ಸಾರಾಂಶ
- ಕಡರನಾಯ್ಕನಹಳ್ಳಿಯಲ್ಲಿ ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸಿ ರೋಹಿತ್ ನಾಗ್ ಅಭಿಮತ
- - -ಕನ್ನಡಪ್ರಭ ವಾರ್ತೆ ಹರಿಹರ
ಕಾರ್ಗಿಲ್ ಯುದ್ಧದಲ್ಲಿ ತಮ್ಮ ಕೌಶಲ್ಯ ಹಾಗೂ ನೇತೃತ್ವಕ್ಕಾಗಿ ''''''''ವೀರಚಕ್ರ'''''''' ಗೌರವಕ್ಕೆ ಪಾತ್ರರಾಗಿ ಸನ್ಮಾನಿತರಾದವರು ಕರ್ನಲ್ ಎಂ.ಬಿ. ರವೀಂದ್ರನಾಥ್ ಎಂದು ಬೆಂಗಳೂರಿನ ಎಂಜಿನಿಯರ್ ರೋಹಿತ್ ನಾಗ್ ಹೇಳಿದರು.ತಾಲೂಕಿನ ಕಡರನಾಯ್ಕನಹಳ್ಳಿಯ ವೀರಚಕ್ರ ಸನ್ಮಾನಿತ ಕರ್ನಲ್ ಎಂ.ಬಿ. ರವೀಂದ್ರನಾಥ್ ಅವರ ಸಮಾಧಿಗೆ ಶನಿವಾರ ಸಂಜೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. 1999ರ ಕಾರ್ಗಿಲ್ ಯುದ್ಧದಲ್ಲಿ ಅಭಿಮನ್ಯು, ಭೀಮ, ಅರ್ಜುನರ ಹೆಸರಿನಲ್ಲಿ ತಂಡಗಳನ್ನು ರಚಿಸಿ, ಮಧ್ಯೆ ರಾತ್ರಿಯ ಕತ್ತಲಿನಲ್ಲಿ ಶಿಖರ ಏರುವ ಯೋಜನೆ ರೂಪಿಸಿ, 16000 ಅಡಿ ಎತ್ತರದಲ್ಲಿರುವ ಟೋಲೋಲಿಂಗ್‍ನ ದುರ್ಗಮ ಶಿಖರದ ಮೇಲೆ ಭಾರತದ ವಿಜಯ ಪತಾಕೆ ಹಾರಿಸಿದ್ದರು. ಅಂದು ಬೆಳಗ್ಗೆ 4.20ರ ಸುಮಾರಿಗೆ ತಮ್ಮ ಮೇಲಧಿಕಾರಿಗಳಿಗೆ ಭಾರತ ಸೈನ್ಯದ ವಿಜಯದ ಸಂದೇಶ ರವಾನಿಸಿದ್ದರು ಎಂದು ಸ್ಮರಿಸಿದರು.
ಇವರ ನೇತೃತ್ವದ ರಜಪೂತ್‌ನ ರೈಫಲ್ಸ್ 2ನೇ ಬೆಟಾಲಿಯನ್ ಟೊಲೋಲಿಂಕ್, ಟಾಪ್‍ಬ್ಲಾಕ್, ರಾಕ್‍ಗ್ರಾಸ್ ಸೆಕ್ಟರ್‌ಗಳಲ್ಲಿ ಅತ್ಯಂತ ಶೌರ್ಯದಿಂದ ಹೋರಾಡಿದರು. ಮೇಜರ್ ವಿವೇಕ್, ಮೇಜರ್ ಪದ್ಮಪಾಣಿ ಆಚಾರ್ಯ, ಕ್ಯಾಪ್ಟನ್ ಕೆಂಗುರುಸೆ, ಕ್ಯಾಪ್ಟನ್ ವಿಜಯಂತ್ ಥಾಪರ್, ಲಾನ್ಸ್ ನಾಯಕ್ ಬಚನ್ ಸಿಂಗ್, ಲಾನ್ಸ್ ನಾಯಕ್ ಭವರ್ ಲಾಲ್ ಅವರಂತಹ ಅನೇಕ ಸೇನಾನಿಗಳನ್ನು ಭಾರತ ಕಳೆದುಕೊಂಡರೂ, ಧೃತಿಗೆಡದೇ ಸೆಣಸಿ ಯುದ್ಧದಲ್ಲಿ ಗೆಲುವು ತಂದಿದ್ದರು ಎಂದು ವಿವರಿಸಿದರು.ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಭಾರತ ಸೈನ್ಯದ ಉಸಿರುಗಟ್ಟಿಸಿದ್ದ ಅಸಾಧ್ಯ ಯುದ್ಧವನ್ನು ಗೆಲ್ಲುವಲ್ಲಿ ರವೀಂದ್ರನಾಥ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ದೇಶದ ಹುತಾತ್ಮ ಯೋಧ ಸೈನಿಕರ ಮನೆ ಮನೆಗಳಿಗೆ ಭೇಟಿ ನೀಡಿ ಅವರ ಸಾಹಸ ಕಥೆಗಳನ್ನು ಅರಿತು, ವೀರಗಾಥೆ ಪುಸ್ತಕ ಬರೆದ ಸಿಂಧೂ ಪ್ರಶಾಂತ್ ಅವರ ಸಹೋದರ ಬೆಂಗಳೂರಿನ ಎಂಜಿನಿಯರ್ ರೋಹಿತ್ ನಾಗ್ ಅವರ ದೇಶಭಕ್ತಿ ಶ್ಲಾಘನೀಯ ಎಂದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ಲಿಂಗರಾಜ್, ತಾ.ಪಂ. ಮಾಜಿ ಅಧ್ಯಕ್ಷ ಅಣ್ಣೇಶ್, ಮಾಗೋಡು ಓಂಕಾರಪ್ಪ, ಗಣಪಾಸ್ ಇನ್ವೊವಿಟಿವ್ ಸಂಸ್ಥೆಯ ಅಧ್ಯಕ್ಷ ವಿನಾಯಕ, ಧರಣೇಂದ್ರ, ಸಾಕ್ಷಿ ಶಿಂದೆ, ಅಂಬುಜಾ, ಕುಂದೂರು ಮಂಜಪ್ಪ, ಹುಗ್ಗಿ ಮಾಂತೇಶ, ಎ.ರಮೇಶಪ್ಪ, ಗ್ರಾಮದ ಮುಖಂಡರು ಭಾಗವಹಿಸಿದ್ದರು.- - -
(ಕೋಟ್) ಸೇನಾ ನಿವೃತ್ತಿ ಹೊಂದಿ, ಬೆಂಗಳೂರಿನಲ್ಲಿ ವಿಶ್ರಾಮ ಜೀವನ ನಡೆಸುತ್ತಿದ್ದ ಕರ್ನಲ್ ರವೀಂದ್ರನಾಥ್ 2018, ಏ.8ರಂದು ನಮ್ಮನ್ನಗಲಿದರು. ಆದರೆ, ಇಂಥ ವೀರಚಕ್ರ ಸಮ್ಮಾನಿತ ಸೇನಾ ನಾಯಕ ಕರ್ನಲ್ ರವೀಂದ್ರನಾಥ್ ಅವರಿಗೆ ಕನಿಷ್ಠ ಸರ್ಕಾರಿ ಗೌರವವೂ ಸಲ್ಲಿಸಲಿಲ್ಲ. ಅವರ ಮನೆ ಎದುರು ಯಾವ ನಾಯಕರ ದಂಡೂ ಹೋಗಲಿಲ್ಲ.- ರೋಹಿತ್ ನಾಗ್, ಎಂಜಿನಿಯರ್
- - --27ಎಚ್‍ಆರ್‍ಆರ್01.ಜೆಪಿಜಿ:
ಹರಿಹರ ತಾಲೂಕಿನ ಕಡರನಾಯ್ಕನಹಳ್ಳಿಯ ವೀರಚಕ್ರ ಸನ್ಮಾನಿತ ಕರ್ನಲ್ ಎಂ.ಬಿ. ರವೀಂದ್ರನಾಥ್ ಅವರ ಸಮಾಧಿಗೆ ಬೆಂಗಳೂರಿನ ರೋಹಿತ್ ನಾಗ್, ಶಾಸಕ ಬಿ.ಪಿ. ಹರೀಶ್ ಅವರೊಂದಿಗೆ ಪುಷ್ಪಾರ್ಚನೆ ಸಲ್ಲಿಸಿ, ವಂದಿಸಿದರು.