ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಶೀಘ್ರ ಪರಿಹಾರ: ಮಧು

| Published : Mar 06 2024, 02:15 AM IST

ಸಾರಾಂಶ

ದಶಕಗಳಿಂದ ಬಗೆಹರಿಯದಿರುವ ಶರಾವತಿ ಮುಳುಗಡೆ ಸಂತ್ರಸ್ತರ ಮತ್ತು ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹಾರಕ್ಕೆ ಅಡಚಣೆ ಆಗಿರುವ ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳುವ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಯುವ ವಿಶ್ವಾಸವ ಹೊಂದಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತೀರ್ಥಹಳ್ಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ದಶಕಗಳಿಂದ ಬಗೆಹರಿಯದಿರುವ ಶರಾವತಿ ಮುಳುಗಡೆ ಸಂತ್ರಸ್ತರ ಮತ್ತು ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹಾರಕ್ಕೆ ಅಡಚಣೆ ಆಗಿರುವ ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳುವ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಯುವ ವಿಶ್ವಾಸವ ಹೊಂದಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಸೋಮವಾರ ಸಂಜೆ ಪಟ್ಟಣದಲ್ಲಿ ಪಂಚಾಯತ್‍ರಾಜ್ ಇಲಾಖೆ ವತಿಯಿಂದ ₹13 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಗ್ರಾಮೀಣಾಭಿವೃದ್ಧಿ ಭವನ ಮತ್ತು ಪ.ಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಿದ್ದ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮಲೆನಾಡಿನ ರೈತರ ಈ ಸಮಸ್ಯೆ ಪರಿಹರಿಸಲು ಇರುವ ತೊಡಕನ್ನು ಕಾನೂನು ತಿದ್ದುಪಡಿಯಿಂದಲೇ ಸರಿಪಡಿಸಬೇಕಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದು, ಒಂದು ಹಂತಕ್ಕೆ ತಲುಪಿದೆ. ಶೀಘ್ರದಲ್ಲಿ ಹಕ್ಕು ಪತ್ರ ಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದ ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಿಸುವ ಕುರಿತಂತೆ ಕೇಂದ್ರ ಸಾರಿಗೆ ಸಚಿವ ನಿತಿನ್‍ ಗಡ್ಕರಿ ಅವರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 16 ಕಿ.ಮೀ. ದೂರದ ಈ ಮಾರ್ಗದಲ್ಲಿ 6.50 ಕಿಮೀ ಸುರಂಗ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಈ ದೂರವನ್ನು ಕೇವಲ 20 ನಿಮಿಷದಲ್ಲಿ ಕ್ರಮಿಸಬಹುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಹೆಗ್ಗೋಡು ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ₹344 ಕೋಟಿ ಮೊತ್ತದ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ವಿರೋಧ ಮಾಡಬಾರದು. 36 ಗ್ರಾ.ಪಂ.ಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ವರಾಹಿ ಹಿನ್ನೀರು ಪ್ರದೇಶವಾದ ದೊಡ್ಡಿನ ಮನೆಯಿಂದ ನೀರನ್ನು ತರಲು ಸಿದ್ಧತೆ ನಡೆದಿದೆ. ಯಾವುದೇ ಕಾರಣಕ್ಕೂ ಆಲಗೇರಿಯಲ್ಲಿ ನೀರನ್ನು ಎತ್ತುವುದಿಲ್ಲ. ಟ್ರೀಟ್‍ಮೆಂಟ್ ಪ್ಲಾಂಟ್ ಹೊರತುಪಡಿಸಿ, ಬೇರೆ ಕಾಮಗಾರಿ ಮಾಡುವ ಉದ್ದೇಶವೂ ಇಲ್ಲ. ಸಾರ್ವಜನಿಕರು ಮಹತ್ವದ ಈ ಯೋಜನೆಗೆ ತಪ್ಪು ಮಾಹಿತಿಯಿಂದ ಅನಾವಶ್ಯಕವಾಗಿ ಅಡ್ಡಿಪಡಿಸಬಾರದು ಎಂದೂ ಮನವಿ ಮಾಡಿದರು.

ಸಮಾರಂಭದಲ್ಲಿ ಮಾಜಿ ಶಾಸಕ ಕಡಿದಾಳು ದಿವಾಕರ ಅವರನ್ನು ಸನ್ಮಾನಿಸಲಾಯಿತು. ಎಂಎಡಿಬಿ ಆಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಪಪಂ ಅಧ್ಯಕ್ಷೆ ಗೀತಾ ರಮೇಶ್, ತಾಪಂ ಇಒ ಎಂ.ಶೈಲಾ, ಆಡಳಿತಾಧಿಕಾರಿ ಆರ್.ಗಣೇಶ್‍ ಇದ್ದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ವಿವಿಧ ಕಾಮಗಾರಿಗಳನ್ನೂ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.

- - - -05ಟಿಟಿಎಚ್ 01:

ತೀರ್ಥಹಳ್ಳಿ ಪಟ್ಟಣದಲ್ಲಿ ₹13 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಗ್ರಾಮೀಣಾಭಿವೃದ್ಧಿ ಭವನವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಕಡಿದಾಳು ದಿವಾಕರ್, ಎಂಎಡಿಬಿ ಆಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಪಪಂ ಅಧ್ಯಕ್ಷೆ ಗೀತಾರಮೇಶ್‍ ಇದ್ದರು.