ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಇಲ್ಲಿನ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ (ಹಾಪ್‌ಕಾಮ್ಸ್) ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡರಾದ ರಾಘವಾಪುರ ನಾಗೇಶ್ ಹಾಗೂ ಉಪಾಧ್ಯಕ್ಷರಾಗಿ ಚಿಕ್ಕರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪಟ್ಟಣದ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ರಾಘವಾಪುರ ನಾಗೇಶ್ ಅಧ್ಯಕ್ಷ ಸ್ಥಾನಕ್ಕೆ, ಚಿಕ್ಕರಾಜು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇತರೆ ನಿರ್ದೇಶಕರಾರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ, ಸಹಕಾರ ಅಭಿವೃದ್ಧಿ ಅಧಿಕಾರಿ ಪದ್ಮನಾಭ ಅವರು ನೂತನ ಅಧ್ಯಕ್ಷರಾಗಿ ರಾಘವಾಪುರ ನಾಗೇಶ್, ಚಿಕ್ಕರಾಜು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು ಎಂದು ಘೋಷಿಸಿದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್ ಮಾತನಾಡಿ, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರು ನಾಗೇಶ್ ಹಾಗೂ ಚಿಕ್ಕರಾಜುರನ್ನು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ ಎಂದರು. ಹಾಪ್ ಕಾಮ್ಸ್ ಉದಯವಾಗಿ ಮೂರು ದಶಕಗಳಿಗೂ ಹೆಚ್ಚು ಕಾಲವಾಗಿದೆ. ಅನ್ವರ್ ಪಾಶ, ಮುನಿರಾಜು ಕಾಲದಲ್ಲಿ ಆರಂಭವಾದ ಹಾಪ್ ಕಾಮ್ಸ್ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರು ಸಂಘದ ಪ್ರಗತಿಗೆ ಶ್ರಮಿಸಬೇಕು ಎಂದರು. ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಎಸ್‌ಆರ್‌ಎಸ್ ರಾಜು, ನೂತನ ನಿರ್ದೇಶಕ ಗೋಪಾಲಪುರ ಜಿ.ಜಿ.ಮಲ್ಲಿಕಾರ್ಜುನಪ್ಪ, ಹಾಪ್ ಕಾಮ್ಸ್ ನೂತನ ಅಧ್ಯಕ್ಷ ರಾಘವಾಪುರ ನಾಗೇಶ್ ಮಾತನಾಡಿದರು.ಈ ಸಮಯದಲ್ಲಿ ಕಾಂಗ್ರೆಸ್ ಹಿರಿಯರಾದ ಸಾಹುಕಾರ್ ಕೆ.ಸಿ.ಸುಬ್ಬಣ್ಣ, ಮೈಮುಲ್ ಮಾಜಿ ಅಧ್ಯಕ್ಷ ಎನ್.ಮಹದೇವಪ್ಪ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಆಲತ್ತೂರು ಜಯರಾಂ, ಪುರಸಭೆ ಅಧ್ಯಕ್ಷ ಮಧು, ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಜಿ.ಮಡಿವಾಳಪ್ಪ, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಮೃತ್ಯುಂಜಯ, ಬಿ.ಎಂ.ಶಿವಮಾದಪ್ಪ, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ನೀಲಕಂಠಪ್ಪ, ಬೋರೇಗೌಡ, ಎಚ್.ಬಿ.ಶಿವಕುಮಾರ್, ಮುಖಂಡರಾದ ಬಿ.ಸಿ.ಮಹದೇವಸ್ವಾಮಿ, ಕಬ್ಬಹಳ್ಳಿ ಮಲ್ಲು, ರಾಘವಾಪುರ ಗೋವಿಂದರಾಜು, ಕಿಲಗೆರೆ ಶಿವಪ್ರಸಾದ್, ಶಂಭುಲಿಂಗಪ್ಪ, ಹಸಗೂಲಿಅಶೋಕ, ಕೆ.ಎಂ.ಮಹದೇವಸ್ವಾಮಿ, ಕೆ.ಜಿ.ಮಹೇಶ್, ನೂತನ ನಿರ್ದೇಶಕರಾದ ಕೆ.ಶಿವಸ್ವಾಮಿ, ಕೆ.ಬಸವಣ್ಣ, ಕೊಡಸೋಗೆ ಬಸವಣ್ಣ, ದೇವರಹಳ್ಳಿಮಹೇಶ್, ಹಂಗಳಪುರ ರೇವಣ್ಣ, ಸಂಘದ ಸಿಇಒ ಶ್ರೀಕಂಠಪ್ಪ ಹಲವರಿದ್ದರು.
ತಂದೆ ದಾರಿಯಲ್ಲಿ ಮಗ:ಹಾಪ್‌ಕಾಮ್ಸ್ ನೂತನ ಅಧ್ಯಕ್ಷ ರಾಘವಾಪುರ ನಾಗೇಶ್ ಅವರು ಹಿರಿಯ ಸಹಕಾರ ಧುರೀಣ, ಮೈಮುಲ್ ಮಾಜಿ ಅಧ್ಯಕ್ಷ ಎನ್.ಮಹದೇವಪ್ಪರ ಪುತ್ರ. ಎನ್.ಮಹದೇವಪ್ಪ ಮೈಮುಲ್ ಅಧ್ಯಕ್ಷ, ಮೈಸೂರು, ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಪ್ ಕಾಮ್ಸ್ ನೂತನ ಅಧ್ಯಕ್ಷ ರಾಘವಾಪುರ ನಾಗೇಶ್ ತಂದೆಯ ಹಾದಿಯಲ್ಲಿಯೇ ಸಹಕಾರ ಕ್ಷೇತ್ರದ ಮೊದಲ ಚುನಾವಣೆಯಲ್ಲಿ ಆಯ್ಕೆಯಾಗಿ, ಮೊದಲ ಅವಧಿಯಲ್ಲಿಯೇ ಅಧ್ಯಕ್ಷರಾಗಿದ್ದಾರೆ.