ಸಾರಾಂಶ
ಹಾವೇರಿ: ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ನಿಮಿತ್ತ ಮಂಗಳವಾರ ನಗರದ ಪ್ರಮುಖ ಬೀದಿಗಳಲ್ಲಿ ರಾಘವೇಂದ್ರ ಸ್ವಾಮಿಗಳ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಿತು.ನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೂರು ದಿನಗಳಿಂದ ಪೂರ್ವಾರಾಧನೆ, ಮಧ್ಯಾರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು. ಉತ್ತರಾರಾಧನೆ ನಿರ್ಮಾಲ್ಯ ವಿಸರ್ಜನೆ ಅಂಗವಾಗಿ ಮಂಗಳವಾರ ಬೆಳಗ್ಗೆಯಿಂದ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಗುರುಸ್ತುತಿ ಪಾರಾಯಣ, ರಾಘವೇಂದ್ರ ಸ್ವಾಮಿಗಳಿಗೆ ಅಲಂಕಾರ ಹಾಗೂ ಹೋಮ ಹವನಗಳು ನಡೆದವು. ಬಳಿಕ ಹಸ್ತೋದಕ ನೈವೇದ್ಯವನ್ನು ಸಮರ್ಪಿಸಲಾಯಿತು.ಬಳಿಕ ಶ್ರೀಮಠದಿಂದ ವಾದ್ಯ ವೈಭವಗಳೊಂದಿಗೆ ಆರಂಭವಾದ ರಾಘವೇಂದ್ರ ಸ್ವಾಮಿಗಳ ಮಹಾರಥೋತ್ಸವ ನಗರದ ಅಗ್ರಹಾರ ರೋಡ್, ಎಂಜಿ ರಸ್ತೆ, ನಗರಸಭೆ ಮುಂಭಾಗ, ಎಂ.ಎಂ ವೃತ್ತ, ಪಿ.ಬಿ. ರಸ್ತೆ, ತೇರುಬೀದಿ ಆಂಜನೇಯಸ್ವಾಮಿ ದೇವಸ್ಥಾನ ತಲುಪಿತು.
ಅಲ್ಲಿ ಪೂಜಾ ವಿವಿಧಾನಗಳು, ಮಂಗಳಾರತಿ ನಡೆದು ನಂತರ ರಾಮದೇವ ಗುಡಿ ಮುಖಾಂತರ ಶ್ರೀಮಠಕ್ಕೆ ಮರಳಿ ತಲುಪಿತು. ನಂತರ ಅನ್ನಪೂರ್ಣೇಶ್ವರಿ ಪೂಜೆಯನ್ನು ನೆರವೇರಿಸಿ, ಮಹಾಪ್ರಸಾದ ವಿತರಿಸಲಾಯಿತು. ಸಂಜೆವೇಳೆ ಸವತೋಭದ್ರ ಮಂಡಲ ಪೂಜೆ, ಬೆಳ್ಳಿ(ರಜತ) ರಥೋತ್ಸವ ಜರುಗಿದ ನಂತರ ಅಷ್ಟಾವಧಾನ ಮಹಾಮಂಗಳಾರತಿ ಶ್ರದ್ಧಾಭಕ್ತಿಯಿಂದ ನೆರವೇರಿದವು. ರಾಘವೇಂದ್ರ ಸ್ವಾಮಿಗಳ ನೂರಾರು ಭಕ್ತರು ಪಾಲ್ಗೊಂಡು ರಥೋತ್ಸವಕ್ಕೆ ಸಾಕ್ಷಿಯಾದರು.ನೇಕಾರ ಸಮುದಾಯದಿಂದ ಪ್ರತ್ಯೇಕ ಜಾತಿ ಗಣತಿರಾಣಿಬೆನ್ನೂರು: ನೇಕಾರ ಸಮುದಾಯದ ವತಿಯಿಂದ ರಾಜ್ಯ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಜಿಲ್ಲಾವಾರು ಪ್ರತ್ಯೇಕ ಜಾತಿ ಗಣತಿ ಸಮೀಕ್ಷೆ ಮಾಡಲು ನಮ್ಮದೇ ಆದ ಆ್ಯಪ್ ಸಿದ್ಧಪಡಿಸಿದ್ದು, ಇದರ ಮೂಲಕ ಸಮಾಜದವರು ತಮ್ಮ ಹಾಗೂ ತಮ್ಮ ಕುಟುಂಬದ ಮಾಹಿತಿ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಸೋಮಶೇಖರ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಇತ್ತೀಚೆಗೆ ನಡೆಸಿದ ಜಾತಿ ಗಣತಿ ವರದಿಯು ಅವೈಜ್ಞಾನಿಕವಾಗಿದ್ದು, ಅದರಲ್ಲಿನ ಅಂಕಿ- ಅಂಶಗಳು ಪರಿಪೂರ್ಣವಾಗಿಲ್ಲದ ಕಾರಣ ಅದನ್ನು ನಮ್ಮ ಸಮಾಜವು ವಿರೋಧಿಸುತ್ತದೆ. ವಾಸ್ತವವಾಗಿ ರಾಜ್ಯದಲ್ಲಿ ನೇಕಾರ ಸಮುದಾಯದ ಜನಸಂಖ್ಯೆಯು 6ನೇ ಸ್ಥಾನದಲ್ಲಿದೆ.
ಹೀಗಿದ್ದರೂ ನೇಕಾರ ಸಮುದಾಯಕ್ಕೆ ಸೇರಿದ ಯಾವುದೇ ಶಾಸಕರು ರಾಜ್ಯದಲ್ಲಿಲ್ಲ. ಈ ನಿಟ್ಟಿನಲ್ಲಿ ನೇಕಾರ ಸಮುದಾಯದ ಎಲ್ಲ ಮಠಾಧೀಶರು, ಒಳಪಂಗಡಗಳು ಸೇರಿ ರಾಜ್ಯ ಸರ್ಕಾರಕ್ಕೆ ಇದರ ಬಗ್ಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಲು ಜಾತಿಗಣತಿ ಮುಖ್ಯವಾಗುತ್ತದೆ. ನಮ್ಮ ಆ್ಯಪ್ ಮೂಲಕ ನೇಕಾರ ಸಮುದಾಯಗಳ ನಿಖರವಾದ ಅಂಕಿ- ಅಂಶ ತೆಗೆದುಕೊಂಡು ದೊಡ್ಡ ಮಟ್ಟದಲ್ಲಿ ಸಮೀಕ್ಷೆ ಮಾಡಿ ಅದನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಇದಲ್ಲದೆ ಕೇಂದ್ರ ಸರ್ಕಾರಕ್ಕೂ ನಿಯೋಗ ತೆಗೆದುಕೊಂಡು ಮನವಿ ಸಲ್ಲಿಸಲಾಗುವುದು ಎಂದರು.ಪದ್ಮಸಾಲಿ ಸಮಾಜದ ಪ್ರಭುಲಿಂಗ ಸ್ವಾಮಿಗಳು, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ, ಡಾ. ಬಸವರಾಜ ಕೇಲಗಾರ, ಹೇಮಲತಾ, ವಿಠ್ಠಲ ಎಡಕೆ, ರಮೇಶ ಗುತ್ತಲ, ದಯಾನಂದ ಚಂಡಿಗಡ, ಬಸವರಾಜ ಲಕ್ಷ್ಮೇಶ್ವರ ಸುದ್ದಿಗೋಷ್ಠಿಯಲ್ಲಿದ್ದರು.