ಬೆಳೆಹಾನಿ ಸರ್ವೇ, ಪರಿಹಾರಕ್ಕೆ ಶೀಘ್ರ ತಂಡ ರಚಿಸಿ

| Published : Aug 20 2025, 02:00 AM IST

ಸಾರಾಂಶ

ರಾಜ್ಯದ ವಿವಿಧೆಡೆ ಮಳೆಯಿಂದ ಆಗಿರುವ ಬೆಳೆಹಾನಿಯ ಸರ್ವೇ ಹಾಗೂ ಪರಿಹಾರೋಪಾಯ ಕಾರ್ಯಗಳಿಗೆ ರಾಜ್ಯ ಸರ್ಕಾರ ತಕ್ಷಣವೇ ತಂಡ ರಚನೆ ಮಾಡಬೇಕು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದ ವಿವಿಧೆಡೆ ಮಳೆಯಿಂದ ಆಗಿರುವ ಬೆಳೆಹಾನಿಯ ಸರ್ವೇ ಹಾಗೂ ಪರಿಹಾರೋಪಾಯ ಕಾರ್ಯಗಳಿಗೆ ರಾಜ್ಯ ಸರ್ಕಾರ ತಕ್ಷಣವೇ ತಂಡ ರಚನೆ ಮಾಡಬೇಕು. ಮೊದಲ ಹಂತದಲ್ಲಿ ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್‌.ಪಾಟೀಲ್‌ ನಡಹಳ್ಳಿ ಆಗ್ರಹಿಸಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದರೂ ಸಿಎಂ, ಡಿಸಿಎಂ, ಸಚಿವರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ರೈತರ ಕಷ್ಟಕ್ಕೆ ಪರಿಹಾರ ಕೊಡಬೇಕಿದ್ದ ಸರ್ಕಾರ ರೈತರಿಗೆ ಒಂದು ಭರವಸೆ ಕೂಡ ಕೊಟ್ಟಿಲ್ಲ ಎಂದರು.ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಕೇಂದ್ರದಿಂದ ಕೊಡಬೇಕಿರುವ ಎಲ್ಲ ಪರಿಹಾರವೂ ಬರಲಿದೆ. ರೈತರು ಆತಂಕಕ್ಕೊಳಗಾಗುವ ಅವಶ್ಯಕತೆಯಿಲ್ಲ. ರೈತರ ಜೊತೆಗೆ ಬಿಜೆಪಿ ಇದೆ. ಇನ್ನೊಂದು ವಾರದಲ್ಲಿ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ರೈತರ ಪರವಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

2019ರಲ್ಲಿ ಪ್ರವಾಹ ಬಂದಾಗ ಅಂದು ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪನವರು ಕೇಂದ್ರದ ಪರಿಹಾರದ ಜೊತೆಗೆ ₹10 ಸಾವಿರ ಹಣವನ್ನು ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ ಕೊಟ್ಟಿದ್ದರು. ಅಂದು ರಾಜ್ಯ ಸರ್ಕಾರದಿಂದ ಯಡಿಯೂರಪ್ಪನವರು ₹20 ಸಾವಿರ ಕೋಟಿ ಹೆಚ್ಚುವರಿ ಪರಿಹಾರ ನೀಡಿದ್ದರು. ಈಗಲೂ ಕೇಂದ್ರ ಕೊಡುವ ಹಣಕ್ಕೆ ಹೆಚ್ಚುವರಿಯಾಗಿ ಹಾನಿಗೊಳಗಾದ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಹಣವನ್ನು ರೈತರಿಗೆ ರಾಜ್ಯ ಸರ್ಕಾರ ಕೊಡಬೇಕು ಎಂದರು.

ಕೃಷ್ಣಾ ಕಣಿವೆಯಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಡ್ಯಾಂಗೆ ಹೆಚ್ಚಿನ ನೀರು ಹರಿದುಬಂದರೆ ನದಿಪಾತ್ರದಲ್ಲಿ ಪ್ರವಾಹ ಉಂಟಾಗಲಿದೆ. ಜಿಲ್ಲಾಧಿಕಾರಿಗಳು ಮೀಟಿಂಗ್ ಮಾಡಿ, ತಕ್ಷಣವೇ ಸ್ಥಳೀಯವಾಗಿ ತಂಡಗಳನ್ನು ರಚನೆ ಮಾಡಿ ಕ್ರಮ ಕೈಗೊಳ್ಳಬೇಕು. ಪ್ರವಾಹದಿಂದ ಹಾನಿಗೊಳಗಾದವರನ್ನು ಸ್ಥಳಾಂತರ ಮಾಡಬೇಕು ಎಂದಾದರೆ, ಅದನ್ನೂ ಮಾಡಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ರಾಜ್ಯ ಸರ್ಕಾರದಿಂದ ಕಳೆದ ಎರಡು ವರ್ಷಗಳಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಗುಣಮಟ್ಟದ

ಸ್ಪ್ಲಿಂಕ್ಲರ್ ಪೈಪುಗಳು ಸಿಗುತ್ತಿಲ್ಲ. ಕೇಂದ್ರ ಹಾಗೂ ರಾಜ್ಯದ ಸಹಯೋಗದಲ್ಲಿ ಕೊಡಬೇಕಿದ್ದ ಈ ಪೈಪುಗಳನ್ನು ಕೇಂದ್ರ ಹಣ ಕೊಟ್ಟಿದ್ದರೂ, ರಾಜ್ಯ ಸರ್ಕಾರ ಹಣ ಕೊಡದ ಕಾರಣ ರೈತರಿಗೆ ಪೈಪುಗಳು ಸೇರಿದಂತೆ ಸೌಲಭ್ಯಗಳು ಬರುತ್ತಲೇ‌ ಇಲ್ಲ ಎಂದರು.

ಮುಖಂಡರಾದ ಸುರೇಶ ಬಿರಾದಾರ, ಸಂಜಯ ಕನಮಡಿ, ಎಸ್.ಎ.ಪಾಟೀಲ, ಈರಣ್ಣ ರಾವೂರ, ಸಾಬು ಮಾಶ್ಯಾಳ ಉಪಸ್ಥಿತರಿದ್ದರು.

ಕಳೆದ ಹಲವಾರು ವರ್ಷಗಳಿಂದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಹಾಗೂ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದೆಲ್ಲವೂ ತನಿಖೆಯಾಗಿ ಇವರ ಹಿಂದೆ ಇರುವವರ ಬಗ್ಗೆ ಸತ್ಯಾಸತ್ಯತೆ ಬಯಲಾಗಬೇಕು. ಸುಳ್ಳು ಆರೋಪಿಸುತ್ತಿರುವ ಈ ಅನಾಮಿಕ ವ್ಯಕ್ತಿ ಹಾಗೂ ಆತನ ಹಿಂದಿರುವವರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದೆಂದು ಎ.ಎಸ್‌.ಪಾಟೀಲ್‌ ನಡಹಳ್ಳಿ, ರಾಜ್ಯಾಧ್ಯಕ್ಷ, ಬಿಜೆಪಿ ರೈತ ಮೋರ್ಚಾ