ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಶೀಘ್ರವೇ ನೀರು ಹರಿಸಲಿದ್ದು, ನೀರಾವರಿ ಇಲಾಖೆ ಸಿಬ್ಬಂದಿ ನೀರಿನ ಹರಿವಿನ ಪ್ರಮಾಣದ ಮೇಲೆ ನಿಗಾ ಇಡಬೇಕೆಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಳೆಗಾಲ ಮುನ್ನ ಇನ್ನೆರಡು ಬಾರಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಮಾ.೧೯ರ ವೇಳೆಗೆ ತಾಲೂಕಿನ ಕಾಲುವೆಗಳಿಗೆ ನೀರು ತಲುಪುವ ನಿರೀಕ್ಷೆ ಇದೆ. ನಿಯಮಾವಳಿಯಂತೆ ಸರಿಯಾದ ಪ್ರಮಾಣದಲ್ಲಿ ನೀರು ಹರಿಯುತ್ತಿದೆಯೇ ಎಂದು ಇಲಾಖೆ ಇಂಜಿನಿಯರ್‌ಗಳು ನಿಗಾ ಇಡಬೇಕು. ಕೊನೆ ಭಾಗದಲ್ಲಿರುವ ಅಡಿಕೆ ಹಾಗೂ ಇತರೆ ತೋಟಗಳಿಗೆ ನೀರು ಹರಿಯುವಂತೆ ಎಚ್ಚರಿಕೆ ವಹಿಸಬೇಕೆಂದು ತಾಕೀತು ಮಾಡಿದರು.
ಕುಡಿಯುವ ನೀರು ಕೊರತೆಯಾಗದಂತೆ ವ್ಯವಸ್ಥೆ, ವಿಶೇಷವಾಗಿ ತಾಲೂಕಿನಲ್ಲಿರುವ ವಿವಿಧ ಇಲಾಖೆಗಳ ಹಾಸ್ಟೆಲ್, ವಸತಿ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ನೀರಿನ ಲಭ್ಯತೆ ಬಗ್ಗೆ ನಿಗಾವಹಿಸಬೇಕು. ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಹಾಗೂ ಗುಣಮಟ್ಟದ ಆಹಾರ ವಿತರಿಸಬೇಕೆಂದು ತಾಕೀತು ಮಾಡಿದರು.ಮಲೆಬೆನ್ನೂರಿನಲ್ಲಿ ಗ್ರಾಮ ದೇವತೆ ಹಬ್ಬ ನಡೆಯಲಿದ್ದು ಕುಡಿಯುವ ನೀರಿನ ಕೊರತೆಯಾಗದಂತೆ ಹಾಗೂ ನೈರ್ಮಲ್ಯದ ಕುರಿತು ಮುಂಜಾಗ್ರತೆ ವಹಿಸಬೇಕೆಂದರು. ಅದಕ್ಕೆ ಉತ್ತರಿಸಿದ ಮಲೆಬೆನ್ನೂರು ಪುರಸಭೆ ಮುಖ್ಯಾಧಿಕಾರಿ ಸುರೇಶ್, ೯ ಕೊಳವೆ ಬಾವಿಗಳ ಮರುಪೂರಣ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗಿದೆ, ಹೊನ್ನಾಳಿ ಪುರಸಭೆಯಿಂದ ಕೆಲವು ಪೌರ ನೌಕರರ ಕಳಿಸಲು ಕೋರಿಕೆ ಸಲ್ಲಿಸಲಾಗಿದೆ ಎಂದರು.
ಪ್ರತಿ ತಾಲೂಕಿಗೆ ಐದು ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರು ಮಾಡಲಾಗುವುದೆಂದು ಶಿಕ್ಷಣ ಸಚಿವರ ಹೇಳಿಕೆ ಬಗ್ಗೆ ಶಾಸಕರು ಪ್ರಸ್ತಾಪಿಸಿದಾಗ ಬಿಇಒ ಹನುಮಂತಪ್ಪ ಮಾತನಾಡಿ, ನಿಯಮಾವಳಿಯಂತೆ ಹರಿಹರದ ಡಿಆರ್‌ಎಂ ಮತ್ತು ಮಲೆಬೆನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಗಳು ಮಾತ್ರ ಕೆಪಿಎಸ್ ಶಾಲೆಯಾಗಲು ಅರ್ಹತೆ ಪಡೆದಿವೆ ಎಂದರು.ಪಿಡಬ್ಲ್ಯುಡಿ ಎಇಇ ಶಿವಮೂರ್ತಿ ಮಾತನಾಡಿ, ಅರಣ್ಯ ಇಲಾಖೆಯಿಂದ ರಸ್ತೆ ಅಂಚಿಗೆ ಮರ ಬೆಳೆಸುವುದರಿಂದ ರಸ್ತೆಗಳಿಗೆ ಧಕ್ಕೆಯಾಗುತ್ತಿದೆ, ಕನಿಷ್ಠ ಮೂರು ಮೀಟರ್ ಅಂತರದಲ್ಲಿ ಮರಗಳ ಬೆಳೆಸಬೇಕೆಂದಾಗ, ಸಾಮಾಜಿಕ ಅರಣ್ಯ ಇಲಾಖೆ ಆರ್‌ಎಫ್‌ಒ ಅಮೃತರವರು ಮುಂದಿನ ಬಾರಿಗೆ ಇದನ್ನು ಪಾಲನೆ ಮಾಡಲಾಗುವುದೆಂದರು.
ಬೆಸ್ಕಾಂ ಎಇಇ ನಾಗರಾಜ್ ಮಾತನಾಡಿ, ಆರ್‌ಸಿಸಿ ಮತ್ತು ಶೀಟಿನ ಮನೆಗಳ ಮೇಲೆ ಸೌರ ಶಕ್ತಿ ವಿದ್ಯುತ್ ಫಲಕ ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡುವವರಿಗೆ ಇಲಾಖೆಯಿಂದ ೩೦ ಸಾವಿರ ರು.ವರೆಗೆ ಸಹಾಯಧನ ನೀಡಲಾಗುವುದು, ಇದೇ ರೀತಿ ರೈತರು ಜಮೀನುಗಳಲ್ಲಿಯೂ ಸೌರ ಫಲಕ ಅಳವಡಿಸಿದರೆ ಸಹಾಯಧನ ನೀಡಲಾಗುವುದು, ಅವರು ಉತ್ಪಾದಿಸಿದ ಹೆಚ್ಚುವರಿ ವಿದ್ಯುತ್ ನಾವು ಖರೀದಿಸುತ್ತೇವೆಂದು ಮಾಹಿತಿ ನೀಡಿದರು.ತಹಸೀಲ್ದಾರ್ ಗುರು ಬಸವರಾಜ್, ಕಾರ್ಯ ನಿರ್ವಹಣಾಧಿಕಾರಿ ರಮೇಶ್ ಸುಲ್ಪಿ, ವಿವಿಧ ಇಲಾಖಾಧಿಕಾರಿಗಳಾದ ನಾರನಗೌಡ್ರು, ಶಶಿಧರ್, ಡಾ.ಪ್ರಶಾಂತ್, ಡಾ.ಹನುಮನಾಯ್ಕ್, ನಿರ್ಮಲಾ, ರಾಮಕೃಷ್ಣಪ್ಪ, ಗಿರೀಶ್, ಯತಿರಾಜ್, ಲಿಂಗರಾಜ್, ಪೂಜಾ, ಸಪ್ನಾ, ಟಿ.ಕೆ.ಸಿದ್ದೇಶ್, ಸತೀಶ್, ವಿದ್ಯಾ ಇತರರಿದ್ದರು.