ಆರ್.ವಿ.ದೇವರಾಜು ಅವರು ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿದ್ದಾಗ ಎಲ್ಲರ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ಎಸ್.ಎಂ.ಕೃಷ್ಣ ಅವರಿಗೆ ಚಾಮರಾಜಪೇಟೆ ಕ್ಷೇತ್ರ ಬಿಟ್ಟುಕೊಟ್ಟ ನಂತರ ಅವರಿಗೆ ರಾಜಕೀಯದಲ್ಲಿ ಮತ್ತೆ ಅವಕಾಶ ಸಿಗಲಿಲ್ಲ. ಆರ್.ವಿ.ದೇವರಾಜು ಅವರ ಪುತ್ರ ಯುವರಾಜ್ ರಾಜಕೀಯವಾಗಿ ಬೆಳೆಯಲು ಅವರ ಜೊತೆ ಇರುತ್ತೇನೆ ಎಂದು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಉದಾರ ವ್ಯಕ್ತಿತ್ವದ, ಸ್ನೇಹಜೀವಿ ರಾಜಕಾರಣಿಯಾಗಿದ್ದ ಆರ್.ವಿ.ದೇವರಾಜ್ ವಿವಾದಾತೀತ ವ್ಯಕ್ತಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗಾಗಿ ಚಾಮರಾಜಪೇಟೆ ಕ್ಷೇತ್ರವನ್ನೇ ಬಿಟ್ಟುಕೊಟ್ಟಿದ್ದ ತ್ಯಾಗಮಯಿ ರಾಜಕಾರಣಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ಮಂಡ್ಯದ ಹರಿಪ್ರಿಯ ಹೋಟೆಲ್ ಚಾಣಕ್ಯ ಸಭಾಂಗಣದಲ್ಲಿ ಕಾಂಗ್ರೆಸ್ ನಾಯಕ ಆರ್.ವಿ.ದೇವರಾಜುರವರಿಗೆ ಪುಷ್ಪ ನಮನ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಆರ್.ವಿ.ದೇವರಾಜು ಅವರು ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿದ್ದಾಗ ಎಲ್ಲರ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ಎಸ್.ಎಂ.ಕೃಷ್ಣ ಅವರಿಗೆ ಚಾಮರಾಜಪೇಟೆ ಕ್ಷೇತ್ರ ಬಿಟ್ಟುಕೊಟ್ಟ ನಂತರ ಅವರಿಗೆ ರಾಜಕೀಯದಲ್ಲಿ ಮತ್ತೆ ಅವಕಾಶ ಸಿಗಲಿಲ್ಲ. ಆರ್.ವಿ.ದೇವರಾಜು ಅವರ ಪುತ್ರ ಯುವರಾಜ್ ರಾಜಕೀಯವಾಗಿ ಬೆಳೆಯಲು ಅವರ ಜೊತೆ ಇರುತ್ತೇನೆ ಎಂದು ಭರವಸೆ ನೀಡಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿ, ಆರ್.ವಿ.ದೇವರಾಜು ಅವರು ಜನಪರ ಕಾಳಜಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ತಳಮಟ್ಟದಿಂದ ಹೋರಾಟ ನಡೆಸಿಕೊಂಡು ಬಂದಿದ್ದ ಅವರು ಸಾಮಾಜಿಕ ಕಳಕಳಿಯೊಂದಿಗೆ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದರು ಎಂದು ತಿಳಿಸಿದರು.

ಆರ್.ವಿ.ದೇವರಾಜು ಅವರು ಪಕ್ಷಾಂತರ ಮಾಡಿದ್ದರೆ ಅಧಿಕಾರದಲ್ಲಿ ಇರುತ್ತಿದ್ದರು. ದೇವರಾಜು ಅವರಲ್ಲಿ ಕಾಂಗ್ರೆಸ್ ಪಕ್ಷ ನಿಷ್ಠೆ, ಬದ್ಧತೆ ಇತ್ತು. ಕಾಂಗ್ರೆಸ್ ಪಕ್ಷದ ಎನ್‌ಎಸ್‌ಯುಐ ಹಾಗೂ ಸೇವಾದಳ ಸಂಘಟನೆ ಅಂದು ಯಾವ ರೀತಿ ಇತ್ತು ಎಂಬುದನ್ನು ಕಾಂಗ್ರೆಸ್ ಕಾರ್ಯಕರ್ತರು ತಿಳಿದುಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ, ಆದ್ದರಿಂದ ಸಂಘಟನೆಗಳ ಮೂಲ ಉದ್ದೇಶಗಳನ್ನು ಕಾಂಗ್ರೆಸ್ ಕಾರ್ಯಕರ್ತರು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಆರ್.ವಿ.ದೇವರಾಜು ಸುಪುತ್ರ ಯುವರಾಜ್ ಮಾತನಾಡಿ, ನಮ್ಮ ತಂದೆ ಕಾಂಗ್ರೆಸ್ ಕಟ್ಟಾಳು ರೀತಿ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು. ಅದನ್ನು ರಾಜ್ಯದಲ್ಲಿ ಉಳಿಸಿ, ಬೆಳೆಸಿಕೊಂಡು ಹೋಗಲು ಸರ್ವ ಪ್ರಯತ್ನ ಮಾಡುತ್ತೇವೆ. ಹುಟ್ಟು- ಸಾವು ನಡುವೆ ಮನುಷ್ಯ ಸಂಪಾದನೆ ಮಾಡುವುದು ಪ್ರೀತಿ, ವಿಶ್ವಾಸ ಮಾತ್ರ. ಮುಂದಿನ ದಿನಗಳಲ್ಲಿ ನನಗೆ ಅವಕಾಶ ಸಿಕ್ಕಾಗ ಮಂಡ್ಯದ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು

ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ಮಾತನಾಡಿ, ಆರ್.ವಿ.ದೇವರಾಜು ಅವರು ಮಂಡ್ಯಕ್ಕೋಸ್ಕರ ಅವರ ಕ್ಷೇತ್ರವನ್ನು ತ್ಯಾಗ ಮಾಡಿದ ಮಹಾನ್ ನಾಯಕ. ಅವರ ಸ್ಮರಣೆ ಮಾಡುವುದು ಮಂಡ್ಯದವರ ಕರ್ತವ್ಯ ಎಂದು ಹೇಳಿದರು.

ನುಡಿ ನಮನ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ, ಮನ್‌ಮುಲ್ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಅಧ್ಯಕ್ಷ ಹಾಲಹಳ್ಳಿ ರಾಮಲಿಂಗಯ್ಯ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಿದಂಬರ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಚ್.ಸಿ.ಶಿವಲಿಂಗೇಗೌಡ, ಮನ್‌ಮುಲ್ ಮಾಜಿ ಅಧ್ಯಕ್ಷ ಎಲ್.ಸಿ.ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.