ಸಾರಾಂಶ
ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮತ್ತು ಲೈಂಗಿಕ ಹಿಂಸೆ ಯಾವ ರೀತಿ ಸಾಮಾಜಿಕ ಹಾಗೂ ಕಾನೂನುಗಳ ಚೌಕಟ್ಟಿನಲ್ಲಿ ಬರುತ್ತದೆ ಮತ್ತು ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕಾಗಿದೆ.
ಕೊಪ್ಪಳ:
ರ್‍ಯಾಗಿಂಗ್ ಮತ್ತು ಲೈಂಗಿಕ ಹಿಂಸೆ ತಡೆಗೆ ಜಾಗೃತಿ ಅಗತ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ ಹೇಳಿದರು.ನಗರದ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಜಿಲ್ಲಾ ಕಾನೂನು ಸೇವಾ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ರ‍್ಯಾಗಿಂಗ್ ನಿಷೇಧ ಹಾಗೂ ಲೈಂಗಿಕ ಹಿಂಸೆ ತಡೆಗೆ ಜಾಗೃತಿ ಮತ್ತು ಸಂವೇದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮತ್ತು ಲೈಂಗಿಕ ಹಿಂಸೆ ಯಾವ ರೀತಿ ಸಾಮಾಜಿಕ ಹಾಗೂ ಕಾನೂನುಗಳ ಚೌಕಟ್ಟಿನಲ್ಲಿ ಬರುತ್ತದೆ ಮತ್ತು ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.ಡಿವೈಎಸ್ಪಿ ಮುತ್ತಣ್ಣ ಸರವಗೋಳ ಮಾತನಾಡಿ, ವಿದ್ಯಾರ್ಥಿಗಳ ರಕ್ಷಣೆ ಮತ್ತು ಮಹಿಳಾ ಗೌರವ ರಕ್ಷಣೆ ದೃಷ್ಟಿಯಿಂದ ಇಂತಹ ಸಕಾರಾತ್ಮಕ ಶಿಕ್ಷಣ ಪರಿಸರ ನಿರ್ಮಿಸುವುದು ಮಹಾವಿದ್ಯಾಲಯದ ಆದ್ಯ ಕರ್ತವ್ಯವಾಗಿದೆ ಎಂದರು.
ಉಪಪೋಲೀಸ್ ವರಿಷ್ಠಾಧಿಕಾರಿ ಯಶವಂತಕುಮಾರ ಮಾತನಾಡಿ, ರ‍್ಯಾಗಿಂಗ್ ಮತ್ತು ಲೈಂಗಿಕ ಹಿಂಸೆಯಿಂದ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಕುಗ್ಗುತ್ತದೆ. ಇದರ ಕಾನೂನು ಅರಿವು ತುಂಬಾ ಅವಶ್ಯಕ ಹಾಗೂ ಇದರ ಜ್ಞಾನದಿಂದ ಸುರಕ್ಷಿತ ವಾತಾವರಣ ನಿರ್ಮಿಸಲು ಸಹಾಯವಾಗುತ್ತದೆ ಎಂದು ಹೇಳಿದರು.ಪ್ರಾಂಶುಪಾಲ ಡಾ. ಮಹಾಂತೇಶ ಸಾಲಿಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಸೂರ್ಯನಾರಾಯಣ, ಡಾ. ಬಸವಂತರಾವ್ ಪೊಲೀಸ್‌ಪಾಟೀಲ್, ಡಾ. ಶಶಿಕಲಾ ಕಡಬಡಿ, ಉಪಪ್ರಾಂಶುಪಾಲ ಡಾ. ಸುರೇಶ ಹಕ್ಕಂಡಿ, ಸಿಬ್ಬಂದಿ ಉಪಸ್ಥಿತರಿದ್ದರು.