ಸಾರಾಂಶ
ಭಟ್ಕಳ: ಕರ್ನಾಟಕ ಭೂಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ ಪಟ್ಟಣ ಪ್ರದೇಶದಲ್ಲಿನ ಸರ್ಕಾರಿ ಒಡೆತನದಲ್ಲಿರುವ ಪ್ರದೇಶ ಅತಿಕ್ರಮಿಸಿದ್ದಲ್ಲಿ ಭೂಗಳ್ಳರೆಂದು ಪರಿಗಣಿಸಿ ಭೂಕಬಳಿಕೆ ಮಾಡುವುದು ನಿಷೇಧ ಮತ್ತ ಕಾನೂನುಬಾಹಿರ ಎಂದು ಗುರುತಿಸಿ ಶಿಕ್ಷೆಗೆ ಗುರಿಪಡಿಸುವ ಸಂಭವವಿದ್ದು, ಈ ಹಿನ್ನೆಲೆ ಕಾಯ್ದೆ ಸಡಲೀಕರಣ ಮಾಡುವ ಅವಶ್ಯಕತೆ ಇದೆ ಎಂದು ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದರು.
ಮಂಗಳವಾರ ಪಟ್ಟಣದಲ್ಲಿ ಅರಣ್ಯವಾಸಿಗಳಿಗೆ ಗ್ರೀನ್ ಕಾರ್ಡ್ ವಿತರಣೆ ಮಾಡಿ ಅರಣ್ಯವಾಸಿಗಳನ್ನುದ್ದೇಶಿಸಿ ಮಾತನಾಡಿದರು.ಉದ್ದೇಶಿತ ಕಾನೂನಲ್ಲಿ ನಗರ ಪಾಲಿಕೆ ಪರಿಮಿತಿಯಿಂದ ೧೦ ಕಿಮೀ ಪರಿಮಿತಿಯೊಳಗಿನ ಭೂಮಿ, ನಗರಸಭೆಗಳ ಪರಿಮಿತಿಯಿಂದ ೫ ಕಿಮೀ ಒಳಗಿನ ಭೂಮಿ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಪರಿಮಿತಿಯಿಂದ ೩ ಕಿಮೀ ಒಳಗಿನ ಸ್ಥಳೀಯ ಪ್ರಾಧಿಕಾರಗಳ ಮತ್ತು ಸರ್ಕಾರದ ಒಡೆತನದ ನಿಯಂತ್ರಣ ಮತ್ತು ವ್ಯವಸ್ಥಾಪನೆಯಲ್ಲಿರುವ ಭೂಮಿ ಪ್ರದೇಶದಲ್ಲಿ ಮಂಜೂರು ಇಲ್ಲದೇ ಅತಿಕ್ರಮಿಸಿದ್ದಲ್ಲಿ ಸಾಗುವಳಿ ಮಾಡಿದ ಸಾಗುವಳಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ದಾಖಲಿಸಲ್ಪಡುವುದು ಎಂದು ಕಾನೂನಿನಲ್ಲಿ ಉಲ್ಲೇಖಿಸಲ್ಪಟ್ಟಿದೆ.
ಭೂಕಬಳಿಕೆ ನಿಷೇಧ ಕಾಯಿದೆ ಅಡಿ ದಾಖಲಿಸುವ ಕ್ರಿಮಿನಲ್ ಪ್ರಕರಣದಲ್ಲಿ ೩ ವರ್ಷದವರಿಗೂ ಜೈಲು ಹಾಗೂ ₹೨೫ ಸಾವಿರ ದಂಡ ವಿಧಿಸುವ ಶಿಕ್ಷೆಯ ಅಂಶ ಕಾನೂನಿನಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಪಾಂಡುರಂಗ ನಾಯ್ಕ ಬೆಳಕೆ, ಚಂದ್ರು ನಾಯ್ಕ ಬೆಳಕೆ, ಶಬ್ಬೀರ್ ಸಾಬ್, ಚಂದ್ರು ನಾಯ್ಕ ಗೊರಟೆ, ದಯಾನಂದ ಹಸರವಳ್ಳಿ, ನಾಗರಾಜ ಹಸರವಳ್ಳಿ, ಸಂತೋಷ ಗೊರಟೆ, ಖಯ್ಯೂಮ್ ಕೋಲಾ, ರತ್ನಾ ಬೆಳಕೆ, ಮಾದೇವಿ ಕರಿಕಲ್ ಮುಂತಾದವರಿದ್ದರು. ೨೧ರಂದು ವಿಶ್ವದರ್ಶನ ಸಂಭ್ರಮ ಕಾರ್ಯಕ್ರಮ
ಯಲ್ಲಾಪುರ: ಇಲ್ಲಿನ ವಿಶ್ವದರ್ಶನ ಶಿಕ್ಷಣ ಸಮೂಹದ ೨೦೨೪ನೇ ಸಾಲಿನ ವಿಶ್ವದರ್ಶನ ಸಂಭ್ರಮ ಡಿ. ೨೧ರಂದು ನಡೆಯಲಿದೆ. ಅಂದು ಬೆಳಗ್ಗೆ ೧೦ ಗಂಟೆಗೆ ವಿಶ್ವದರ್ಶನ ಸಂಭ್ರಮವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸುವರು. ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಕೈಬರಹ ಪತ್ರಿಕೆಯನ್ನು ಅನಾವರಣಗೊಳಿಸುವರು.ವಿದ್ಯಾರ್ಥಿಗಳಿಗೆ ಮಾಜಿ ಶಾಸಕ ವಿ.ಎಸ್. ಪಾಟೀಲ ಪ್ರತಿಭಾ ಪುರಸ್ಕಾರ ಪ್ರದಾನ ಮಾಡುವರು. ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಲ್.ಟಿ. ಪಾಟೀಲ, ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಅಧ್ಯಕ್ಷ ಡಿ. ಶಂಕರ ಭಟ್ಟ, ಎಲ್‌ಎಸ್ಎಂಪಿ ಅಧ್ಯಕ್ಷ ನಾಗರಾಜ ಕವಡೀಕೆರೆ, ವರ್ತಕ ನರಸಿಂಹಮೂರ್ತಿ ಕೋಣೆಮನೆ ಪಾಲ್ಗೊಳ್ಳುವರು.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಸಭಾಧ್ಯಕ್ಷತೆ ವಹಿಸುವರು. ಸಂಜೆ ೪ ಗಂಟೆಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಾಲೂಕು ದಂಡಾಧಿಕಾರಿ ಯಲ್ಲಪ್ಪ ಗೊನೆಣ್ಣನವರ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಚಾಲನೆ ನೀಡುವರು.ಸಂಜೆ ೬ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಸಹಕಾರರತ್ನ ಪ್ರಶಸ್ತಿ ಪುರಸ್ಕೃತ ಸಾಗರದ ಹರನಾಥ್‌ರಾವ್ ಮತ್ತಿಕೊಪ್ಪ ಅವರಿಗೆ ವಿಶ್ವದರ್ಶನ ಪುರಸ್ಕಾರ ನೀಡುವರು.ಹೈಕೋರ್ಟಿನ ಹಿರಿಯ ನ್ಯಾಯವಾದಿ ನಾರಾಯಣ ವಿ. ಯಾಜಿ ಆಶಯ ನುಡಿಗಳನ್ನಾಡುವರು. ಅತಿಥಿಗಳಾಗಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಇತರರು ಭಾಗವಹಿಸುವರು.