ದೇಶಾಭಿಮಾನ ಬೆಳೆಸಲು ರಸಪ್ರಶ್ನೆ ಸಹಕಾರಿ

| Published : Sep 08 2025, 01:00 AM IST

ಸಾರಾಂಶ

ಚನ್ನಪಟ್ಟಣ: ಭಾರತ ವಿಕಾಸ ಪರಿಷದ್ ನಡೆಸುತ್ತಿರುವ ಭಾರತ್ ಕೋ ಜಾನೋ ರಸಪ್ರಶ್ನೆ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಭಾವಿಪ ಮಾಜಿ ಅಧ್ಯಕ್ಷ ವಸಂತಕುಮಾರ್ ತಿಳಿಸಿದರು.

ಚನ್ನಪಟ್ಟಣ: ಭಾರತ ವಿಕಾಸ ಪರಿಷದ್ ನಡೆಸುತ್ತಿರುವ ಭಾರತ್ ಕೋ ಜಾನೋ ರಸಪ್ರಶ್ನೆ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಭಾವಿಪ ಮಾಜಿ ಅಧ್ಯಕ್ಷ ವಸಂತಕುಮಾರ್ ತಿಳಿಸಿದರು.

ಪಟ್ಟಣದ ಮಂಗಳವಾರಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತ ವಿಕಾಸ ಪರಿಷದ್‌ ಕಣ್ವ ಶಾಖೆ ಹಮ್ಮಿಕೊಂಡಿದ್ದ ಭಾರತ ಕೋ ಜಾನೋ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೇಶವನ್ನು ತಿಳಿದುಕೊಂಡಾಗ ಮಾತ್ರ ನಿಜವಾದ ರಾಷ್ಟ್ರಪ್ರೇಮ ಬೆಳೆಯುತ್ತದೆ. ಈ ರಸಪ್ರಶ್ನೆ ಅದಕ್ಕೆ ಸೇತುವೆಯಂತಿದೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು. ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವುದು ಭವಿಷ್ಯದ ಭಾರತ ಗಟ್ಟಿಯಾಗಿಸಲು ಬುನಾದಿಯಾಗುತ್ತದೆ ಎಂದರು.

ಭಾವಿಪ ಕಾರ್ಯದರ್ಶಿ ಯೋಗೇಶ್ ಚಕ್ಕೆರೆ ಮಾತನಾಡಿ, ವಿದ್ಯಾರ್ಥಿಗಳು ಭಾರತದ ವೈವಿಧ್ಯಮಯ ಪರಂಪರೆ, ಶ್ರೀಮಂತ ಇತಿಹಾಸ, ಸಂಸ್ಕೃತಿ, ಹಬ್ಬ-ಜಾತ್ರೆಗಳು, ಕಲೆ-ಸಾಹಿತ್ಯ, ವಿಜ್ಞಾನ-ತಂತ್ರಜ್ಞಾನ ಸಾಧನೆಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶವಿರುತ್ತದೆ. ವಿವಿಧತೆಯಲ್ಲಿ ಏಕತೆ ಎಂಬ ಮೌಲ್ಯವನ್ನು ಉತ್ತೇಜಿಸುವುದರೊಂದಿಗೆ ರಾಷ್ಟ್ರಪ್ರೇಮ, ಜ್ಞಾನ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದು ಇದರ ಪ್ರಮುಖ ಗುರಿ ಎಂದು ತಿಳಿಸಿದರು.

ಭಾವಿಪ ಪ್ರಾಂತ್ಯ ಉಪಾಧ್ಯಕ್ಷ ಗುರುಮಾದಯ್ಯ ಮಾತನಾಡಿ, ವಿದ್ಯಾರ್ಥಿಗಳು ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಅರಿಯಬೇಕು. ದೇಶ ಮತ್ತು ಭಾಷೆಯ ಅಭಿಮಾನ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಭಾವಿಪ ಅಧ್ಯಕ್ಷ ಪುಟ್ಟಸ್ವಾಮಿಗೌಡ (ಡಿಪಿಎಸ್ ), ಉಪಾಧ್ಯಕ್ಷ ಕರಿಯಪ್ಪ, ಖಜಾಂಚಿ ವಿ.ಟಿ.ರಮೇಶ್, ಪ್ರಾಂತ್ಯ ಸಂಚಾಲಕ ಬೆಸ್ಕಾಂ ಶಿವಲಿಂಗಯ್ಯ, ಪದಾಧಿಕಾರಿಗಳಾದ ತಿಪ್ರೇಗೌಡ, ಬಿ.ಎನ್. ಕಾಡಯ್ಯ, ಸಿದ್ದರಾಮೇಗೌಡ, ಎಂ.ಹೆಚ್. ಕೃಷ್ಣಕುಮಾರ್, ರಾಜು , ರಮೇಶ್, ಮಂಗಳವಾರಪೇಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜಪ್ಪ ಉಪಸ್ಥಿತರಿದ್ದರು.

ಬೈರಾಪಟ್ಟಣ ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಸಂಪನ್ಮೂಲ ಶಿಕ್ಷಕ ಎಂ.ಜೆ.ರಾಜಶೇಖರ ಇಟಗಿ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಕೆ.ರಂಗನಾಥ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.

ಭಾರತ್ ಕೋ ಜಾನೋ ರಸಪ್ರಶ್ನೆ ಸ್ಪರ್ಧೆಯಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಸುಮಾರು ೩೦ಕ್ಕೂ ಹೆಚ್ಚಿನ ಶಾಲೆಗಳ ವಿದ್ಯಾರ್ಥಿ ತಂಡಗಳು ಭಾಗವಹಿಸಿತ್ತು. ಅದರಲ್ಲಿ ಹಿರಿಯ ವಿಭಾಗದಲ್ಲಿ ಆದರ್ಶ ವಿದ್ಯಾಲಯ ಮತ್ತಿಕೆರೆ ಶೆಟ್ಟಿಹಳ್ಳಿ (ಪ್ರಥಮ ಸ್ಥಾನ), ಸೇಂಟ್ ಅನ್ಸ್ ಪ್ರೌಢಶಾಲೆ ಚನ್ನಪಟ್ಟಣ(ದ್ವಿತೀಯ ಸ್ಥಾನ), ಸರ್ಕಾರಿ ಪ್ರೌಢಶಾಲೆ ಬೈರಾಪಟ್ಟಣ (ತೃತೀಯ ಸ್ಥಾನ), ಕಿರಿಯರ ವಿಭಾಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಚನ್ನಪಟ್ಟಣ ಟೌನ್(ಪ್ರಥಮ ಸ್ಥಾನ ), ಮೊರಾರ್ಜಿ ದೇಸಾಯಿ ವಸತಿ ಶಾಲೆ ಚಕ್ಕೆರೆ (ದ್ವಿತೀಯ ಸ್ಥಾನ), ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೊನ್ನಾಯಕನಹಳ್ಳಿ(ತೃತೀಯ ಸ್ಥಾನ) ಪಡೆದುಕೊಂಡವು.

ಪೊಟೋ೭ಸಿಪಿಟಿ೨:

ಚನ್ನಪಟ್ಟಣದ ಮಂಗಳವಾರಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತ ವಿಕಾಸ ಪರಿಷದ್ ಕಣ್ವ ಶಾಖೆ ಹಮ್ಮಿಕೊಂಡಿದ್ದ ಭಾರತ ಕೋ ಜಾನೋ ರಸಪ್ರಶ್ನೆ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.