ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ರಸಪ್ರಶ್ನೆ ಕಾರ್ಯಕ್ರಮಗಳು ಗ್ರಾಮೀಣ ಮಕ್ಕಳಲ್ಲಿ ಸೂಪ್ತವಾಗಿ ಅಡಗಿರುವ ಸಾಮಾನ್ಯ ಜ್ಞಾನವನ್ನು ಹೊರ ಸೂಸಲು ಸಹಕಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್.ಹನುಮಂತರಾಯಪ್ಪ ತಿಳಿಸಿದರು.ಕೊಡಿಗೇನಹಳ್ಳಿ ಹೋಬಳಿ ಸುದ್ದೇಕುಂಟೆ ಗ್ರಾಮದ ಸರ್ಕಾರಿ ಪ್ರಾಥಮಿ ಪಾಠ ಶಾಲೆಯಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಕೊಡಿಗೇನಹಳ್ಳಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಧುಗಿರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಪಾಠ ಶಾಲೆಗಳ ಮಕ್ಕಳಿಗೆ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ಶಾಲೆಗಳಲ್ಲಿ ವೃತ್ತ ಪತ್ರಿಕಗೆಳನ್ನು ದಿನ ನಿತ್ಯ ಓದುವುದರಿಂದ, ಸುಭಾಷಿತ, ಪ್ರಪಂಚದಲ್ಲಿ ನಡೆಯುವ ಘಟನಾವಳಿಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಇದರಿಂದ ನಮ್ಮ ಸಾಮಾನ್ಯ ಜ್ಞಾನವು ವೃದ್ಧಿಸುತ್ತಾ ಹೋಗುತ್ತದೆ. ಇದರಿಂದ ಸಾಮಾನ್ಯ ಜ್ಞಾನ ಸಂಪಾದನೆ ಹೆಚ್ಚಿದಂತೆಲ್ಲಾ ನಮ್ಮಲ್ಲಿ ಬುದ್ದಿ ವೃದ್ಧಿಯಾಗಿ ನಗರ ಪ್ರದೇಶಗಳ ಮಕ್ಕಳೊಂದಿಗೆ ಸರಿಸಮಾನಾಗಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಈ ತಿಂಗಳ 15ರಂದು ಕಿತ್ತೂರಾಣಿ ಚನ್ನಮ್ಮ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯ್ಕೆ ಪರೀಕ್ಷೆ ನಡೆಯಲಿದ್ದು, ಅಂತಹ ಶಾಲೆಗಳಿಗೆ ಆಯ್ಕೆಯಾಗಬೇಕಾದರೆ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಅತ್ಯವಶ್ಯಕ, ಅಲ್ಲದೆ ಸರ್ಕಾರಿ ಶಾಲೆಗಳ ಉಳಿವು ಮಕ್ಕಳ ಬೆಳವಣಿಗೆಗೆ ಸ್ಥಳೀಯರು ಮತ್ತು ಹಳೇ ವಿದ್ಯಾರ್ಥಿಗಳು ಕೈ ಜೋಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ಗಂಗಾಧರ್ ವಿ.ರೆಡ್ಡಿಹಳ್ಳಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಗಳ ಜೊತೆಗೆ ಸಾಮಾನ್ಯ ಜ್ಞಾನ ಅತಿ ಮುಖ್ಯ. ಮಕ್ಕಳು ಮೊಬೈಲ್ ಗೀಳಿಗೆ ಸಿಲುಕಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳದೇ ಓದುವ ಅವಧಿಯಲ್ಲಿ ಶಿಸ್ತು, ಸಂಯಮ, ಸಮಯ ಪ್ರಜ್ಞೆ ಜೊತೆಗೆ ಕಠಿಣ ಅಭ್ಯಾಸ ನಡೆಸಿ ಅತ್ಯುನ್ನತ ಹುದ್ದೆ ಅಲಂಕರಿಸಲು ಪ್ರಮಾಣಿಕ ಪ್ರಯತ್ನ ಮಾಡಿ ಎಂದರು.
ಶಿಕ್ಷಣ ಸಂಯೋಜಕ ಜಯರಾಮ್ ಮಾತನಾಡಿ, ಪ್ರತಿ ತಿಂಗಳಿಗೊಮ್ಮ ಹೋಬಳಿಯ ಯಾವುದಾದರು ಒಂದು ಶಾಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಶೈಕ್ಷಣಿಕ ಕಾರ್ಯಕ್ರಮ ಮಾಡಬೇಕೆಂದು ನಮ್ಮ ಇಲಾಖೆ ತೀರ್ಮಾನಿಸಿದ್ದು, ಇದರಿಂದ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಅರಿವು ಮೂಡಿಸಬೇಕಿದೆ ಎಂದರು.ದಾನಿಗಾಳಾದ ರಾಜು ಮಾತನಾಡಿ,ಓದು ವ್ಯಕ್ತಿಗೆ ಅತ್ಯುನ್ನತ ಸ್ಥಾನ ಪಡೆಯುವ ಜೊತಗೆ ಗೌರವಯುತವಾಗಿ ಬದುಕು ಸಂಸ್ಕಾರವನ್ನು ಕೂಡ ಕಲಿಸುತ್ತದೆ ಎಂದರು.
ಪ್ರಾಥಮಿಕ ಕಿರಿಯ ವಿಭಾಗದಿಂದ ಮುತ್ತರಾಯನಹಳ್ಳಿ ಶಾಲೆ ಪ್ರಥಮ, ಸುದ್ದೇಕುಂಟೆ ಶಾಲೆ ದ್ವಿತೀಯ, ಮೈದನಹಳ್ಳಿ ಶಾಲೆ ತೃತೀಯ ಹಾಗೂ ಹಿರಿಯ ಪ್ರಾಥಮಿಕ ವಿಭಾಗದಿಂದ ಕೊಡಿಗೇನಹಳ್ಳಿ ಸರ್ವೋದಯ ಪ್ರೈಮರಿ ಶಾಲೆ ಪ್ರಥಮ, ಪೋಲೇನಹಳ್ಳಿ ದ್ವಿತೀಯ, ಪೋಲೇನಹಳ್ಳಿ ಹಾಗೂ ಕೊಡಿಗೇನಹಳ್ಳಿ ಬಾಲಕಿರಯರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸಂಜಯ್, ಎಸ್‌ಡಿಎಂಸಿ ಅಧ್ಯಕ್ಷ ಅಜ್ಜಪ್ಪ, ಉಪಾಧ್ಯಕ್ಷ ಜಾಫರ್ ಸಾದಿಕ್, ಮುಖ್ಯ ಶಿಕ್ಷಕ ಹೇಂಜಾರಪ್ಪ, ಮುತ್ತರಾಯನಹಳ್ಳಿ ಶಿಕ್ಷಕ ಲಕ್ಷ್ಮೀನರಸಪ್ಪ, ಕಸಾಪ ಗೌರವ ಕಾರ್ಯದರ್ಶಿ ಕೆ.ಎನ್.ರಾಮು, ದೈಹಿಕ ಶಿಕ್ಷಣಧಿಕಾರಿ ಯರಗಾಮಯ್ಯ, ದಾನಿಗಳಾದ ರಾಜು, ನಂದೀಶ್, ಬಿಆರ್‌ಪಿ ಯಶೋದಮ್ಮ, ಇಸಿಓ ರಾಘವೇಂದ್ರ, ಸಿಆರ್‌ಪಿಗಳಾದ ಮಲ್ಲಿಕಾರ್ಜುನ್, ಶಿವಕುಮಾರ್, ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಹಾಜರಿದ್ದರು.ಫೋಟೋ: ಸುದ್ದೇಕುಂಟೆ ಗ್ರಾಮದ ಸರ್ಕಾರಿ ಪ್ರಾಥಮಿ ಪಾಠ ಶಾಲೆಯಲ್ಲಿ ಹೋಬಳಿ ಮಟ್ಟದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಪಾಠ ಶಾಲೆಗಳ ಮಕ್ಕಳಿಗೆ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯ ಕಾರ್ಯಕ್ರಮ ನಡೆಯಿತು.