ಬಂಟಕಲ್ಲು: ರೇಬೀಸ್ ಜಾಗೃತಿ, ಕರಪತ್ರ ಬಿಡುಗಡೆ, ಶ್ವಾನಗಳಿಗೆ ಲಸಿಕೆ

| Published : Sep 26 2024, 10:39 AM IST

ಬಂಟಕಲ್ಲು: ರೇಬೀಸ್ ಜಾಗೃತಿ, ಕರಪತ್ರ ಬಿಡುಗಡೆ, ಶ್ವಾನಗಳಿಗೆ ಲಸಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ರೇಬಿಸ್‌ ದಿನಾಚರಣೆ ಮತ್ತು ರೇಬಿಸ್‌ ಮಾಸಾಚರಣೆಯನ್ನು ನಡೆಸಲಾಯಿತು. ಶಿರ್ವ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪದ್ಮನಾಭ ನಾಯಕ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕಾಪು

ಉಡುಪಿ ಜಿ.ಪಂ., ಕಾಪು ತಾ.ಪಂ., ಶಿರ್ವ ಗ್ರಾ.ಪಂ. ಆಶ್ರಯದಲ್ಲಿ ಇಲ್ಲಿನ ಬಂಟಕಲ್ಲಿನ ನಾಗರಿಕ ಸಮಿತಿ ನೇತೃತ್ವದಲ್ಲಿ ವಿವಿಧ ಇಲಾಖೆ ಮತ್ತು ಸಂಸ್ಥೆಗಳ ಸಹಭಾಗಿತ್ವದಲ್ಲಿ ಬುಧವಾರ ಬಂಟಕಲ್ಲು ಅಂಗನವಾಡಿ ಕೇಂದ್ರದಲ್ಲಿ ‘ವಿಶ್ವ ರೇಬೀಸ್ ದಿನಾಚರಣೆ ಮತ್ತು ರೇಬೀಸ್ ಮಾಸಾಚರಣೆ’ಯನ್ನು ನಡೆಸಲಾಯಿತು.

ಈ ಪ್ರಯುಕ್ತ ‘ರೇಬೀಸ್ ಜಾಗೃತಿ- ಕರಪತ್ರ ಬಿಡುಗಡೆ ಹಾಗೂ ಶ್ವಾನಗಳಿಗೆ ಉಚಿತ ರೇಬೀಸ್ ಲಸಿಕಾ ಶಿಬಿರವನ್ನು ಆಯೋಜಿಸಲಾಗಿದ್ದು, ಶಿರ್ವ ಗ್ರಾಮ ಪಂ. ಅಭಿವೃದ್ಧಿ ಅಧಿಕಾರಿ ಪದ್ಮನಾಭ ನಾಯಕ್ ಉದ್ಘಾಟಿಸಿದರು. ನಂತರ ಅವರು ಬೀದಿನಾಯಿಗಳ ಕಾಟ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಸಾಕು ನಾಯಿಗಳೇ ಬೀದಿನಾಯಿಗಳಾಗಿ ರೇಬೀಸ್ ಹರಡುವಿಕೆಗೆ ಕಾರಣವಾಗುತ್ತವೆ ಎಂದರು.

ಶಿರ್ವ ಪಶುಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಅರುಣ್‌ಕುಮಾರ್ ಹೆಗ್ಡೆ ರೇಬೀಸ್ ಮಾಹಿತಿ ನೀಡಿ, ಈ ಗುಣಪಡಿಸಲಾಗದ ಈ ಕಾಯಿಲೆ ಬರದಂತೆ ಮುಂಜಾಗ್ರತೆ ವಹಿಸುವುದು ಅತೀ ಅಗತ್ಯವಾಗಿದ್ದು, ಸಮಯೋಚಿತ ಚಿಕಿತ್ಸೆಯಿಂದ ಮಾತ್ರ ಈ ಭಯಾನಕ ಕಾಯಿಲೆಯನ್ನು ತಡೆಗಟ್ಟಬಹುದು ಎಂದರು.

ಕಾಪು ಪಶುವೈದ್ಯಕೀಯ ಆಸ್ಪತ್ರೆಯ ಜಾನುವಾರು ಅಧಿಕಾರಿ ಗಿರೀಶ್, ಹಿರಿಯ ಪಶುವೈದ್ಯಕೀಯ ಪರಿವೀಕ್ಷಕರಾದ ಶಿವಪುತ್ರಯ್ಯ ಗುರುಸ್ವಾಮಿ, ವಸಂತ ಮಾದಾರ, ಪಶುವೈದ್ಯಕೀಯ ಪರಿವೀಕ್ಷಕ ಶರಣ ಪಾಟೀಲ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟಕಲ್ಲು ನಾಗರಿಕ ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿರ್ವ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ, ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಅಧ್ಯಕ್ಷೆ ಅನಿತಾ ಮೆಂಡೋನ್ಸಾ, ನಾಗರಿಕ ಸಮಿತಿ ವಿನ್ಸೆಂಟ್ ಕಸ್ತಲಿನೊ ಪಲ್ಕೆ, ವಾಲೆಟ್ ಕಸ್ತಲಿನೊ, ರೋಟರಿ ಸದಸ್ಯರಾದ ರಿಚ್ಚಾರ್ಡ್ ಪೌಲ್ ಫೆರಾವೊ, ಅಂಗನವಾಡಿ ಶಿಕ್ಷಕಿ ವಿನಯಾ ಕುಂದರ್, ಶ್ವಾನಗಳ ಪೋಷಕರು ಉಪಸ್ಥಿತರಿದ್ದರು.