ಪಟ್ಟಣದ ಶ್ರೀಮಠದಲ್ಲಿ ವಿಶ್ವಗುರು ಬಸವಣ್ಣ ಮತ್ತು ರೇಣುಕಾಚಾರ್ಯರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಗುರು-ವಿರಕ್ತರನ್ನು ಒಂದೇ ದೃಷ್ಟಿಕೋನದಲ್ಲಿ ನೋಡಿದ ಧೀಮಂತ ಮಠಾಧೀಶರಲ್ಲಿ ರಾಘವಾಂಕ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಒಬ್ಬರು ಎಂದು ಕಲ್ಯಾಣ ಮಹಾಸ್ವಾಮಿಗಳು ಬಣ್ಣಿಸಿದರು.
ಕುರುಗೋಡು: ಪಟ್ಟಣದ ಶ್ರೀಮಠದಲ್ಲಿ ವಿಶ್ವಗುರು ಬಸವಣ್ಣ ಮತ್ತು ರೇಣುಕಾಚಾರ್ಯರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಗುರು-ವಿರಕ್ತರನ್ನು ಒಂದೇ ದೃಷ್ಟಿಕೋನದಲ್ಲಿ ನೋಡಿದ ಧೀಮಂತ ಮಠಾಧೀಶರಲ್ಲಿ ರಾಘವಾಂಕ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಒಬ್ಬರು ಎಂದು ಕಲ್ಯಾಣ ಮಹಾಸ್ವಾಮಿಗಳು ಬಣ್ಣಿಸಿದರು.
ಇಲ್ಲಿನ ರಾಘವಾಂಕ ಸ್ವಾಮಿಗಳ ಹಾವಿಗೆ ಮಠದಲ್ಲಿ ಅಮೃತ ಶಿಲಾಮೂರ್ತಿ ಪ್ರತಿಷ್ಠಾಪನೆ ಮತ್ತು ಪುರಾಣ ಮುಕ್ತಾಯದಲ್ಲಿ ಆಶೀರ್ವಚನ ನೀಡಿದರು.ರಾಘವಾಂಕ ಪಂಡಿತಾರಾಧ್ಯ ಶ್ರೀಗಳ ಪರಿಶ್ರಮದ ಫಲವಾಗಿ ಶ್ರೀಮಠ ಸರ್ವತೋಮುಖ ಅಭಿವೃದ್ಧಿಯಾಗಿದೆ. ಭಕ್ತರೂ ಅವರ ಅಭಿವೃದ್ಧಿಗೆ ಕಾರ್ಯಗಳಿಗೆ ಕೈಜೋಡಿಸಿದ್ದಾರೆ. ಅವರ ಆಶಯದಂತೆ ಶ್ರೀಮಠದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗಲಿ ಎಂದು ಆಶಿಸಿದರು.
ಸಾನ್ನಿಧ್ಯ ವಹಿಸಿದ್ದ ಸೂಗೂರೇಶ್ವರ ಶ್ರೀಗಳು ಮಾತನಾಡಿ, ಗುರುವಿನ ಕರ್ತೃ ಗದ್ದುಗೆಯ ಮೇಲೆ ಶಿಲಾಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿರುವ ಶಿಷ್ಯಬಗಕ್ಕೆ ಗುರುವಿನ ಪ್ರೇರಣೆಯಾಗಿದೆ ಎಂದರು.ಆಧ್ಯಾತ್ಮಿಕ ಸಾಧನೆ ಮಾಡಿದ ಗುರುಗಳ ಶಿಲಾಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ಕೆಲಸವನ್ನು ಸೇವಾ ಸಮಿತಿ ಸದಸ್ಯರು ಮಾಡಿರುವುದು ಶ್ಲಾಘನಾರ್ಹ ಎಂದರು.
ಮಠದ ಬೆಲೆಬಾಳುವ ಸ್ಥಳವನ್ನು ಶಿಕ್ಷಣ ಇಲಾಖೆಗೆ ದಾನ ಮಾಡಿದ್ದಾರೆ. ಲಿಂಗೈಕ್ಯ ಶ್ರೀಗಳ ದಾನಗುಣ ಆದರ್ಶಮಯವಾದುದು ಎಂದರು. ಶಿಲಾಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ 11 ದಿನಗಳ ಕಾಲ ಜರುಗಿದ ಹೇಮರೆಡ್ಡಿ ಮಲ್ಲಮ್ಮ ಪುರಾಣ ಸಂಪನ್ನಗೊಂಡಿತು.ವಿಶ್ವನಾಥ ಶಾಸ್ತ್ರಿ ಪುರಾಣ ಪ್ರವಚನ ನೀಡಿದರು. ರೇಣುಕಾರಾಜ ಗವಾಯಿ ಪುರಾಣ ಪಠಣ ಮತ್ತು ಸಂಗೀತ ಸೇವೆ ಸಲ್ಲಿಸಿದರು. ಜಿ. ಸುಧಾಕರ್ ತಬಲಾ ಸಾಥ್ ನೀಡಿದರು.
ರಾಘವಾಂಕ ಪಂಡಿತಾರಾಧ್ಯ ಸೇವಾ ಸಮಿತಿಯ ಕಾರ್ಯದರ್ಶಿ ಎಸ್.ಎಂ. ಶಿವರುದ್ರಯ್ಯ ಸ್ವಾಮಿ, ಕೆ.ಎಂ. ಪಂಚಾಕ್ಷರಿಸ್ವಾಮಿ, ಪಾಲಾಕ್ಷಿ ಗೌಡ, ಸದಾಶಿವ ಸ್ವಾಮಿ, ಚಂದ್ರಶೇಖರ, ಎಸ್. ಸದಾನಂದ ಗೌಡ, ಎಚ್.ಎಂ. ಶೇಖರಯ್ಯಸ್ವಾಮಿ, ಮೂಗುತಿ ಸುರೇಶ್, ಹೂಗಾರ್ ಯೋಗೇಶ್, ಬಳೆಗಾರ ಪಂಪಾಪತಿ, ಕುಂಬಾರು ದೊಡ್ಡಪ್ಪ ಇದ್ದರು.