ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾಲೇಜಿನ ವೈದ್ಯಕೀಯ ಶಾಸ್ತ್ರ ವಿಭಾಗ ಆಶ್ರಯದಲ್ಲಿ, ವೈದ್ಯಕೀಯ ಶಾಸ್ತ್ರ ವಿಭಾಗದ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ 5ನೇ ವರ್ಷದ ರಾಜ್ಯ ಮಟ್ಟದ ಅಂತರ್ ವೈದ್ಯಕೀಯ ಕಾಲೇಜು ರಸ ಪ್ರಶ್ನೆ ಸ್ಪರ್ಧಾಕೂಟ

ಮಂಗಳೂರು: ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳು ವಿವಿಧ ಶೈಕ್ಷಣಿಕ ಸ್ಪರ್ಧಾಕೂಟದಲ್ಲಿ ಪಾಲ್ಗೊಂಡು ತಮ್ಮ ಜ್ಞಾನವನ್ನು ವೃದ್ಧಿಸಿದರೆ ಭವಿಷ್ಯದ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಶೈಕ್ಷಣಿಕ ಸ್ಪರ್ಧಾಕೂಟದಲ್ಲಿ ಭಾಗವಹಿಸಲು ಪ್ರಥಮ ಆದ್ಯತೆ ನೀಡಬೇಕು. ಸೋಲು- ಗೆಲವು ದ್ವಿತೀಯ ಉದ್ದೇಶವಾಗಿರಲಿ ಎಂದು ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ.ಡಾ. ಶಹನವಾಜ್ ಮಣಿಪಾಡಿ ಸಲಹೆ ನೀಡಿದ್ದಾರೆ.

ನಗರದ ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾಲೇಜಿನ ವೈದ್ಯಕೀಯ ಶಾಸ್ತ್ರ ವಿಭಾಗ ಆಶ್ರಯದಲ್ಲಿ, ವೈದ್ಯಕೀಯ ಶಾಸ್ತ್ರ ವಿಭಾಗದ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ 5ನೇ ವರ್ಷದ ರಾಜ್ಯ ಮಟ್ಟದ ಅಂತರ್ ವೈದ್ಯಕೀಯ ಕಾಲೇಜು ರಸ ಪ್ರಶ್ನೆ ಸ್ಪರ್ಧಾಕೂಟ “ಕಿಮ್ಸ್ ಯು.ಜಿ. ಮೆಡಿಕ್ವಿಜ್ 2025” ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ವಿಜೇತರು: ಸ್ಪರ್ಧಾ ಕೂಟದಲ್ಲಿ ಕಣಚೂರು ವೈದ್ಯಕೀಯ ಕಾಲೇಜನ್ನು ಪ್ರತಿನಿಧಿಸಿದ ನೌಶೀನ್ ಮತ್ತು ಅಹಾದ್ ಜೋಡಿ ಪ್ರಥಮ ಸ್ಥಾನ ಗಳಿಸಿ ಪ್ರತಿಷ್ಠಿತ ಮೆಡಿಕ್ವಿಜ್ ಪ್ರಶಸ್ತಿ ಪಡೆಯಿತು. ಯೆನಪೋಯಾ ವೈದ್ಯಕೀಯ ಕಾಲೇಜನ್ನು ಪ್ರತಿನಿಧಿಸಿದ ಸೂರ್ಯ ಶ್ರೀಧರನ್ ಮತ್ತು ಅತೀಫ್ ಸತ್ತಾರ್ ತಂಡ ದ್ವಿತೀಯ, ಕಣಚೂರು ವೈದ್ಯಕೀಯ ಕಾಲೇಜನ್ನು ಪ್ರತಿನಿಧಿಸಿದ ಮಾಲಿಕ್ ರೆಹಾನ್ ಮತ್ತು ಶೇಖ್ ಅಫಿಝುಲ್ಲಾ ತಂಡ ತೃತೀಯ ಸ್ಥಾನ ಪಡೆಯಿತು.

ಕಾಲೇಜಿನ ವೈದ್ಯಕೀಯ ಆಧೀಕ್ಷಕ ಪ್ರೊ.ಡಾ. ಕಿರಣ್ ಕುಮಾರ್, ಕಣಚೂರು ಆರೋಗ್ಯ ಮತ್ತು ವಿಜ್ಞಾನ ಸಲಹಾ ಸಮಿತಿ ಸದಸ್ಯ ಪ್ರೊ.ಡಾ. ಎಂ.ವಿ. ಪ್ರಭು ಇದ್ದರು. ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಡಾ. ದೇವದಾಸ್ ರೈ ನಿರ್ವಹಿಸಿದರು. ಅವಿಭಜಿತ ದ.ಕ. ಜಿಲ್ಲೆಯ ವಿವಿಧ ವೈದ್ಯಕೀಯ ಶಿಕ್ಷಣ ಕಾಲೇಜಿನ 60 ತಂಡಗಳು ನಿರ್ಣಾಯಕ ಮತ್ತು ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದವು.ಡಾ. ದೇವದಾಸ್ ರೈ ಸ್ವಾಗತಿಸಿದರು. ಡಾ. ಅಬ್ದುಲ್ ಕರೀಮ್ ಫಾರುಖಿ ನಿರೂಪಿಸಿ ವಂದಿಸಿದರು. ಡಾ. ಪ್ರೀತಮ್ ಸ್ಪರ್ಧಾ ಕೂಟವನ್ನು ಸಂಘಟಿಸಿದ್ದರು. ಎಂ.ವಿ. ಮಲ್ಯ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ಪ್ರಾಯೋಜಿಸಿದ್ದರು.