ಆಲೂರು ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆ ಹಾನಿ ವೀಕ್ಷಿಸಿದ ಆರ್‌. ಅಶೋಕ್‌

| Published : Jul 07 2025, 11:48 PM IST

ಆಲೂರು ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆ ಹಾನಿ ವೀಕ್ಷಿಸಿದ ಆರ್‌. ಅಶೋಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಭಯಾನಕ ಸ್ಥಿತಿಯನ್ನು ಅನೇಕ ಸಚಿವರು ಕಂಡುಕೊಳ್ಳದೆ, ಭೇಟಿ ನೀಡದೆ ಅಲ್ಲಿಂದಲೇ ಹಿಂದಿರುಗಿದ್ದಾರೆ. ಹಿರಿಯ ಸಚಿವರು, ವೈದ್ಯಕೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೆ ನಿಖರವಾದ ಕಾರಣ ಪತ್ತೆಯಾಗಬಹುದು ಎಂದು ಅವರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ಮೆಕ್ಕೆಜೋಳ ಬೆಳೆ ಬಿಳಿ ಸುಳಿ ರೋಗದಿಂದ ಸಂಪೂರ್ಣ ನಾಶವಾಗಿದೆ. ಆದರೆ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಬಿಳಿಸುಳಿ ರೋಗದಿಂದ ನಾಶವಾಗುತ್ತಿರುವ ಮೆಕ್ಕೆಜೋಳದ ಪರಿಸ್ಥಿತಿಯನ್ನು ಪರಿಶೀಲಿಸಲು ಆಲೂರು ತಾಲೂಕಿನ ಕಾರಿಗನಹಳ್ಳಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊದಿಗೆ ಅವರು ಮಾತನಾಡಿದರು.

ಅಧಿಕಾರಿಗಳ ಸಲಹೆಯಂತೆ ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಮಾಡಿದ ರೈತರು, ತಮ್ಮ ಒಡವೆ ಗಿರವಿ ಇಟ್ಟು ಮೆಕ್ಕೆಜೋಳ ಬೆಳೆದಿದ್ದಾರೆ, ಆದರೆ ಬೆಳೆ ಸಂಪೂರ್ಣ ನಾಶವಾಗಿದೆ. ರಾಜ್ಯದ ಹನ್ನೆರಡು ಸಾವಿರ ಹೆಕ್ಟೇರ್ ಪ್ರದೇಶದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ಇಷ್ಟು ದೊಡ್ಡ ಪ್ರಮಾಣದ ಬೆಳೆ ನಾಶವಾಗಿದ್ದರೂ, ಯಾವುದೇ ಸಚಿವರು ಅಥವಾ ಹಿರಿಯ ಅಧಿಕಾರಿಗಳು ಹಾಸನ ಜಿಲ್ಲೆಗೆ ಭೇಟಿ ನೀಡಿಲ್ಲ. ಸರ್ಕಾರಕ್ಕೆ ಮಾನ ಇದ್ದರೆ ಹಾಸನ ಜಿಲ್ಲೆಗೆ ಭೇಟಿ ನೀಡಿ ರೈತರ ಸಭೆ ನಡೆಸಬೇಕು, ನಷ್ಟಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ಈ ಸರ್ಕಾರ ಸಿಎಂ ಬದಲಾವಣೆ, ಸುರ್ಜೇವಾಲಾ ಭೇಟಿ, ಬದಲಾವಣೆಗಳ ಪೈಪೋಟಿಯಲ್ಲಿ ತೊಡಗಿದೆ, ಆದರೆ ರೈತರ ಸಂಕಷ್ಟ ಸರ್ಕಾರದ ಗಮನಕ್ಕೆ ಬೀಳುತ್ತಿಲ್ಲ, ಬೆಂಗಳೂರು ಕಚೇರಿಗಳಲ್ಲಿ ಮೀಟಿಂಗ್ ನಡೆಸುತ್ತಿರುವ ಸರ್ಕಾರಕ್ಕೆ ರೈತರ ದುಃಖ ಅರ್ಥವಾಗುತ್ತಿಲ್ಲ ಎಂದು ಟೀಕಿಸಿದರು.

ರೈತರು ಪ್ರತಿ ಎಕರೆಗೆ ೧ ಲಕ್ಷ ಪರಿಹಾರ ಕೋರುತ್ತಿದ್ದಾರೆ, ಕೂಡಲೇ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ, ವರದಿ ತರಿಸಿ ಪರಿಹಾರ ಘೋಷಿಸಬೇಕು. ಹಣವಿಲ್ಲದಿದ್ದರೂ ಸಾಲ ಮಾಡಿ ಪರಿಹಾರ ಕೊಡಬೇಕು ಎಂದು ಆರ್. ಅಶೋಕ್ ಸರ್ಕಾರಕ್ಕೆ ಸಲಹೆ ನೀಡಿದರು.

ಕಳೆದ ವರ್ಷ ೧.೦೫ ಲಕ್ಷ ಕೋಟಿ ಸಾಲ ಮಾಡಿದ್ದೀರಿ, ಈ ವರ್ಷ ಇನ್ನೂ ೨ ಲಕ್ಷ ಕೋಟಿ ಸಾಲ ಮಾಡಿ ರೈತರನ್ನು ಉಳಿಸಿ, ಬೆಂಗಳೂರು ನಗರದಲ್ಲಿ ಟನಲ್ ರಸ್ತೆ ಮಾಡಲು ಹಣ ಇದೆ, ಆದರೆ ರೈತರ ಜೀವ ಉಳಿಸಲು ಹಣ ಇಲ್ಲವೆ ಎಂದು ಪ್ರಶ್ನಿಸಿದರು.

ಈ ವೇಳೆ ಆಲೂರು ಶಾಸಕರಾದ ಸಿಮೆಂಟ್ ಮಂಜು ಹಾಗೂ ಕೆಲ ಪ್ರಮುಖ ಅಧಿಕಾರಿಗಳು ಕೂಡ ಆರ್.ಅಶೋಕ್ ಅವರೊಂದಿಗೆ ಸ್ಥಳದಲ್ಲಿ ಉಪಸ್ಥಿತರಿದ್ದರು. ರೈತರಿಂದ ನೇರವಾಗಿ ಮಾಹಿತಿ ಪಡೆದು, ನಷ್ಟದ ಅವಲೋಕನ ನಡೆಸಲಾಯಿತು.

---------

ಹೃದಯಾಘಾತದಿಂದ ಸಾವು ಹೆಚ್ಚಳವಾದರೂ ಗಂಭೀರವಾಗಿ ಪರಿಗಣಿಸದ ಸರ್ಕಾರ

ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳ ಬಗ್ಗೆ ತೀವ್ರ ನೋವುಂಟಾಗಿದೆ. ಆದರೆ ಹಾಸನದಲ್ಲಿ ಪದೇಪದೇ ಹೃದಯಾಘಾತದಿಂದ ಸಾವುಗಳು ಸಂಭವಿಸುತ್ತಿದ್ದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಶೋಕ್ ಕಿಡಿಕಾರಿದರು.

ಮುಖ್ಯಮಂತ್ರಿಗಳು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಇದು ಕೋವಿಡ್ ಲಸಿಕೆಯ ಪರಿಣಾಮವಾಗಿರಬಹುದು ಎಂದು ಹೇಳಿಕೆ ನೀಡಿದ್ದಾರೆ. ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಿಂದ ಇಂತಹ ಹೇಳಿಕೆ ಬರಬಾರದು. ಇದು ನಗೆಪಾಟಲಿಗೀಡಾಗುವ ವಿಷಯವಾಗಿದೆ ಎಂದರು.

ಈ ಕುರಿತಂತೆ ದೆಹಲಿಯ ಆರೋಗ್ಯ ಇಲಾಖೆ ಮತ್ತು ಜಯದೇವ ಆಸ್ಪತ್ರೆಗಳಿಂದ ವರದಿಗಳು ಬಂದಿವೆ, ಆದರೆ ಅವುಗಳನ್ನು ಮುಚ್ಚಿಹಾಕಲಾಗಿದೆ. ದೇಶಾದ್ಯಂತ ಕೋವಿಡ್ ಲಸಿಕೆ ನೀಡಲಾಗಿದೆ, ಆದರೆ ಹೃದಯಾಘಾತದಿಂದ ಸಾವು ಹಾಸನದಲ್ಲಿಯೇ ಯಾಕೆ ಹೆಚ್ಚು? ಇದು ಪ್ರಶ್ನೆಗೆ ಗುರಿಯಾಗಬೇಕಾದ ವಿಷಯ ಎಂದರು.

ಹಾಸನದ ಭಯಾನಕ ಸ್ಥಿತಿಯನ್ನು ಅನೇಕ ಸಚಿವರು ಕಂಡುಕೊಳ್ಳದೆ, ಭೇಟಿ ನೀಡದೆ ಅಲ್ಲಿಂದಲೇ ಹಿಂದಿರುಗಿದ್ದಾರೆ. ಹಿರಿಯ ಸಚಿವರು, ವೈದ್ಯಕೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೆ ನಿಖರವಾದ ಕಾರಣ ಪತ್ತೆಯಾಗಬಹುದು ಎಂದು ಅವರು ಒತ್ತಾಯಿಸಿದರು.

ಸರ್ಕಾರ ಈಗ ಕೋಮಾ ಸ್ಥಿತಿಯಲ್ಲಿ ಇದೆ. ಅಧಿಕಾರ ಹಸ್ತಾಂತರ ಎಂಬ ಲಾಲಸೆಯಲ್ಲಿ ಮುಳುಗಿದೆ. ದೆಹಲಿಗೆ ಎಷ್ಟು ಹಣ ತಂದುಕೊಡಬೇಕು, ಯಾರ ಕೈಯ್ಯಲ್ಲಿ ಎಷ್ಟು ಹಣ ಹೋಗಬೇಕು ಎಂಬ ಪೈಪೋಟಿಯಲ್ಲಿ ಇದೆ. ಇದರ ಪರಿಣಾಮ ಜನರ ಜೀವ ಕಳೆದು ಹೋಗುತ್ತಿದೆ ಎಂದು ಸರ್ಕಾರವನ್ನು ತಿವಿದರು.