ಕುಷ್ಟಗಿ: ಮದ್ಯಪಾನ ವ್ಯಕ್ತಿಯ ಆರೋಗ್ಯ, ಕುಟುಂಬ ಮತ್ತು ಸಾಮಾಜಿಕ ಬದುಕನ್ನು ಹಾಳು ಮಾಡುವ ದುಶ್ಚಟವಾಗಿದ್ದು, ಅದನ್ನು ತ್ಯಜಿಸಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಜೀವನಸಾಬ್ ಬಿನ್ನಾಳ ಕರೆ ನೀಡಿದರು.

ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ಅಟಲ್‌ಜಿ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ 2083ನೇ ಮದ್ಯವರ್ಜನ ಶಿಬಿರದ ಮೂರನೇ ದಿನದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉತ್ತರ ಕರ್ನಾಟಕದ ವಿಶಿಷ್ಟ ಜಾನಪದ ಶೈಲಿಯಲ್ಲಿ ಮದ್ಯಪಾನದ ದುಷ್ಪರಿಣಾಮ ಬಿಂಬಿಸುವ ಹಾಸ್ಯಭರಿತ ಹಾಗೂ ಭಾವನಾತ್ಮಕ ಹಾಡುಗಳ ಮೂಲಕ ಶಿಬಿರಾರ್ಥಿಗಳ ಮನಮುಟ್ಟುವ ಪ್ರಯತ್ನ ನಡೆಸಿದರು. ಕುಡುಕ ಗಂಡ, ಅಂತಾರ ಕುಡುಕ ಕುಡುಕ, ಕುಡುಕ ಗಂಡನಿಗೆ ಕೊಡಬ್ಯಾಡ ಹಡೆದವ್ವ, ಕೊಟ್ಟಾರ ಕುಡುಕನಂತ ಗಂಡನಿಗೆ, ಕುಡುಕ ತಂದೆಗೆ ಮಗಳಾಗಿ ಹುಟ್ಟಿ ನಾ ತಪ್ಪು ಮಾಡಿದೆ, ಹೆಂಡ ಕುಡಿಬ್ಯಾಡೂ ಯಪ್ಪ ಸೇರಿದಂತೆ ಅನೇಕ ಜನಪ್ರಿಯ ಜಾನಪದ ಗೀತೆ ಹಾಡಿ ಮದ್ಯದ ಚಟದಿಂದ ಪತ್ನಿ,ಮಕ್ಕಳು, ತಂದೆ-ತಾಯಿ ಅನುಭವಿಸುವ ನೋವು ಹಾಗೂ ಸಮಾಜದಲ್ಲಿ ಕುಡುಕನಿಗೆ ಎದುರಾಗುವ ಅವಮಾನ ಮನೋಜ್ಞವಾಗಿ ಚಿತ್ರಿಸಿದರು.

ಮದ್ಯಪಾನ ಮಾಡುವ ವ್ಯಕ್ತಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಕುಟುಂಬದ ನೆಮ್ಮದಿ, ಮಕ್ಕಳ ಭವಿಷ್ಯ ಮತ್ತು ವೈಯಕ್ತಿಕ ಆರೋಗ್ಯಕ್ಕಾಗಿ ಕುಡಿತ ತ್ಯಜಿಸಿ ಉತ್ತಮ ಬದುಕಿನತ್ತ ಹೆಜ್ಜೆ ಇಡಬೇಕು ಎಂದು ಶಿಬಿರಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಸಿಪಿಐ ವಿಶ್ವನಾಥ ಹಿರೇಗೌಡ್ರು ಮಾತನಾಡಿ, ಜನರು ಆರ್ಥಿಕವಾಗಿ ಸದೃಢರಾಗಬೇಕಾದರೆ ಮದ್ಯಪಾನದಂತಹ ದುಶ್ಚಟಗಳಿಂದ ದೂರವಿರಬೇಕು. ಕುಡಿತದಿಂದ ಕುಟುಂಬದ ನೆಮ್ಮದಿ ಹಾಳಾಗುವುದರ ಜತೆಗೆ ವ್ಯಕ್ತಿಯ ಸಾಮಾಜಿಕ ಗೌರವ ಕಳೆದುಹೋಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ದೃಢ ಸಂಕಲ್ಪ ಮಾಡಿ ಮದ್ಯ ತ್ಯಜಿಸಿ ಕುಟುಂಬಕ್ಕೆ ಒಳ್ಳೆಯ ಮಗನಾಗಿ, ಸಮಾಜಕ್ಕೆ ಆದರ್ಶ ಪ್ರಜೆಯಾಗಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಕುಷ್ಟಗಿ ಗ್ರಾಮೀಣ ವಲಯದ ಮೇಲ್ವಿಚಾರಕ ಅರುಣ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸವಂತಪ್ಪ ನಾಲತವಾಡ, ಕೃಷಿ ಮೇಲ್ವಿಚಾರಕ ಮಹೇಶ್, ಮದ್ಯವರ್ಜನ ಶಿಬಿರದ ಮೇಲ್ವಿಚಾರಕ ವಿದ್ಯಾಧರ, ಚಳಗೇರಾ ವಲಯದ ಮೇಲ್ವಿಚಾರಕ ರೀಹಾನ, ಶರಣಮ್ಮ, ಅನ್ನಪೂರ್ಣ, ಚಳಗೇರಾ ವಲಯದ ಸೇವಾ ಪ್ರತಿನಿಧಿ, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಹಾಡುಗಳಲ್ಲೇ ಮೂಡಿತು ಹೊಸ ಬದುಕಿನ ಸಂಕಲ್ಪ

ಜಾನಪದ ಗೀತೆಗಳ ಮೂಲಕ ಮದ್ಯಪಾನದ ದುಷ್ಪರಿಣಾಮಗಳನ್ನು ಸರಳ, ಭಾವನಾತ್ಮಕವಾಗಿ ಮತ್ತು ಹಾಸ್ಯಮಯವಾಗಿ ಬಿಂಬಿಸಿದ ಜೀವನಸಾಬ್ ಬಿನ್ನಾಳ ಕಾರ್ಯಕ್ರಮ ಶಿಬಿರಾರ್ಥಿಗಳ ಮನಸೂರೆಗೊಂಡಿತು. ಹಾಡುಗಳಲ್ಲಿನ ಸಂದೇಶ ಹಲವರಲ್ಲಿ ಆತ್ಮಾವಲೋಕನಕ್ಕೆ ಕಾರಣವಾಗಿ ಮದ್ಯ ತ್ಯಜಿಸಿ ಹೊಸ ಬದುಕು ಆರಂಭಿಸಬೇಕು ಎಂಬ ದೃಢ ಸಂಕಲ್ಪ ಮೂಡಿಸಿದವು. ಹಾಡಿನಲ್ಲೇ ಬದುಕಿನ ಮೌಲ್ಯ ಮನದಟ್ಟು ಮಾಡಿದ ಈ ಕಾರ್ಯಕ್ರಮ ಶಿಬಿರದ ಪ್ರಮುಖ ಆಕರ್ಷಣೆಯಾಯಿತು.