ಸಿದ್ದರಾಮಯ್ಯ ಮಾರ್ಗದರ್ಶನದಂತೆ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನತೆ ಸಂವಿಧಾನದ ವ್ಯವಸ್ಥೆಯಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಜನತೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಮಾತನಾಡಿ, ತಾಲೂಕು ಹಂತದಲ್ಲಿಯೇ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳನ್ನು ನಿಗದಿತ ಕಾಲಮಿತಿಯಲ್ಲಿ ಪರಿಹರಿಸಲಾಗುವುದು ಎಂದರು.ರೈತ ಸಂಘದ ಮುಖಂಡರಾದ ಎಂ.ಎಲ್.ಕೆ. ನಾಯ್ಡು, ಚಂದ್ರಶೇಖರ ಮೇಟಿ, ಎಚ್.ಕಾಡಪ್ಪ, ಜಿ.ಪರಮೇಶ್ವರಪ್ಪ ಮನವಿ ಸಲ್ಲಿಸಿ, ಪಟ್ಟಣದ ಎಪಿಎಂಸಿ ಜಾಗದಲ್ಲಿ ರೈತರಿಗೆ ಪ್ರತ್ಯೇಕ ರೈತ ಸಂತೆ ವ್ಯವಸ್ಥೆ ಮಾಡಬೇಕು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳು ಹಾಗೂ ಪ್ರಸೂತಿ ತಜ್ಞರು ಸೇರಿದಂತ ಅಗತ್ಯ ವೈದ್ಯರು ಹಾಗೂ ಮೂಲ ಸೌಕರ್ಯ ಕಲ್ಪಿಸಬೇಕು ಎಂದರು.
ಜನ ಸಂಗ್ರಾಮ ಪರಿಷತ್ ಮುಖಂಡರಾದ ಟಿ.ಎಂ.ಶಿವಕುಮಾರ್, ಶ್ರೀಶೈಲ ಆಲ್ದಳ್ಳಿ, ಜಿ.ಕೆ. ನಾಗರಾಜ, ಈರಣ್ಣ ಮೂಲಿಮನೆ ಮನವಿ ಸಲ್ಲಿಸಿ, ಸಂಡೂರಿನ ಇತಿಹಾಸ ಪ್ರಸಿದ್ಧ ಶ್ರೀಕುಮಾರಸ್ವಾಮಿ ದೇವಸ್ಥಾನದ ಮಾರ್ಗದಲ್ಲಿ ಅದಿರು ಲಾರಿಗಳ ಸಂಚಾರಕ್ಕೆ ಪ್ರತ್ಯೇಕ ಲಾರಿ ಕಾರಿಡಾರ್ ನಿರ್ಮಿಸಬೇಕು. ಎಸ್‌ಎಐಎಲ್ ಸಂಸ್ಥೆಗೆ ಗಣಿ ಗುತ್ತಿಗೆ ನೀಡಲು ಆ.೨ರಂದು ಕರೆದಿರುವ ಸಾರ್ವಜನಿಕ ಪರಿಸರ ಸಭೆಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.೭ನೇ ವೇತನ ಆಯೋಗದ ವರದಿ ಜಾರಿಗೆ ಒತ್ತಾಯ:
ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಚೌಕಳಿ ಪರಶುರಾಮಪ್ಪ ನೇತೃತ್ವದಲ್ಲಿ ಸಂಘದ ಸದಸ್ಯರು ಸಂಸದ ಈ. ತುಕಾರಾಂಗೆ ಮನವಿ ಸಲ್ಲಿಸಿದರು.ರೈತ ಮುಖಂಡರಾದ ಪಿ.ಎಸ್. ಧರ್ಮಾನಾಯ್ಕ, ವಿ.ಜೆ. ಶ್ರೀಪಾದಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಸರ್ವೇ ಸೆಟ್ಲ್ಮೆಂಟ್ ಮಾಡಿದ ರೀತಿ ಸರಿಯಿಲ್ಲ. ಯಾವುದೋ ಕಾರಣ ಇಟ್ಟುಕೊಂಡು ಸುಶಿಲಾನಗರದ ೨೩೪ ಎಕರೆ, ಸಿದ್ದಾಪುರ ಗ್ರಾಮದ ೩೦೦ ಎಕರೆ ಹಾಗೂ ಧರ್ಮಾಪುರ, ೧೮ ಹುಲಿಕುಂಟೆ ಸೇರಿದಂತೆ ಹಲವು ಗ್ರಾಮಗಳ ಜಮೀನುಗಳ ಪಹಣಿಯನ್ನು ರದ್ದುಪಡಿಸಲಾಗಿದೆ. ಇದನ್ನು ಕೂಡಲೆ ಸರಿಪಡಿಸಬೇಕು ಎಂದು ಮನವಿ ಸಲ್ಲಿಸಿದರು.
ರೈತ ಮುಖಂಡ ಬಿ.ಎಂ. ಉಜ್ಜಿನಯ್ಯ ಮನವಿ ಸಲ್ಲಿಸಿ, ತಾಲೂಕಿನಲ್ಲಿ ಸರ್ಕಾರಿ ಜಮೀನುಗಳಲ್ಲಿ ೪೦-೫೦ ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಪಟ್ಟಾ ನೀಡಬೇಕು ಎಂದು ಮನವಿ ಸಲ್ಲಿಸಿದರೆ, ವಿಠಲಾಪುರದ ಸದಾಶಿವ, ಜಿ.ಕೆ. ತಿಪ್ಪೇಸ್ವಾಮಿ ಮನವಿ ಸಲ್ಲಿಸಿ, ತಮ್ಮ ಗ್ರಾಮದಲ್ಲಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರಿಗೆ ವಸತಿ ನಿಲಯವನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು.ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರದಿಂದ ಮಂಜೂರಾದ ಮಾಸಾಶನ ಪ್ರಮಾಣಪತ್ರ, ವಿಶೇಷಚೇತನರಿಗೆ ವಾಕಿಂಗ್ ಸ್ಟಿಕ್, ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಿಸಿದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ್, ಡಿವೈಎಸ್ಪಿ ಪ್ರಸಾದ್ ಗೋಖಲೆ, ತಹಶೀಲ್ದಾರ್ ಜಿ.ಅನಿಲ್‌ಕುಮಾರ್, ತಾಪಂ ಇಒ ಎಚ್. ಷಡಾಕ್ಷರಯ್ಯ ಭಾಗವಹಿಸಿದ್ದರು. ಬಿಇಒ ಡಾ.ಐ.ಆರ್. ಅಕ್ಕಿ ಸ್ವಾಗತಿಸಿದರು. ಬಿಆರ್‌ಪಿ ಮಂಜುನಾಥ್ ಹಾದಿಮನಿ ನಿರೂಪಿಸಿದರು.