ಸಾರಾಂಶ
ಹಾವೇರಿ: ಸಾಮಾನ್ಯ ಜ್ಞಾನವೇ ರಸಪ್ರಶ್ನೆ ಸ್ಪರ್ಧೆಯ ಕೇಂದ್ರಬಿಂದು. ನಮ್ಮಲ್ಲಿರುವ ತಾರ್ಕಿಕ ಆಲೋಚನಾ ಶಕ್ತಿಯನ್ನು ಒರೆಗೆ ಹಚ್ಚಲು ರಸಪ್ರಶ್ನೆ ಸ್ಪರ್ಧೆ ಸಹಕಾರಿಯಾಗುತ್ತದೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ್ ತಿಳಿಸಿದರು.ತಾಲೂಕಿನ ಅಗಡಿ ಗ್ರಾಮದಲ್ಲಿ ರೇಣುಕಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ತಾಲೂಕು ಮಟ್ಟದ ಮುಕ್ತ ಭಾರತ ದರ್ಶನ ರಸಪ್ರಶ್ನೆ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.ಕ್ವಿಜ್ ಕಾರ್ಯಕ್ರಮಗಳ ಮುಖ್ಯ ಆಕರ್ಷಣೆಯೇ ವಿಷಯ ಸಂಪತ್ತು ಹಾಗೂ ಪ್ರಶ್ನೆಗಳ ನಿರೂಪಣೆ. ಇಲ್ಲಿ ನಮ್ಮ ನೆನಪಿನ ಶಕ್ತಿಗಿಂತ ಬುದ್ಧಿ ಮತ್ತೆಯ ಪರೀಕ್ಷೆ ನಡೆಯುತ್ತದೆ. ಇಲ್ಲಿ ಗೆಲ್ಲುವುದಷ್ಟೇ ಗುರಿಯಲ್ಲ, ಭಾಗವಹಿಸುವಿಕೆಯು ಅಷ್ಟೇ ಮುಖ್ಯ. ಈ ಸ್ಪರ್ಧೆ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪ್ರಗತಿಗಷ್ಟೇ ಅಲ್ಲದೆ ಭವಿಷ್ಯದಲ್ಲಿ ಅವರ ಉದ್ಯೋಗ, ವ್ಯಕ್ತಿತ್ವ ರೂಪುಗೊಳ್ಳುವಿಕೆಯಲ್ಲಿ ಮಹತ್ವದ ಪರಿಣಾಮ ಬೀರುತ್ತದೆ ಎಂದು ಹನುಮಂತಗೌಡ ಆರು ಸುತ್ತುಗಳಲ್ಲಿ ವೈವಿಧ್ಯಮಯ ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿದರು.ತುಂಗಭದ್ರಾ ತಂಡದ ಬಸವಣ್ಣೆಪ್ಪ ಪೂಜಾರ- ರಾಘವೇಂದ್ರ ಕಬಾಡಿ ಪ್ರಥಮ, ಶರಾವತಿ ತಂಡದ ಜಯಶ್ರೀ ತಿರುಕಣ್ಣನವರ- ಸಾಗರ್ ಎಂ.ಎಚ್. ದ್ವಿತೀಯ, ಗಂಗಾ ತಂಡದ ಎಚ್.ಎಫ್. ಇಂಗಳಗಿ- ಎನ್.ಎಚ್. ಏರಿಮನಿ ತೃತೀಯ ಹಾಗೂ ಯಮುನಾ ತಂಡದ ರಕ್ಷಿತಾ ಬಜ್ಜಿ- ದಾನೇಶ್ವರಿ ದುಂಡಿ, ಕಾವೇರಿ ತಂಡದ ಶಿವರಾಜ್ ಬಾರ್ಕಿ- ಪೂಜಾ ಸಮಾಧಾನಕರ ಸ್ಥಾನ ಪಡೆದರು.ದೇವಸ್ಥಾನದ ಎಲ್ಲಮ್ಮ ಪೂಜಾರ, ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ, ಮುಖ್ಯ ಶಿಕ್ಷಕ ವಿ.ವಿ. ಕಮತರ್, ಶಿಕ್ಷಕ ಶಂಕರ್ ಚಿಕ್ಕಳ್ಳಿ, ಅತಿಥಿ ಶಿಕ್ಷಕಿ ಭವ್ಯ ಮಡಿವಾಳರ ನಿರ್ಣಾಯಕರಾಗಿದ್ದರು. ದೇವಸ್ಥಾನ ಸಮಿತಿಯ ದುಂಡಪ್ಪ ಶಾವಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ಸಮಿತಿ ಸಂಚಾಲಕ ರೇವಣಪ್ಪ ರಾಗಿಯವರ ಸ್ವಾಗತಿಸಿದರು. ಜಗದೀಶ ಬಡಿಗೇರ ವಂದಿಸಿದರು.10, 11ರಂದು ಸರ್ಕಾರಿ ನೌಕರರ ಕ್ರೀಡಾಕೂಟ
ಹಾವೇರಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಮಾ. 10 ಹಾಗೂ 11ರಂದು ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದೆ.ಫುಟ್‌ಬಾಲ್, ವಾಲಿಬಾಲ್, ಹಾಕಿ, ಕಬಡ್ಡಿ, ಟೇಬಲ್ ಟೆನ್ನಿಸ್, ಟೆನ್ನಿಸ್, ಷಟಲ್ ಬ್ಯಾಡ್ಮಿಂಟನ್, ಕೇರಂ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಜರುಗಲಿವೆ.ಶಿಕ್ಷಕರು, ಪೊಲೀಸರು, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಗಳ ಬ್ಯಾಡ್ಜ್ ನಂಬರ್ ಸಿಬ್ಬಂದಿ, ಕ್ರೀಡಾ ಮೀಸಲಾತಿಯಡಿ ಆಯ್ಕೆಯಾದ ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಉಳಿದಂತೆ ಎಲ್ಲ ಲಿಪಿಕ ಸಿಬ್ಬಂದಿ ಹಾಗೂ ಸರ್ಕಾರಿ ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.