ಸಾರಾಂಶ
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ಜಾರುವ ಸಮಸ್ಯೆಯನ್ನು ರೈಲ್ವೆ ಹೋರಾಟ ಸಮಿತಿ ಮುಖಂಡರು ಫಾಲ್ಘಾಟ್ ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದ ಎರಡೇ ಗಂಟೆಯಲ್ಲಿ ತೊಂದರೆಯನ್ನು ಸರಿಪಡಿಸುವ ಕೆಲಸ ನಡೆದಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪಾಚಿಗಟ್ಟಿ ರೈಲು ಹತ್ತಿ ಇಳಿಯುವ ಪ್ರಯಾಣಿಕರಿಗೆ ಮೂಳೆ ಮುರಿತ ಅಪಾಯ ಗ್ಯಾರಂಟಿ ಎಂಬಂತಾಗಿತ್ತು. ರೈಲ್ವೆ ಫ್ಲ್ಯಾಟ್‌ಫಾರಂನಲ್ಲಿ ಪಾಚಿ ಆವರಿಸಿ ಜಾರಿ ಬೀಳುವ ಪರಿಸ್ಥಿತಿ ಉಂಟಾಗಿತ್ತು. ಈ ಬಗ್ಗೆ ರೈಲ್ವೆ ಹೋರಾಟ ಸಮಿತಿ ಮುಖಂಡರು ಫಾಲ್ಘಾಟ್ ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದ ಎರಡೇ ಗಂಟೆಯಲ್ಲಿ ತೊಂದರೆಯನ್ನು ಸರಿಪಡಿಸುವ ಕೆಲಸ ನಡೆದಿದೆ. ರೈಲ್ವೆ ಅಧಿಕಾರಿಗಳ ಈ ಕ್ಷಿಪ್ರ ಸ್ಪಂದನಕ್ಕೆ ರೈಲು ಪ್ರಯಾಣಿಕರು ಹಾಗೂ ಸಂಘಟನೆಗಳು ಶ್ಲಾಘನೆ ವ್ಯಕ್ತಪಡಿಸಿವೆ.ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಹೀಗಾಗಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಈಗಾಗಲೇ ಹಲವು ಮಂದಿ ಫ್ಲ್ಯಾಟ್‌ಫಾರಂನಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಹೊಸದಾಗಿ ನಿರ್ಮಾಣವಾದ ಫ್ಲ್ಯಾಟ್‌ಫಾರಂಗಳಲ್ಲಿ ಶೆಲ್ಟರ್ ಇಲ್ಲ. ಹಳೆ ಫ್ಲ್ಯಾಟ್‌ಫಾರಂನ್ನೂ ಮಳೆ ನೀರು ತೋಯಿಸುತ್ತದೆ. ಇದರಿಂದಾಗಿ ಮಳೆ ನೀರು ನಿಂತು ಪಾಚಿ ಆವರಿಸಿಕೊಂಡಿದೆ. ಇದು ರೈಲು ಹತ್ತಿ ಇಳಿಯುವವರು ಜಾರಿಬೀಳಲು ಕಾರಣವಾಗಿದೆ.
ಈ ತೊಂದರೆ ಕುರಿತು ಪುತ್ತೂರಿನ ರೈಲು ಪ್ರಯಾಣಿಕರು ಸಾರ್ವಜನಿಕರ ಗಮನಕ್ಕೆ ತಂದಿದ್ದರು. ರೈಲ್ವೆ ಹೋರಾಟಗಾರ ಜಿ.ಕೆ. ಭಟ್ ಎಂಬವರು ಸೋಮವಾರ ಸ್ಥಳಕ್ಕೆ ತೆರಳಿ ಪರಿಸ್ಥಿತಿಯ ಗಂಭೀರತೆಯನ್ನು ಕಂಡುಕೊಂಡರು. ಅಲ್ಲಿಂದಲೇ ಫೋಟೋ ಹಾಗೂ ವಿಡಿಯೋವನ್ನು ರೈಲ್ವೆ ಫಾಲ್ಘಾಟ್ ವಿಭಾಗದ ಅಧಿಕಾರಿಗಳಿಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಿದ್ದರು. ಈ ದೂರಿಗೆ ಎರಡೇ ಗಂಟೆಯಲ್ಲಿ ಸ್ಪಂದಿಸಿದ ಫಾಲ್ಘಾಟ್ ವಿಭಾಗೀಯ ಅಧಿಕಾರಿಗಳು, ಕೂಡಲೇ ಫ್ಲ್ಯಾಟ್‌ಫಾರಂಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪರಣೆಗೆ ಸೂಚಿಸಿದ್ದರು. ತಕ್ಷಣವೇ ರೈಲ್ವೆ ಕಾರ್ಮಿಕರು ಬ್ಲೀಚಿಂಗ್ ಪೌಡರ್ ಸಿಂಪರಣೆಗೆ ಕ್ರಮ ಕೈಗೊಂಡಿದ್ದಾರೆ. ವಿಭಾಗೀಯ ಅಧಿಕಾರಿಗಳ ತ್ವರಿತ ಸ್ಪಂದನಕ್ಕೆ ರೈಲ್ವೆ ಹೋರಾಟಗಾರರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.