ಸಾರಾಂಶ
ಹೊನ್ನಾವರ: ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಥೆಯ ರಾಷ್ಟ್ರೀಯ ಸಂಗೀತೋತ್ಸವ ಮಾ.2ರಂದು ಹಡಿನಬಾಳದ ವಿಷ್ಣುಮೂರ್ತಿ ದೇವಾಲಯದ ಆವಾರದಲ್ಲಿ ನಡೆಯಲಿದೆ.
23ನೇ ವಾರ್ಷಿಕೋತ್ಸವ ಸನ್ಮಾನ, ಸಂಗೀತ, ಸಂಸ್ಮರಣೆ, ಭರತನಾಟ್ಯ, ಯಕ್ಷಗಾನ ಕಾರ್ಯಕ್ರಮಗಳು ನಡೆಯಲಿವೆ. ಈ ಎಲ್ಲ ಕಾರ್ಯಕ್ರಮಗಳನ್ನು ಸಿದ್ಧಾಪುರ ನೆಲೆಮಾವು ಮಠದ ಮಾಧವಾನಂದ ಭಾರತೀ ಶ್ರೀ ಸಾನ್ನಿಧ್ಯ ವಹಿಸಿ ಉದ್ಘಾಟಿಸಲಿದ್ದಾರೆ. ಡಾ. ಜಿ.ಎಲ್. ಹೆಗಡೆ ಕುಮಟಾ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕಿ ಮಂಗಲಾ ನಾಯಕ, ಪಂ.ಅಶೋಕ ಹುಗ್ಗಣ್ಣವರ, ಸೀತಾರಾಮ ಎನ್. ಹೆಗಡೆ ಹಡಿನಬಾಳ ಗೌರವ ಉಪಸ್ಥಿತರಿರುತ್ತಾರೆ.ಪಂ. ಜಿ.ಆರ್.ಭಟ್ಟ ಬಾಳೆಗದ್ದೆ, ಪಂ.ಎನ್.ಎಸ್.ಹೆಗಡೆ ಹಿರೇಮಕ್ಕಿ ಸಂಸ್ಮರಣೆ ನಡೆಯಲಿದೆ. ಅವರ ಹೆಸರಿನಲ್ಲಿ ನೀಡುವ ರಾಗಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಮಹಾ ಸಂಘಟಕರಾದ ಜಿ.ಎಸ್. ಹೆಗಡೆ ಸಪ್ತಕ ಬೆಂಗಳೂರು ಹಾಗೂ ಪ್ರಖ್ಯಾತ ತಬಲಾ ವಾದಕರಾದ ಪಂ. ಗೋಪಾಲಕೃಷ್ಣ ಹೆಗಡೆ ಕಲ್ಬಾಗ ಅವರಿಗೆ ಪ್ರದಾನ ಮಾಡಲಾಗುವುದು.
ವಿಶ್ವಮಾನ್ಯ ಹಾರ್ಮೋಣನಿಯಂ ವಾದಕ ತನ್ಮಯ ದೇವಚಕೆ ಪುಣಾ ಇವರನ್ನು ಸನ್ಮಾನಿಸಲಾಗುವುದು. ಪ್ರೊ. ನಾಗರಾಜ ಹೆಗಡೆ ಅಪಗಾಲ ಅಭಿನಂದನಾ ನುಡಿಗಳನ್ನು ನುಡಿಯಲಿದ್ದಾರೆ. ರಾಜ್ಯ ಮಟ್ಟದ ಕಲಾಶ್ರೀ ಪುರಸ್ಕೃತ ರಾಗಶ್ರೀ ತಬಲಾ ವಿದ್ಯಾರ್ಥಿ ಸಮರ್ಥ ಎನ್. ಹೆಗಡೆ ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ವಿದ್ಯಾರ್ಥಿಗಳಿಂದ ಬೆಳಿಗ್ಗೆ ೯.೩೦ರಿಂದ ಗಾಯನ ನಡೆಯಲಿದ್ದು, ಸಂಜೆ ೫ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ನಂತರ ವಿಶ್ವಮಾನ್ಯ ಕಲಾವಿದ ತನ್ಮಯ ದೇವಚಕೆ ಪುಣಾ ಇವರಿಂದ ಹಾರ್ಮೋಯನಿಯಂ ಸೋಲೋ ಅವರಿಗೆ ಖ್ಯಾತ ತಬಲಾ ವಾದಕ ಸ್ವಪ್ನಿಲ್ ಬಿಸೆ ಮುಂಬೈ ತಬಲಾ ಸಾಥ್ ನೀಡುವರು.ಸಪ್ತಕ ಸಹಕಾರದೊಂದಿಗೆ ಸೌರಭ ಕಡ್ಗಾಂವಕರ ಪುಣೆ ಅವರ ಗಾಯನ ನಡೆಯಲಿದೆ. ಇವರಿಗೆ ಕಾರ್ತಿಕ ಸ್ವಾಮಿ ಮಹಾರಾಷ್ಟ್ರ ತಬಲಾದಲ್ಲಿ ಹಾಗೂ ಪ್ರಸಾದ್ ಕಾಮತ್ ಉಡುಪಿ ಸಂವಾದಿನಿ ಸಾಥ್ ನೀಡಲಿದ್ದಾರೆ. ನಂತರ ನಾದಶ್ರೀ ಕಲಾಕೇಂದ್ರ ಕುಮಟಾದ ವಿದುಷಿ ನಯನಾ ಪ್ರಸನ್ನ ಅವರ ಶಿಷ್ಯರಿಂದ ಭರತನಾಟ್ಯ ನಡೆಯಲಿದೆ. ದಿ. ಮಹಾದೇವ ಹೆಗಡೆ ಕಪ್ಪೆಕೇರಿ ಸ್ಮರಣಾರ್ಥ ’ಚಂದ್ರಹಾಸ ಚರಿತ್ರೆ’ ಯಕ್ಷಗಾನ ನಡೆಯಲಿದ್ದು ರಾಮಕೃಷ್ಣ ಹಿಲ್ಲೂರು, ತೋಟಿ, ಚಿಟ್ಟಾಣಿ, ಕಾಸರಕೋಡು, ಚಂದ್ರಹಾಸ ಹೊಸಪಟ್ಟಣ, ಮಾರುತಿ ಬೈಲಗದ್ದೆ ಮುಂತಾದವರು ಭಾಗವಹಿಸಲಿದ್ದಾರೆ.
ಹೆಚ್ಚಿನ ಶೋತ್ರಗಳು, ಕಲಾಪೋಷಕರು, ಕಲಾಚಿಂತಕರು ಆಗಮಿಸಬೇಕಾಗಿ ರಾಗಶ್ರೀಯ ಕಾರ್ಯದರ್ಶಿ ವಿದ್ವಾನ್ ಎನ್.ಜಿ.ಹೆಗಡೆ ಹಾಗೂ ಅಧ್ಯಕ್ಷರಾದ ವಿದ್ವಾನ್ ಶಿವಾನಂದ ಭಟ್ಟ ಹಡಿನಬಾಳ ಹಾಗೂ ರಾಗಶ್ರೀ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.