ಜನಾಂಗೀಯ ತಾರತಮ್ಯ ದಿನ: ದೇವಟ್ ಪರಂಬುವಿನಲ್ಲಿ ಹಿರಿಯರ ಸ್ಮರಣೆ

| Published : Mar 25 2024, 12:47 AM IST

ಜನಾಂಗೀಯ ತಾರತಮ್ಯ ದಿನ: ದೇವಟ್ ಪರಂಬುವಿನಲ್ಲಿ ಹಿರಿಯರ ಸ್ಮರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಜನಾಂಗೀಯ ತಾರತಮ್ಯ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬುವಿನ ಕೊಡವ ನರಮೇಧದ ಸ್ಮಾರಕ ಸ್ಥಳದಲ್ಲಿ ಪುಷ್ಪ ನಮನ ಸಲ್ಲಿಸಿ ಹಿರಿಯರನ್ನು ಸ್ಮರಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿಅಂತಾರಾಷ್ಟ್ರೀಯ ಜನಾಂಗೀಯ ತಾರತಮ್ಯ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬುವಿನ ಕೊಡವ ನರಮೇಧದ ಸ್ಮಾರಕ ಸ್ಥಳದಲ್ಲಿ ಪುಷ್ಪ ನಮನ ಸಲ್ಲಿಸಿ ಹಿರಿಯರನ್ನು ಸ್ಮರಿಸಿತು.ಹಿರಿಯರಿಗಾಗಿ ಶ್ರದ್ಧಾಂಜಲಿ ಅರ್ಪಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಪ್ರಮುಖರು ಆಡಳಿತ ನಡೆಸುತ್ತಿರುವ ಬಹುಸಂಖ್ಯಾತರು ಅಲ್ಪಸಂಖ್ಯಾತ, ಅತ್ಯಂತ ಸೂಕ್ಷ್ಮ, ಆದಿಮ ಸಂಜಾತ ಕೊಡವ ಬುಡಕಟ್ಟು ಜನರನ್ನು ತಾರತಮ್ಯ ಮನೋಭಾವದಿಂದ ನೋಡುತ್ತಿರುವುದು ವಿಷಾದನೀಯವೆಂದು ಬೇಸರ ವ್ಯಕ್ತಪಡಿಸಿದರು.

ನಾಚಪ್ಪ ಮಾತನಾಡಿ, ದೇವಟ್ ಪರಂಬುವಿನಲ್ಲಿ ಷಡ್ಯಂತ್ರಕ್ಕೆ ಸಿಲುಕಿ ಕೊಡವ ಜನಾಂಗದ ಹಿರಿಯ ತಲೆಮಾರು ಬಲಿಯಾಯಿತು. ಈ ನೋವು ಅಚಲವಾಗಿ ಉಳಿದಿರುವಾಗಲೇ ಪ್ರಸ್ತುತ ಕೊಡವರ ಮೇಲಿನ ತಾರತಮ್ಯ ನೀತಿ ಮತ್ತಷ್ಟು ನೋವನ್ನುಂಟು ಮಾಡಿದೆ ಎಂದರು.

ಕೊಡವ ಬುಡಕಟ್ಟು ಜನಾಂಗದ ಸಮಗ್ರ ಸಬಲೀಕರಣದ ಗುರಿ ಸಾಧನೆಗಾಗಿ ಹಿರಿಯರ ಆಶೀರ್ವಾದವನ್ನು ಪಡೆಯಲು ದೇವಟ್ ಪರಂಬುವಿನಲ್ಲಿ ಪುಷ್ಪ ನಮನ ಸಲ್ಲಿಸಿ ಸ್ಮರಣೆಯನ್ನು ಮಾಡಲಾಗಿದೆ.

ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಮತ್ತು ಕೊಡವರ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳನ್ನು ಅನುಷ್ಠಾನಗೊಳಿಸಬೇಕು. ಸಂವಿಧಾನದ 25 ಮತ್ತು 26ನೇ ವಿಧಿಗಳಡಿಯಲ್ಲಿ ಕೊಡವ ಸಂಸ್ಕಾರ ಗನ್ ಅನ್ನು ಸಿಖ್ಖರ ‘ಕಿರ್ಪಾನ್’ಗೆ ಸಮಾನವಾಗಿ ಸೇರಿಸಬೇಕು. ಮಿನುಕ್ಯುಲ್ ಮೈಕ್ರೋ ಕೊಡವ ಬುಡಕಟ್ಟು ಜನಾಂಗಕ್ಕೆ ಎಸ್‌ಟಿ ಟ್ಯಾಗ್ ನೀಡಬೇಕು. ದೇವಟ್ ಪರಂಬು ದುರಂತ ಹತ್ಯಾಕಾಂಡದ ಸ್ಥಳ, ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಅಂತಾರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕವನ್ನು ಸ್ಥಾಪಿಸಬೇಕು. ಇದಕ್ಕಾಗಿ ಜಿಒಐ, ಯುಎನ್‌ಒ ಮತ್ತು ಫ್ರೆಂಚ್ ಸರ್ಕಾರ ಜಂಟಿಯಾಗಿ ಹಣವನ್ನು ನೀಡಬೇಕು.

ಯುಎನ್‌ಒ ಮತ್ತು ಭಾರತೀಯ ಸಂಸತ್ತು ಕೊಡವ ನರಮೇಧವನ್ನು ಖಂಡಿಸಬೇಕು ಮತ್ತು ಫ್ರೆಂಚ್ ಸರ್ಕಾರ ಘೋರ ಅಪರಾಧಕ್ಕಾಗಿ ಕ್ಷಮೆಯಾಚಿಸಬೇಕು. ದೇವಟ್ ಪರಂಬು ದುರಂತ ಮತ್ತು ಅರಮನೆಯ ಪಿತೂರಿಯಲ್ಲಿನ ರಾಜಕೀಯ ಹತ್ಯೆಗಳನ್ನು ಯುಎನ್‌ಒ ಅಂತಾರಾಷ್ಟ್ರೀಯ ಕಾಂಡದ ನೆನಪಿನ ಪಟ್ಟಿಯಲ್ಲಿ ಸೇರಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.

ಅರೆಯಡ ಗಿರೀಶ್, ಮಂದಪಂಡ ಮನೋಜ್, ಅರೆಯಡ ಸವಿತಾ, ಚೋಳಪಂಡ ಜ್ಯೋತಿ ನಾಣಯ್ಯ, ಅಲ್ಮಂಡ ಜೈ, ಕಾಂಡೇರ ಸುರೇಶ್, ಚಂಬಂಡ ಜನತ್, ಬೇಪಡಿಯಂಡ ಬಿದ್ದಪ್ಪ, ಪುಟ್ಟಿಚಂಡ ದೇವಯ್ಯ, ಚೋಳಪಂಡ ನಾಣಯ್ಯ, ಪರ್ವಂಗಡ ನವೀನ್ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.