ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಧಿಕಾರಾವಧಿಯಲ್ಲಿ, ರಷ್ಯಾ-ಉಕ್ರೇನ್ ಮತ್ತು ಅಮೆರಿಕ- ಇರಾನ್ ಸಂಘರ್ಷಗಳಿಂದ ಉಂಟಾದ ಇಂಧನ ಬಿಕ್ಕಟ್ಟು ಮತ್ತು ವಿಶ್ವ ಆರ್ಥಿಕ ಹಿಂಜರಿತ ಸೇರಿದಂತೆ ಜಾಗತಿಕ ಸವಾಲುಗಳ ನಡುವೆಯೂ, ಭಾರತ ವಿಶ್ವದ ಅತ್ಯುನ್ನತ ಆರ್ಥಿಕ ಬೆಳವಣಿಗೆಯ ದರವನ್ನು ಶೇ.೭.೭ ಸಾಧಿಸಿದೆ. ಈ ಬೆಳವಣಿಗೆ ಮುಂದುವರಿಯುವ ನಿರೀಕ್ಷೆಯಿದೆ. ಈ ಹೆಚ್ಚಿನ ಬೆಳವಣಿಗೆಯ ದರ ೨೦೩೧ರ ವೇಳೆಗೆ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಮತ್ತು ಗೃಹ ಸಚಿವಾಲಯದ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ರಾಧಾಮೋಹನ್ ದಾಸ್ ಅಗರ್ವಾಲ್ ತಿಳಿಸಿದರು.
ಅವರು ಶನಿವಾರ ಮಂಗಳೂರಿನ ಮೋರ್ಗನ್ಸ್‌ಗೇಟ್ ಪಾಲೇಮಾರ್ ಗಾರ್ಡನ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ೨೦೧೩-೧೪ರಲ್ಲಿ ಭಾರತ ಕೇವಲ ೧.೯ ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿದ್ದು, ಅದು ಈಗ ೪.೧ ಟ್ರಿಲಿಯನ್ ಡಾಲರ್‌ಗೆ ಬೆಳೆದಿದೆ. ಭಾರತದ ಶೇ.೭.೭ ಬೆಳವಣಿಗೆ ದರಕ್ಕೆ ಹೋಲಿಸಿದರೆ, ಅಮೆರಿಕ ಶೇ.೨.೬, ಚೀನಾ ಶೇ.೪.೪, ಜಪಾನ್ ಶೇ.೦.೭, ಜರ್ಮನಿ ಶೇ.೦.೭೯ ಬೆಳವಣಿಗೆ ಕಾಣುತ್ತಿವೆ ಎಂದರು.ಭಾರತದಲ್ಲಿ ಕಳೆದ ೧೨ ವರ್ಷಗಳಲ್ಲಿ ೨೫ ಕೋಟಿ ಜನ ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ದೇಶದಲ್ಲಿ ಬಡವರಿಗೆ ೪ ಕೋಟಿ ಮನೆಗಳು, ೧೨ ಕೋಟಿ ಶೌಚಾಲಯ, ೮೦ ಕೋಟಿ ಜನರಿಗೆ ರೇಷನ್, ಎಲ್ಲ ಹಳ್ಳಿಗಳು ಮತ್ತು ಮನೆಗಳಿಗೆ ವಿದ್ಯುತ್ ಸಂಪರ್ಕ, ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಆಯುಷ್ಮಾನ್ ಭಾರತ್ ಅಡಿಯಲ್ಲಿ ೫೦ ಕೋಟಿ ಜನರು ೫ ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ೧೦.೫೦ ಕೋಟಿ ಜನರು ಉಚಿತ ಅನಿಲ ಸಂಪರ್ಕ ಮತ್ತು ಸಿಲಿಂಡರ್‌ಗೆ ೩೦೨ ರು. ಸಬ್ಸಿಡಿ ಪಡೆಯುತ್ತಿದ್ದಾರೆ ಎಂದರು.
ರಾಜ್ಯಕ್ಕೆ ಮೋದಿ ಕೊಡುಗೆ:೨೦೧೪ರಿಂದ ಕರ್ನಾಟಕದ ಅಭಿವೃದ್ಧಿಗಾಗಿ ಮೋದಿ ಸರ್ಕಾರ ರಾಜ್ಯ ಸರ್ಕಾರಕ್ಕೆ ೪,೦೧,೭೧೭ ಕೋಟಿ ರು. ಹಂಚಿಕೆ ಮಾಡಿದೆ ಹಾಗೂ ರಸ್ತೆ ಅಭಿವೃದ್ಧಿಗೆ ೨,೭೧,೯೧೩ ಕೋಟಿ ರು., ಹಾಗೂ ೧,೮೦,೭೨೮ ಕೋಟಿ ರು. ವಿಶೇಷವಾಗಿ ನೀಡಲಾಗಿದೆ. ಈ ಯೋಜನೆಗಳಿಗೆ ಬಂಡವಾಳ ಹೂಡಿಕೆಯನ್ನು ಮಾಡಲಾಗಿದೆ. ವಿವಿಧ ಹೆದ್ದಾರಿಗಳ ಅಭಿವೃದ್ಧಿ ಮಾಡಲಾಗುತ್ತಿದೆ. ದಕ್ಷಿಣ ಭಾರತದ ಮೊದಲ ಕೈಗಾರಿಕಾ ಕಾರಿಡಾರ್‌ಗೆ ತುಮಕೂರಿನಲ್ಲಿ ಅಡಿಪಾಯ ಹಾಕಲಾಯಿತು. ೭ ಹೊಸ ಬಂದರುಗಳು ಕಾರ್ಯಾರಂಭ ಮಾಡಿದೆ. ಕಲಬುರಗಿಯಲ್ಲಿ ಹೊಸ ರಾಷ್ಟ್ರೀಯ ಮೆಗಾ ಟೆಕ್ ಪಾರ್ಕ್ ಸ್ಥಾಪಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ:ಕರ್ನಾಟಕದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ, ಅಧಿಕಾರಕ್ಕಾಗಿ ಒಳಜಗಳ ನಡೆಯುತ್ತಿದೆ ಎಂದು ಆರೋಪಿಸಿದರು. ಐದು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಪ್ರತಿವರ್ಷ ಸಾವಿರಾರು ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಆದರೆ ಅದರ ಪೂರ್ಣ ಪ್ರಯೋಜನ ಜನರಿಗೆ ತಲುಪುತ್ತಿಲ್ಲ. ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದುರ್ಬಲಗೊಳಿಸಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಬಿಜೆಪಿ ಜನರ ಮುಂದಿಡುತ್ತಿದೆ. ಜನರಿಗೂ ಸರ್ಕಾರದ ವಿರುದ್ಧ ಅಸಮಾಧಾನವಿದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಈ ಜನಾಕ್ರೋಶ ವ್ಯಕ್ತವಾಗಲಿದೆ ಎಂದರು.
ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನ:
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಅಂತಿಮ ತೀರ್ಮಾನವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕೈಗೊಳ್ಳಲಿದ್ದಾರೆ. ಹಾಲಿ ಅಧ್ಯಕ್ಷರ ಕಾರ್ಯಚಟುವಟಿಕೆ, ವಿವಿಧ ಅಂಶಗಳನ್ನು ರಾಷ್ಟ್ರೀಯ ನಾಯಕತ್ವ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಪಕ್ಷದಿಂದ ಯಾರನ್ನೂ ಹೊರಹಾಕುವುದು ಬಿಜೆಪಿಗೆ ಸಂತೋಷದ ವಿಷಯವಲ್ಲ. ಸಾಮಾನ್ಯವಾಗಿ ಆರು ವರ್ಷದ ಅವಧಿಗೆ ಉಚ್ಚಾಟನೆ ಮಾಡಲಾಗುತ್ತದೆ. ಬಳಿಕ ಅವರ ನಡವಳಿಕೆ, ಪರಿಸ್ಥಿತಿ, ಪಕ್ಷದ ನಿರ್ಧಾರಗಳ ಆಧಾರದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಯತ್ನಾಳ್, ಈಶ್ವರಪ್ಪ ಮರುಸೇರ್ಪಡೆ ಕುರಿತ ಪ್ರಶ್ನೆಗೆ ಉತ್ತರಿಸಿದರು.ರಾಜ್ಯದಲ್ಲಿ ಮರಳಿ ಬಿಜೆಪಿ ಅಧಿಕಾರಕ್ಕೆ: ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡಿರುವ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ದಕ್ಷಿಣ ಭಾರತ ವ್ಯಾಪ್ತಿಯ ಕೇರಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಪಕ್ಷದ ನೆಲೆ ಬಲಗೊಂಡಿದೆ. ಈ ಹಿಂದೆ ಅಸ್ತಿತ್ವ ಇಲ್ಲದ ಪ್ರದೇಶಗಳಲ್ಲೂ ಬಿಜೆಪಿ ಪ್ರಭಾವ ವಿಸ್ತರಿಸಿದೆ. ಕರ್ನಾಟಕದಲ್ಲಿಯೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ಹರೀಶ್ ಪೂಂಜಾ, ರಾಜೇಶ್ ನಾಯಕ್, ಉಮಾನಾಥ್ ಕೋಟ್ಯಾನ್, ವಿಧಾನಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಕಿಶೋರ್ ಕುಮಾರ್, ಪ್ರಮುಖರಾದ ಕರುಣಾಕರ ಖಾಸಲೆ, ಮೋನಪ್ಪ ಭಂಡಾರಿ ಮತ್ತಿತರರು ಇದ್ದರು.