ಆರೋಗ್ಯವಂತ ಸಮಾಜಕ್ಕೆ ತಂಬಾಕು ಸೇವನೆಯಿಂದ ದೂರವಿರಿ: ಜಿಲ್ಲಾಧಿಕಾರಿ

| Published : Nov 15 2024, 12:33 AM IST

ಆರೋಗ್ಯವಂತ ಸಮಾಜಕ್ಕೆ ತಂಬಾಕು ಸೇವನೆಯಿಂದ ದೂರವಿರಿ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ತಂಬಾಕು ಸೇವನೆಯಿಂದ ದೂರವಿದ್ದು, ಆರೋಗ್ಯವಂತರಾಗಿ ಪ್ರತಿಯೊಬ್ಬರು ಬಾಳಬೇಕು. ಅಂದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಆಗುತ್ತದೆ.

ತಂಬಾಕು ಮುಕ್ತ ಯುವ ಅಭಿಯಾನಕ್ಕೆ ನಲಿನ್‌ ಅತುಲ್ ಚಾಲನೆಕನ್ನಡಪ್ರಭ ವಾರ್ತೆ ಕೊಪ್ಪಳ

ತಂಬಾಕು ಸೇವನೆಯಿಂದ ದೂರವಿದ್ದು, ಆರೋಗ್ಯವಂತರಾಗಿ ಪ್ರತಿಯೊಬ್ಬರು ಬಾಳಬೇಕು. ಅಂದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಆಗುತ್ತದೆ ಎಂದು ಜಿಲ್ಲಾಧಿಕಾರಿ ನಲಿನ್‌ ಅತುಲ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಕೊಪ್ಪಳ ಇವುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ತಂಬಾಕು ಮುಕ್ತ ಯುವ ಅಭಿಯಾನ 2.0 ಕಾರ್ಯಕ್ರಮದಡಿ ಜಿಲ್ಲೆಯ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಗ್ರಾಮಗಳಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಎಲ್‌ಇಡಿ ವಾಹನಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ಕಾಯಿಲೆ, ಲಕ್ವಾ ಇತರೆ ಕಾಯಿಲೆಗಳು ಬರಬಹುದು. ತಂಬಾಕು ಸೇವನೆಯಿಂದ ದೂರವಿದ್ದು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜು ಟಿ ಮಾತನಾಡಿ, ತಂಬಾಕಿನಲ್ಲಿ ನಿಕೊಟಿನ್ ಎಂಬ ವಿಷಕಾರಕ ಪದಾರ್ಥ ಇರುತ್ತದೆ. ಪ್ರತಿ ವರ್ಷ ವಿಶ್ವಾದ್ಯಂತ ಲಕ್ಷಾಂತರ ಜನರು ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಇಂದಿನ ಯುವ ಪೀಳಿಗೆ ತಂಬಾಕು ಸೇವನೆಯಿಂದ ದೂರವಿದ್ದು, ದೇಶದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಿ ತಂಬಾಕು ಮುಕ್ತ ಸಮಾಜವನ್ನಾಗಿಸಲು ಮುಂದಾಗಬೇಕೆಂದು ಹೇಳಿದರು.

ಜಿಲ್ಲಾಮಟ್ಟದ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಜಿಲ್ಲಾ ಸಲಹೆಗಾರರು, ಸೈಕಾಲಜಿಸ್ಟ್ ಮತ್ತು ಸಮಾಜ ಕಾರ್ಯಕರ್ತರು ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಇತರೆ ಸಿಬ್ಬಂದಿ ಇದ್ದರು.