ಇಂದಿನ ದಿನಗಳಲ್ಲಿ ಮಹಿಳೆಯರು ಹೆಚ್ಚು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹಳ್ಳಿಗಾಡಿಗಳಲ್ಲಿ ಪೋಷಕರು ತಮ್ಮ ಮಗಳನ್ನು ಶಾಲೆಗೆ ಕಡ್ಡಾಯವಾಗಿ ಕಳಿಸಬೇಕು.
ಕೊಟ್ಟೂರು: ಇಂದಿನ ಪೀಳಿಗೆಯ ಯುವಕರು ಮೊಬೈಲ್ ಗೀಳಿನಿಂದ ಹೊರ ಬಂದರೆ ತನ್ನಿಂದ ತಾನೇ ಗುಣಾತ್ಮಕತೆ ಬೆಳೆಯುತ್ತದೆ ಎಂದು ಭಾಗೀರಥಿ ಪಿಯು ಕಾಲೇಜು ಪ್ರಾಚಾರ್ಯೆ ನಿರ್ಮಲಾ ಶಿವನಗುತ್ತಿ ಹೇಳಿದರು.
ಪಟ್ಟಣದ ಭಾಗೀರಥಿ ಪಿಯು ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಓದಿನೊಂದಿಗೆ ಸಾಹಿತ್ಯದಲ್ಲಿ ಅಭಿರುಚಿ ಬೆಳೆಸಿಕೊಳ್ಳಬೇಕು. ತಂದೆ ತಾಯಿಗಳಿಂದ ಬಂದ ಸಂಸ್ಕೃತಿ, ಸದಾಚಾರ ನಮ್ಮನ್ನು ದೊಡ್ಡ ಸ್ಥಾನಕ್ಕೆ ಬೆಳೆಸುತ್ತವೆ. ಜೀವನದಲ್ಲಿ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಬೇಕು. ಇಂದಿನ ದಿನಗಳಲ್ಲಿ ಮಹಿಳೆಯರು ಹೆಚ್ಚು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹಳ್ಳಿಗಾಡಿಗಳಲ್ಲಿ ಪೋಷಕರು ತಮ್ಮ ಮಗಳನ್ನು ಶಾಲೆಗೆ ಕಡ್ಡಾಯವಾಗಿ ಕಳಿಸಬೇಕು. ಮಹಿಳೆ ಶಿಕ್ಷಣ ಕಲಿತಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಮಹಿಳಾ ಶಿಕ್ಷಣದ ಪ್ರಾಮುಖ್ಯತೆ ಮತ್ತು ಶಿಕ್ಷಣದ ಬಗ್ಗೆ ಅರಿವು ಕುರಿತು ದತ್ತಿ ಉಪನ್ಯಾಸ ನೀಡಿದ ಪ್ರಾಧ್ಯಾಪಕ ಡಾ.ಜಗದೀಶಚಂದ್ರ ಭೋಸ್, ಮಹಿಳೆಯರನ್ನು ಸುಶಿಕ್ಷತೆ, ಅಸುಶಿಕ್ಷತೆ ಎಂಬ ಬೇಧದಿಂದ ನೋಡಬಾರದು. ಶಿಕ್ಷಣ ಪಡೆಯದಿದ್ದರೂ ಮಹಿಳೆ ಗೃಹಿಣಿಯಾಗಿ ಇಡೀ ಕುಟುಂಬ ನಿರ್ವಹಿಸುವ ಉತ್ತಮ ಶಿಕ್ಷಕಿಯಾಗಿದ್ದಾಳೆ. ಶಿಕ್ಷಣ ಪಡೆಯದ ಅನೇಕ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಜನನಿ ತಾನೇ ಮೊದಲು ಗುರು ಎಂಬ ಮಾತು ಬಂದಿರುವುದು ಮಹಿಳೆಯಲ್ಲಿರುವ ಮಾತೃ ವಾತ್ಸಲ್ಯದಿಂದ ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ದೇವರಮನಿ ಕೊಟ್ರೇಶ್ ಮಾತನಾಡಿ, ಎಲ್ಲರಲ್ಲೂ ಸಮಯ ಪ್ರಜ್ಞೆ ಬಹಳ ಮುಖ್ಯ, ಚಂಚಲವಾಗಿರುವ ಮನಸ್ಸನ್ನು ಸದಾ ಹತೋಟಿಯಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಓದುವುದನ್ನು ಅಭ್ಯಾಸ ಮಾಡಬೇಕು. ಆಗ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ದತ್ತಿ ದಾನಿಗಳಾದ ಶಿಕ್ಷಕಿ ಕವಿತಾ ಗಂಗಾಧರ, ಜವಳಿ ಗಂಗಾಧರ ಮಾತನಾಡಿದರು. ಕಸಾಪ ಸದಸ್ಯ ಈಶ್ವರಪ್ಪ ತುರಕಾಣಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪದ ಸೊನ್ನದ ರಾಜಣ್ಣ, ಈರಣ್ಣ ಇತರರು ಇದ್ದರು. ಕಸಾಪ ಗೌರವ ಕಾರ್ಯದರ್ಶಿ ಬಿ.ಎಂ. ಗಿರೀಶ, ಅರವಿಂದ ಬಸಾಪುರ ನಿರ್ವಹಿಸಿದರು.