ರೇಬಿಸ್ ರೋಗದಿಂದ ದೇಶದಲ್ಲಿ 30 ನಿಮಿಷಕ್ಕೆ ಒಂದು ಸಾವು: ಡಾ. ಸಿದ್ದಲಿಂಗಯ್ಯ

| Published : Sep 26 2024, 10:22 AM IST

ರೇಬಿಸ್ ರೋಗದಿಂದ ದೇಶದಲ್ಲಿ 30 ನಿಮಿಷಕ್ಕೆ ಒಂದು ಸಾವು: ಡಾ. ಸಿದ್ದಲಿಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಾಯಿ ಕಡಿತದಿಂದ ರೇಬಿಸ್ ರೋಗವು ಬರುತ್ತಿದ್ದು, ನಾಯಿ ಸಾಕುವವರು ಮುಂಜಾಗ್ರತೆಯಾಗಿ ಲಸಿಕೆ ಪಡೆದುಕೊಳ್ಳಬೇಕು.

ಪ್ರತಿಯೊಬ್ಬರು ಎಚ್ಚರ ವಹಿಸುವುದು ಅಗತ್ಯ । ಜಾಗೃತಿ ಕಾರ್ಯಕ್ರಮ, ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕೆ

ಕನ್ನಡಪ್ರಭ ವಾರ್ತೆ ಕುಷ್ಟಗಿ

ನಾಯಿ ಕಡಿತದಿಂದ ರೇಬಿಸ್ ರೋಗವು ಬರುತ್ತಿದ್ದು, ನಾಯಿ ಸಾಕುವವರು ಮುಂಜಾಗ್ರತೆಯಾಗಿ ಲಸಿಕೆ ಪಡೆದುಕೊಳ್ಳಬೇಕು ಎಂದು ಹಿರಿಯ ಪಶುವೈದ್ಯ ಡಾ. ಸಿದ್ದಲಿಂಗಯ್ಯ ಸಂಕಿನ್ ಹೇಳಿದರು.

ಪಟ್ಟಣದ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ರೇಬಿಸ್ ಜಾಗೃತಿ ಕಾರ್ಯಕ್ರಮ ಹಾಗೂ ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೇಬಿಸ್ ರೋಗಕ್ಕೆ ತುತ್ತಾಗುವವರ ಸಂಖ್ಯೆಯಲ್ಲಿ ಏಷ್ಯಾ ಖಂಡದಲ್ಲಿ ಭಾರತವು ಮೊದಲನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರವು 2030ರೊಳಗೆ ರೇಬಿಸ್ ಮುಕ್ತ ದೇಶವನ್ನಾಗಿ ಮಾಡಲು ಹಲವಾರು ಯೋಜನೆ ಹಮ್ಮಿಕೊಂಡಿದೆ ಎಂದರು.

ರೇಬಿಸ್ ರೋಗದಿಂದ ದೇಶದಲ್ಲಿ 30 ನಿಮಿಷಕ್ಕೆ ಒಂದು ಸಾವು ಸಂಭವಿಸುತ್ತಿದೆ. ಶೇ.90ರಷ್ಟು ನಾಯಿಗಳಿಂದಲೇ ರೇಬಿಸ್ ಕಾಯಿಲೆ ಬರುತ್ತಿದ್ದು, ಮಕ್ಕಳು ಅಧಿಕ ಸಂಖ್ಯೆಯಲ್ಲಿ ರೋಗಕ್ಕೆ ತುತ್ತಾಗುತ್ತಿದ್ದು, ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ಎಚ್ಚರ ವಹಿಸುವುದು ಅಗತ್ಯ ಎಂದರು.

ಪ್ರಾಣಿಗಳು, ಬೀದಿನಾಯಿ ಅಥವಾ ಬೇರಾವುದೇ ಪ್ರಾಣಿಗಳು ಕಚ್ಚಿದರೆ, ಪರಚಿದರೆ ಗಾಯವನ್ನು ಸ್ವಚ್ಛಗೊಳಿಸಿ 24 ಗಂಟೆಯೊಳಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಸುಣ್ಣ ಹಚ್ಚಿಕೊಳ್ಳುವುದು ಬಟ್ಟೆಯನ್ನು ಗಟ್ಟಿಯಾಗಿ ಕಟ್ಟಿಕೊಳ್ಳುವಂತಹ ಪದ್ಧತಿ ಬಿಡಬೇಕು. ಒಮ್ಮೆ ರೇಬಿಸ್ ಸೋಂಕು ತಗುಲಿದರೆ ಮರಣ ಖಚಿತವಾಗಿದ್ದು, ನಿರ್ಲಕ್ಷ್ಯ ತೋರದೇ ಜನರು 5 ಇಂಜೆಕ್ಷನ್ ಪಡೆದುಕೊಳ್ಳಬೇಕು ಎಂದರು.

ಈ ರೋಗಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆಯು ಉಚಿತವಾಗಿ ಲಭ್ಯವಿದೆ. ಕೆಲವರು ಒಂದೆರಡು ಡೋಸ್‌ಗಳನ್ನು ಮಾತ್ರ ಪಡೆಯುತ್ತಾರೆ. ಇದರಿಂದ ರೇಬಿಸ್ ಆತಂಕ ತಪ್ಪುವುದಿಲ್ಲ. ಆದ ಕಾರಣ ಪ್ರಾಣಿ ಸಾಕುವವರು, ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಸಾಕಿದ ಪ್ರಾಣಿಗಳಿಗೂ ಲಸಿಕೆ ಹಾಕಿಸಬೇಕು ಎಂದು ಹೇಳಿದರು.

ಈ ಸಂದರ್ಭ ತಾಲೂಕು ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಬಾಲಾಜಿ ಬಳಿಗಾರ, ಶ್ರೀನಿವಾಸ ನಾಯಕ, ಶಿವಪ್ಪ ವಾಗ್ಮೊರೆ, ಕಾಲೇಜು ಪ್ರಾಚಾರ್ಯ ಶ್ರೀಕಾಂತಗೌಡ ಪಾಟೀಲ, ಶಿಕ್ಷಕ ಉಮೇಶ ಸೇರಿದಂತೆ ವಿವಿಧ ಶಿಕ್ಷಕರು ಪಶುಪಾಲನಾ ಇಲಾಖೆಯ ಸಿಬ್ಬಂದಿ ಸಂಗಪ್ಪ, ಪ್ರವೀಣ, ಸಿದ್ದು, ಸೌಮ್ಯ, ವಿರೇಶ, ಕರಿಮಸಾಬ ಮತ್ತು ವಿದ್ಯಾರ್ಥಿಗಳು ಜಾಗೃತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.